ADVERTISEMENT

100 ಎಕರೆ ಅರಣ್ಯ ಪ್ರದೇಶ ನಾಶ: ಭೂಮಿ ಒತ್ತುವರಿ, ಮಣ್ಣು ಗಣಿಗಾರಿಕೆಗೆ ಸಂಚು

ದುರಗಪ್ಪ ಪಿ.ಕೆಂಗನಿಂಗಪ್ಪನವರ
Published 14 ಮಾರ್ಚ್ 2025, 0:30 IST
Last Updated 14 ಮಾರ್ಚ್ 2025, 0:30 IST
ಅರಣ್ಯದಲ್ಲಿದ್ದ ಮರಗಳನ್ನು ಕಡಿದು ಹಾಕಿರುವುದು
ಅರಣ್ಯದಲ್ಲಿದ್ದ ಮರಗಳನ್ನು ಕಡಿದು ಹಾಕಿರುವುದು   

ಗುತ್ತಲ (ಹಾವೇರಿ): ಇಲ್ಲಿಯ ಹಾವನೂರು ಗ್ರಾಮಕ್ಕೆ ಹೊಂದಿಕೊಂಡ 100 ಎಕರೆ ಅರಣ್ಯ ಪ್ರದೇಶದಲ್ಲಿದ್ದ ಗಿಡ, ಮರಗಳನ್ನು ಕಡಿದು ನಾಶಪಡಿಸಲಾಗಿದ್ದು, ಇದಕ್ಕೆ ಪರಿಸರವಾದಿಗಳು, ಕುರಿಗಾಹಿಗಳಿಂದ ಆಕ್ರೋಶ ವ್ಯಕ್ತವಾಗಿದೆ.

ಗುತ್ತಲ, ಹರಳಹಳ್ಳಿ ಮತ್ತು ಹಾವನೂರ ಗ್ರಾಮಗಳ ನಡುವಿನ ಸರ್ವೆ ನಂಬರ್ 410, 411ರಲ್ಲಿ 200 ಎಕರೆ ಅರಣ್ಯ ಪ್ರದೇಶವಿದೆ. ಈ ಪ್ರದೇಶದಲ್ಲಿ ನೂರಾರು ಮರಗಳಿದ್ದು, ಇವುಗಳನ್ನು ರಾತ್ರೋರಾತ್ರಿ ಕಡಿದು ಹಾಕಲಾಗಿದೆ.

ಈ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡ ಜಮೀನಿನಲ್ಲಿ ಕೆಲ ಸ್ಥಳೀಯರು ಹಲವು ವರ್ಷಗಳಿಂದ ಉಳುಮೆ ಮಾಡುತ್ತಿದ್ದು, ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಿಕೊಳ್ಳಲು ಹೀಗೆ ಕೃತ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ADVERTISEMENT

‘ಹರಳಹಳ್ಳಿ ಮತ್ತು ಹಾವನೂರ ಗ್ರಾಮಗಳ ಕೆಲವರು, ಅರಣ್ಯ ಭೂಮಿಯನ್ನು ಕಬಳಿಸಲು ಕೃತ್ಯ ಎಸಗಿದ್ದಾರೆ. ಅವರ ಕೃತ್ಯದಿಂದ ಅರಣ್ಯ ಸಂಪತ್ತಿಗೆ ಧಕ್ಕೆಯಾಗಿದೆ. 200 ಎಕರೆ ಪ್ರದೇಶದಲ್ಲಿ 100 ಎಕರೆ ಪ್ರದೇಶದಲ್ಲಿದ್ದ ಮರಗಳು ಮಾಯವಾಗಿವೆ. ಅರಣ್ಯ ನಾಶ ಮಾಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ, ಮುಂಬರುವ ದಿನಗಳಲ್ಲಿ ಅರಣ್ಯ ಭೂಮಿ ಸಂಪೂರ್ಣ ನಾಶವಾಗಲಿದೆ’ ಎಂದು ಸ್ಥಳೀಯ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದರು.

‘ಈ ಅರಣ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ನವಿಲುಗಳಿವೆ. ಅರಣ್ಯ ನಾಶದಿಂದ ಅವುಗಳ ವಾಸಕ್ಕೆ ಧಕ್ಕೆಯಾಗಿದೆ. ಕುರಿಗಳು, ಜಾನುವಾರುಗಳು ಮೇಯಿಸುವುದು ಕಷ್ಟವಾಗಲಿದೆ’ ಎಂದು ಕುರಿಗಾಹಿಗಳು ಅಳಲು ತೋಡಿಕೊಂಡರು.

ಮಣ್ಣು ಗಣಿಗಾರಿಕೆ: ‘ಅಧಿಕಾರಿಗಳ ನಿರ್ಲಕ್ಷ್ಯದಿಂದ ಅರಣ್ಯ ಭೂಮಿಯಲ್ಲಿ ಉಳುಮೆ ನಡೆದಿದೆ. ಅರಣ್ಯದಲ್ಲಿ ಪ್ರತಿ ದಿನ ರಾತ್ರಿ ವೇಳೆಿ ಮಣ್ಣು ಗಣಿಗಾರಿಕೆ ನಡೆಯುತ್ತಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಮಣ್ಣು ಗಣಿಗಾರಿಕೆ ನಿಲ್ಲಿಸಿ ಅರಣ್ಯ ಭೂಮಿ ರಕ್ಷಿಸಬೇಕು‘ ಎಂದು ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ತಿಳಿಸಿದರು. 

‘ಯಾವುದೇ ಕಾರಣಕ್ಕೂ ಅರಣ್ಯ ಭೂಮಿ ಒತ್ತುವರಿಗೆ ಅವಕಾಶ ನೀಡಬಾರದು. ಅರಣ್ಯ ನಾಶ ಪಡಿಸುವವರ ವಿರುದ್ಧ ಕ್ರಮ ಜರುಗಿಸಬೇಕು. ನಿರ್ಲಕ್ಷ್ಯ ವಹಿಸಿದ್ದ ಅಧಿಕಾರಿಗಳ ವಿರುದ್ಧವೂ ಕ್ರಮ ಆಗಬೇಕು. ಅರಣ್ಯವನ್ನು ಅಳತೆ ಮಾಡಿಸಿ ತಂತಿಬೇಲಿ ಹಾಕಬೇಕು. ಇಲ್ಲದಿದ್ದರೆ, ಅಧಿಕಾರಿಗಳ ವಿರುದ್ದ ಹೋರಾಟ ಮಾಡಲಾಗುವುದು’ ಎಂದು ಅವರು ಹೇಳಿದರು.

ಅರಣ್ಯದಲ್ಲಿದ್ದ ಗಿಡಗಳನ್ನು ಕಡಿದು ಹಾಕಿರುವುದು
ಅರಣ್ಯ ಭೂಮಿಯಲ್ಲಿರುವ ಮರಗಳನ್ನು ನಾಶ ಪಡಿಸುವುದು ಪರಿಸರಕ್ಕೆ ನಷ್ಟ ಮಾಡಿದಂತೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಕ್ರಮ ಜರುಗಿಸಲಾಗುವುದು
–ಶರಣಮ್ಮ, ತಹಶೀಲ್ದಾರ್ ಹಾವೇರಿ 
ಅರಣ್ಯಭೂಮಿ ಒತ್ತುವರಿಯಾದ ವಿಚಾರ ಗಮನಕ್ಕೆ ಬಂದಿಲ್ಲ. ಕೂಡಲೆ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಲಾಗುವುದು.
–ವೈ.ಆರ್.ನದಾಫ್, ವಲಯ ಅರಣ್ಯ ಅಧಿಕಾರಿ ಹಾವೇರಿ 
ಅರಣ್ಯವನ್ನು ನಾಶ ಮಾಡಿದ ಬಗ್ಗೆ ಅಧಿಕಾರಿಗಳ ಮೂಲಕ ವರದಿ ಪಡೆದು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು
–ಈಶ್ವರ ಖಂಡ್ರೆ, ಅರಣ್ಯ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.