ADVERTISEMENT

ಕೊರೊನಾ ನಿಯಂತ್ರಣ ಕಾರ್ಯಪಡೆ ರಚನೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2020, 12:51 IST
Last Updated 8 ಏಪ್ರಿಲ್ 2020, 12:51 IST

ಹಾವೇರಿ: ‘ಜಿಲ್ಲೆಯ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ಎಲ್ಲ ಗ್ರಾಮಗಳಲ್ಲೂ ಗ್ರಾಮ ಮಟ್ಟದ ಕೊರೊನಾ ನಿಯಂತ್ರಣ ಕಾರ್ಯಪಡೆ ರಚಿಸಿ ಜನಸಾಮಾನ್ಯರಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ’ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ತಿಳಿಸಿದರು.

ಬುಧವಾರ ಮಾಧ್ಯಮಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು, ಗ್ರಾಮ ಲೆಕ್ಕಾಧಿಕಾರಿಗಳು, ಗ್ರಾಮದ ಬೀಟ್ ಪೊಲೀಸರು, ಗ್ರಾಮ ಆರೋಗ್ಯ ಸಿಬ್ಬಂದಿ, ಅಂಗನವಾಡಿ, ಆಶಾ ಕಾರ್ಯಕರ್ತರು, ನೋಂದಾಯಿತ ಸ್ಥಳೀಯ ವೈದ್ಯರು ಹಾಗೂ ಗ್ರಾಮ ಪಂಚಾಯಿತಿ ಅಧಿಕಾರಿಗಳನ್ನು ಒಳಗೊಂಡ ಕೊರೊನಾ ನಿಯಂತ್ರಣ ಕಾರ್ಯಪಡೆ ರಚಿಸಲಾಗಿದೆ. ಕೊರೊನಾ ಸೈನಿಕರಿಗೆ ಮಾಸ್ಕ್‌ಗಳನ್ನು ವಿತರಿಸಲಾಗಿದೆ. ಜೊತೆಗೆ ಸ್ಯಾನಿಟೈಸರ್‌ಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.

‘ಗ್ರಾಮ ಮಟ್ಟದ ಕಾರ್ಯಪಡೆಯ ಸದಸ್ಯರು ಹಳ್ಳಿಗಳಿಗೆ ಬರುವ ಹೊರ ರಾಜ್ಯ ಮತ್ತು ವಿದೇಶದಿಂದ ಬಂದವರ ಮಾಹಿತಿಯನ್ನು ಒದಗಿಸುವುದು, ಅವರನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆದುಕೊಂಡು ಹೋಗಿ ಥರ್ಮಲ್ ಸ್ಕ್ರೀನಿಂಗ್ ಮಾಡಿಸುವುದು, ಗ್ರಾಮಗಳಲ್ಲಿರುವ 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ಕೊರೊನಾ ಕುರಿತು ತಿಳಿವಳಿಕೆ ನೀಡುವುದು, ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸುವಂತೆ ಅರಿವು ಮೂಡಿಸಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಕೋವಿಡ್ ಹಾಸ್ಪಿಟಲ್:ಜಿಲ್ಲಾ ಆಸ್ಪತ್ರೆಯಲ್ಲಿ ಪ್ರತ್ಯೇಕವಾದ 100 ಹಾಸಿಗೆಗಳ ಕೋವಿಡ್ -19 ವಿಶೇಷ ಆಸ್ಪತ್ರೆ ರೂಪಿಸಲಾಗುವುದು. ಪ್ರತಿ ತಾಲ್ಲೂಕಿನಲ್ಲೂ 10 ಹಾಸಿಗೆಯ ಪ್ರತ್ಯೇಕ ವ್ಯವಸ್ಥೆ ಮಾಡಲಾಗುವುದು ಹಾಗೂ ಕೇಂದ್ರೀಕೃತ ವೆಂಟಿಲೇಷನ್ ಅಳವಡಿಸಿ ಎಲ್ಲ ಹಾಸಿಗೆಗಳಿಗೂ ಆ್ಯಕ್ಸಿಜನ್‌ ಸಪ್ಲೈ ಆಗುವಂತೆ ವ್ಯವಸ್ಥೆ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಹತ್ತು ವೆಂಟಿಲೇಷನ್‍ಗಳಿದ್ದು, 20 ವೆಂಟಿಲೇಷನ್ ಖರೀದಿಗೆ ಕ್ರಮವಹಿಸಲಾಗುತ್ತಿದೆ. ಹಾವೇರಿ ನಗರದಲ್ಲಿ ಹೆಚ್ಚುವರಿಯಾಗಿ ಜಿಲ್ಲೆಯ ಆಸ್ಪತ್ರೆಯ ಪಕ್ಕದಲ್ಲಿರುವ ಹೆಸ್ಕಾಂ ಕಲ್ಯಾಣ ಮಂಟಪವನ್ನು ಕೋವಿಡ್-19 ಐಸೋಲೆಷನ್ ವಾರ್ಡಿಗ್ ಬಳಸಿಕೊಳ್ಳಲು ಉದ್ದೇಶಿಸಲಾಗಿದ ಎಂದು ತಿಳಿಸಿದರು.

ಎ.ಟಿ.ಎಂ.ಗಳಲ್ಲಿ ಎಲ್ಲ ಸುರಕ್ಷತಾ ಕ್ರಮಗಳನ್ನು ಅನುಸರಿಸಲು ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಫಲಾನುಭವಿಗಳಿಂದ ಸಾಲದ ಕಂತುಗಳಿಗೆ ಹಣ ಜಮಾ ಮಾಡಿಕೊಳ್ಳದಂತೆ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಉಜ್ವಲ ಸಿಲಿಂಡರ್‌ ಫಲಾನುಭವಿಗಳಿಗೆ ಸಿಲಿಂಡರ್‌ ಹಣವನ್ನು ಅವರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು. ಈ ಹಣ ಡ್ರಾ ಮಾಡಿಕೊಂಡು ವಿತರಕರಿಗೆ ಹಣ ಪಾವತಿಸಿ ಸಿಲಿಂಡರ್‌ ಪಡೆಯಬೇಕು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.