ADVERTISEMENT

ಸೈಕಲ್‌ ನಿತ್ಯ ಸಂಗಾತಿಯಾಗಿರಲಿ: ಶಾಸಕ ನೆಹರು ಓಲೇಕಾರ ಸಲಹೆ

ಸೈಕ್ಲೋತ್ಸವದಲ್ಲಿ ಪಾಲ್ಗೊಂಡ 600 ಸೈಕ್ಲಿಸ್ಟ್‌ಗಳು

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2022, 12:35 IST
Last Updated 13 ಮಾರ್ಚ್ 2022, 12:35 IST
ಹಾವೇರಿ ಸೈಕ್ಲಿಂಗ್‌ ಕ್ಲಬ್‌ ಆಶ್ರಯದಲ್ಲಿ ಭಾನುವಾರ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ 2ನೇ ಸೈಕ್ಲೋತ್ಸವಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮತ್ತು ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು  –ಪ್ರಜಾವಾಣಿ ಚಿತ್ರ 
ಹಾವೇರಿ ಸೈಕ್ಲಿಂಗ್‌ ಕ್ಲಬ್‌ ಆಶ್ರಯದಲ್ಲಿ ಭಾನುವಾರ ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಏರ್ಪಡಿಸಿದ್ದ 2ನೇ ಸೈಕ್ಲೋತ್ಸವಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಮತ್ತು ಶಾಸಕ ನೆಹರು ಓಲೇಕಾರ ಚಾಲನೆ ನೀಡಿದರು  –ಪ್ರಜಾವಾಣಿ ಚಿತ್ರ    

ಹಾವೇರಿ: ‘ಸೈಕ್ಲಿಂಗ್‌ ಚಟುವಟಿಕೆಯು ಆರೋಗ್ಯ ರಕ್ಷಣೆ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪ್ರಧಾನ ಪಾತ್ರವಹಿಸುತ್ತದೆ. ಹೀಗಾಗಿ ಸೈಕಲ್‌ ನಿಮ್ಮ ನಿತ್ಯ ಸಂಗಾತಿಯಾಗಿರಲಿ’ ಎಂದು ಶಾಸಕ ನೆಹರು ಓಲೇಕಾರ ಹೇಳಿದರು.

ನಗರದ ಮುನ್ಸಿಪಲ್‌ ಹೈಸ್ಕೂಲ್‌ ಮೈದಾನದಲ್ಲಿ ಹಾವೇರಿ ಸೈಕ್ಲಿಂಗ್‌ ಕ್ಲಬ್‌ ಆಶ್ರಯದಲ್ಲಿಭಾನುವಾರ ಏರ್ಪಡಿಸಿದ್ದ 2ನೇ ಸೈಕ್ಲೋತ್ಸವದ ವೇದಿಕೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

276 ಇದ್ದ ಸೈಕ್ಲಿಸ್ಟ್‌ಗಳ ಸಂಖ್ಯೆ ಈ ಬಾರಿ 600ಕ್ಕೆ ಏರಿಕೆಯಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ವಿದೇಶಗಳಲ್ಲಿ ಸೈಕಲ್‌ ಮಹತ್ವ ಅರಿತು, ಕಚೇರಿಗಳಿಗೆ ಹೋಗಲು ಸೈಕಲ್‌ ಬಳಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಹಾವೇರಿ ನಗರ ಮತ್ತು ಗ್ರಾಮೀಣ ಜನರು ಸಹ 10 ಕಿ.ಮೀ. ಒಳಗೆ ಪ್ರಯಾಣ ಮಾಡಲು ಸೈಕಲ್‌ ಬಳಸಿ ಎಂದು ಸಲಹೆ ನೀಡಿದರು.

ADVERTISEMENT

ಶಾಲೆ ಮತ್ತು ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಬೈಕ್‌ಗಳನ್ನು ಬಿಟ್ಟು ಸೈಕಲ್‌ಗಳನ್ನೇ ಬಳಸಿ. ಇದರಿಂದ ನಿಮ್ಮ ಆರೋಗ್ಯ ಸುಧಾರಿಸುತ್ತದೆ. ಪೋಷಕರು ಕೂಡ ಮಕ್ಕಳಿಗೆ ಬೈಕ್‌ ಬದಲು ಸೈಕಲ್‌ ಕೊಡಿಸಿ ಎಂದು ಕಿವಿಮಾತು ಹೇಳಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಮಾತನಾಡಿ, ಬೆಂಗಳೂರು ಸೇರಿದಂತೆ ಮೆಟ್ರೊ ಪಾಲಿಟನ್‌ ಸಿಟಿಗಳಲ್ಲಿ ಸೈಕ್ಲಿಂಗ್‌ ಚಟುವಟಿಕೆ ಸದಾ ನಡೆಯುತ್ತಿರುತ್ತದೆ. ಈಗ ಹಾವೇರಿ ಜಿಲ್ಲೆಯಲ್ಲೂ ಸೈಕ್ಲಿಂಗ್‌ ಆರಂಭಗೊಂಡಿರುವುದು ಖುಷಿಯ ವಿಚಾರ. ಸೈಕಲ್‌ ಬಳಕೆ ಒಂದು ದಿನಕ್ಕೆ ಸೀಮಿತವಾಗದಿರಲಿ ಎಂದರು.

ಸೈಕ್ಲೋತ್ಸವಕ್ಕೆ ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಚಾಲನೆ ನೀಡಿದರು. ಎಸ್ಪಿ ಹನುಮಂತರಾಯ, ಎಎಸ್ಪಿ ವಿಜಯಕುಮಾರ ಸಂತೋಷ, ಡಿವೈಎಸ್ಪಿ ಶಂಕರ ಮಾರಿಹಾಳ,ಸಿಪಿಐ ಮುರುಗೇಶ ಚಿನ್ನಣ್ಣನವರ ಸೈಕ್ಲಿಂಗ್‌ ಮಾಡುವ ಮೂಲಕ ಗಮನ ಸೆಳೆದರು.ಸೈಕ್ಲಿಂಗ್‌ ಕ್ಲಬ್‌ ವತಿಯಿಂದ ಟೀ–ಶರ್ಟ್‌, ಉಪಾಹಾರ ನೀಡಲಾಯಿತು.

ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಬಿಇಒ ಎಂ.ಎಚ್‌.ಪಾಟೀಲ, ಸೈಕ್ಲಿಂಗ್ ಕ್ಲಬ್‍ ಅಧ್ಯಕ್ಷ ರಾಮಮೋಹನ ರಾವ್, ಕಾರ್ಯದರ್ಶಿ ಡಾ.ಶ್ರವಣ ಪಂಡಿತ, ಡಾ.ನೇತ್ರಾವತಿ ಮತ್ತು ಕ್ಲಬ್‌ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.