ಸಾಂದರ್ಭಿಕ ಚಿತ್ರ
ಹಿರೇಕೆರೂರು: ‘50 ವರ್ಷಗಳ ಹಿಂದೆ ಕಡಿಮೆ ಖರ್ಚಿನಲ್ಲಿ ಕೃಷಿಕರ ಬದುಕು ಸಾಗುತ್ತಿತ್ತು. ಹೈಬ್ರಿಡ್ ಕೃಷಿ ಆರಂಭವಾದಾಗಿನಿಂದ ಕೃಷಿಯ ಖರ್ಚು ಹೆಚ್ಚಾಗಿ, ರೈತರ ಸಾಲ ದ್ವಿಗುಣವಾಗುತ್ತಿದೆ’ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೆರ ಹೇಳಿದರು.
ಹಾವೇರಿ ಜಿಲ್ಲೆಯ 14ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಶುಕ್ರವಾರ ನಡೆದ ‘ಹೊನ್ನ ಬಿತ್ತೇವು ಜಗಕೆಲ್ಲʼ ವಿಚಾರ ಗೋಷ್ಠಿಯಲ್ಲಿ ಅವರು, ರೈತರ ಸಮಸ್ಯೆಗಳನ್ನು ತೆರೆದಿಟ್ಟು ಪರಿಹಾರಕ್ಕಾಗಿ ಆಗ್ರಹಿಸಿದರು.
‘ಕಳಪೆ ಬೀಜ, ರಸಗೊಬ್ಬರ, ಕ್ರಿಮಿನಾಶಕಗಳಿಂದ ಕೃಷಿಯ ಖರ್ಚು ಹೆಚ್ಚಾಗಿದೆ. ದೇಶದ ರಾಜಕೀಯ ಪಕ್ಷಗಳು, ರೈತರನ್ನು ಕಡೆಗಣಿಸಿವೆ. ಉದ್ದಿಮೆದಾರರ ಸಾಲಗಳನ್ನು ಮನ್ನಾ ಮಾಡುತ್ತಿರುವ ಸರ್ಕಾರಗಳು, ರೈತರ ಸಾಲವನ್ನು ಮನ್ನಾ ಮಾಡುತ್ತಿಲ್ಲ. ರೈತ ವಿರೋಧಿ ಧೋರಣೆ ಅನುಸರಿಸುತ್ತಿದೆ’ ಎಂದು ತಿಳಿಸಿದರು.
‘ಸಮಾಜದ ಎಲ್ಲ ರಂಗಗಳಿಗಿಂತಲೂ ಕೃಷಿರಂಗ, ದೇಶದ ಅಸ್ಥಿತ್ವವನ್ನು ನಿರ್ಧಾರ ಮಾಡುವ ರಂಗವಾಗಿದೆ. ಆದರೆ, ಇಂದು ರೈತರು ಬೆಳೆದ ಬೆಳೆಗಳು ಮಳೆಯ ಏರಿಳಿತಕ್ಕೆ ಸಿಲುಕಿ ಹಾನಿಯಾಗುತ್ತಿದೆ. ರೈತರು ಸಾಲದ ಸುಳಿಯಿಂದ ಬದುಕುವ ಆಸೆಯನ್ನೇ ಕಳೆದುಕೊಳ್ಳುವ ಹಂತಕ್ಕೆ ಬರುತ್ತಿದ್ದಾರೆ’ ಎಂದು ಹೇಳಿದರು.
ಅಖಿಲ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಹನುಮಂತಪ್ಪ ದೀವಿಗಿಹಳ್ಳಿ ಮಾತನಾಡಿ, ‘ಕನ್ನಡ ನಾಡು-ನುಡಿ ಉಳಿವಿಗಾಗಿ ಇಂದು ಹೋರಾಟಗಳು ನಡೆಯುತ್ತಿದೆ. ಆದರೆ, ನಾವು ನಮ್ಮತನವನ್ನು ಬಿಟ್ಟು ಇಂಗ್ಲಿಷ್ ವ್ಯಾಮೋಹಕ್ಕೆ ಒಳಗಾಗುತ್ತಿದ್ದೇವೆ. ದೇಶಕ್ಕೆ ಅನ್ನ ನೀಡುವ ರೈತ ಸಹ ಸಂಕಷ್ಟಕ್ಕೆ ಸಿಲುಕಿದ್ದಾನೆ. ರೈತನ ಬದುಕಿನ ದುಸ್ಥಿತಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯಗಳು ನಡೆಯಬೇಕಿದೆ’ ಎಂದರು.
ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ ಸಿದ್ದನಗೌಡ ಪಾಟೀಲ, ‘ರೈತರು ಹಾಗೂ ರೈತರ ಮಕ್ಕಳಿಗೆ ಕನ್ಯೆ ಸಿಗುತ್ತಿಲ್ಲ. ಇದರಿಂದಾಗಿ ಜೀವನಪೂರ್ತಿ ಬ್ರಹ್ಮಚಾರಿಯಾಗಿ ಉಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ’ ಎಂದರು.
‘ಕೃಷಿಯು ಪ್ರಾಮುಖ್ಯತೆ ಕಳೆದುಕೊಳ್ಳುತ್ತಿದೆ. ತಾನು ಬೆಳೆದ ಬೆಳೆಗೆ ದಲ್ಲಾಳಿಗಳು ಬೆಲೆ ನಿಗದಿ ಮಾಡುವ ಪದ್ದತಿಯಿಂದ ರೈತ ಹೈರಾಣಾಗಿ, ಆತ್ಮಹತ್ಯೆಯಂಥ ಕೆಟ್ಟ ನಿರ್ಧಾರ ತೆಗೆದುಕೊಳ್ಳುತ್ತಿದ್ದಾನೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.