ADVERTISEMENT

ಹಾವೇರಿ: ಸೋರುತಿಹುದು ಗಾಂಧೀಜಿ ಭೇಟಿ ನೀಡಿದ್ದ ಶತಮಾನದ ‘ಮುನ್ಸಿಪಲ್’ ಶಾಲೆ

133 ವರ್ಷದ ಹೈಸ್ಕೂಲ್‌ನ ಸಂಭ್ರಮಕ್ಕಿಲ್ಲ ಸಮಾರಂಭ * ಸಾಧಕರಿಗೆ ಶಿಕ್ಷಣ ನೀಡಿರುವ ವಿದ್ಯಾದೇಗುಲ

ಸಂತೋಷ ಜಿಗಳಿಕೊಪ್ಪ
Published 28 ಜುಲೈ 2025, 3:06 IST
Last Updated 28 ಜುಲೈ 2025, 3:06 IST
ಹಾವೇರಿ ಮುನ್ಸಿಪಲ್ ಹೈಸ್ಕೂಲ್ ಕಟ್ಟಡದ ಎದುರು ಮೈದಾನದಲ್ಲಿ ನೀರು ನಿಂತಿರುವುದು
ಹಾವೇರಿ ಮುನ್ಸಿಪಲ್ ಹೈಸ್ಕೂಲ್ ಕಟ್ಟಡದ ಎದುರು ಮೈದಾನದಲ್ಲಿ ನೀರು ನಿಂತಿರುವುದು   

ಹಾವೇರಿ: ಅಂದದ ಸುಣ್ಣ– ಬಣ್ಣ ಕಾಣದೇ ಮಾಸಿರುವ ಕಟ್ಟಡ. ಆಗಾಗ ಹಾರಿ ಹೋಗುವ ಹೆಂಚುಗಳು. ಮಳೆ ಬಂದರೆ ಸೋರುವ ಕೆಲ ಕೊಠಡಿಗಳು. ನೀರು ಜಿನುಗಿ ಸಡಿಲವಾಗುತ್ತಿರುವ ಗೋಡೆಗಳು. ಭದ್ರತೆ ಕೊರತೆಯಿಂದ ಆಗಾಗ ನಡೆಯುವ ಕಳ್ಳತನಗಳು...

ನಗರದಲ್ಲಿರುವ ಶತಮಾನ ಕಂಡ ಮುನ್ಸಿಪಲ್ ಹೈಸ್ಕೂಲ್ ಶಾಲೆಯ ಸದ್ಯದ ಸ್ಥಿತಿಯಿದು. 1892ರಲ್ಲಿ ಪ್ರಾರಂಭಗೊಂಡ ಈ ಶಾಲೆ 133 ವರ್ಷಗಳನ್ನು ಪೂರೈಸಿದ್ದು, ಇಂದಿಗೂ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಸಾಹಿತಿಗಳು, ಸರ್ಕಾರಿ ನೌಕರರು, ಶಿಕ್ಷಕರು, ಪೊಲೀಸರು, ಯೋಧರು, ರಾಜಕಾರಣಿಗಳು ಹಾಗೂ ಹಲವು ಕ್ಷೇತ್ರಗಳ ಸಾಧಕರು ವಿದ್ಯಾಭ್ಯಾಸ ಮಾಡಿದ್ದ ಈ ಶಾಲೆ, ಇಂದು ಶತಮಾನೋತ್ಸವದ ಸಮಾರಂಭವಿಲ್ಲದೇ ದಿನದೂಡುತ್ತಿದೆ.

ಹಾವೇರಿ ನಗರಸಭೆ ಅಧೀನದಲ್ಲಿರುವ ಈ ಮುನ್ಸಿಪಲ್ ಹೈಸ್ಕೂಲ್‌ನಲ್ಲಿ ಪ್ರಸ್ತುತ 6ರಿಂದ 10ನೇ ತರಗತಿಯವರೆಗೆ 375 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ಶಾಲೆಯಲ್ಲಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳ ನೆಚ್ಚಿನ ಶಾಲೆಯಾಗಿ ಗುರುತಿಸಿಕೊಂಡಿದೆ. ಆದರೆ, ಮೂಲ ಸೌಕರ್ಯ ಹಾಗೂ ಇತರೆ ಸೌಲಭ್ಯಗಳಿಂದ ಶಾಲೆ ವಂಚಿತವಾಗಿದೆ.

ADVERTISEMENT

ಮುನ್ಸಿಪಲ್ ಹೈಸ್ಕೂಲ್ ನಿರ್ವಹಣೆ ಹಾಗೂ ಮೂಲ ಸೌಕರ್ಯಗಳ ಅಭಿವೃದ್ಧಿ ಜವಾಬ್ದಾರಿ ನಗರಸಭೆಯದ್ದಾಗಿದೆ. ಆದರೆ, ಶಿಕ್ಷಕರಿಗೆ ಹಾಗೂ ಇತರೆ ಸಿಬ್ಬಂದಿಗೆ ಸರ್ಕಾರದಿಂದ ವೇತನ ಲಭ್ಯವಾಗುತ್ತಿದೆ. ಖಾಸಗಿ ಶಾಲೆಗಳು ಹೆಚ್ಚಾಗಿರುವ ಇಂದಿನ ದಿನಗಳಲ್ಲಿ, ಅವುಗಳ ಜೊತೆ ಸ್ಪರ್ಧೆಯೊಡುತ್ತಲೇ ಮುನ್ಸಿಪಲ್ ಹೈಸ್ಕೂಲ್‌ ಪ್ರಗತಿ ಸಾಧಿಸುತ್ತಿದೆ. ಆದರೆ, ಸಮಸ್ಯೆಗಳನ್ನು ಬಗೆಹರಿಸುವಲ್ಲಿ ನಗರಸಭೆಯಿಂದ ತಕ್ಕಮಟ್ಟಿಗೆ ಸ್ಪಂದನೆ ಸಿಗುತ್ತಿಲ್ಲವೆಂಬ ಆರೋಪವಿದೆ.

ಮಹಾತ್ಮ ಗಾಂಧೀಜಿ ಅವರು 1934ರ ಮಾರ್ಚ್ 1ರಂದು ಹಾವೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮುನ್ಸಿಪಲ್ ಶಾಲೆಗೂ ಬಂದಿದ್ದರು. ರವೀಂದ್ರನಾಥ ಟ್ಯಾಗೋರ್ ಅವರ ಭಾವಚಿತ್ರವನ್ನು ಅನಾವರಣಗೊಳಿಸಿ, ಶಾಲೆಗೆ ಉಡುಗೊರೆಯಾಗಿ ನೀಡಿದ್ದರು. ಗಾಂಧೀಜಿ ಭೇಟಿ ನೆನಪಿನಲ್ಲಿ ನಿರ್ಮಿಸಿದ್ದ ಗಾಂಧಿ ಕಟ್ಟೆಯೂ ಕಣ್ಮರೆಯಾಗುವ ಸ್ಥಿತಿಯಲ್ಲಿದೆ.

ಜಿಲ್ಲೆಯ ಗ್ರಾಮೀಣ ಭಾಗದ ಆರ್ಥಿಕವಾಗಿ ಹಿಂದುಳಿದ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿ ಈ ಶಾಲೆಯಲ್ಲಿ ಕಲಿಯುತ್ತಿದ್ದಾರೆ. 133 ವರ್ಷ ಪೂರೈಸುತ್ತಿರುವ ಶಾಲೆಯ ಶತಮಾನೋತ್ಸವ ಸಮಾರಂಭವನ್ನು ವಿಜೃಂಭಣೆಯಿಂದ ಆಚರಿಸುವಂತೆ ನಗರದ ಜನರು ಒತ್ತಾಯಿಸುತ್ತಿದ್ದಾರೆ. ಆದರೆ, ನಗರಸಭೆ ಮಾತ್ರ ಸಮಾರಂಭ ಮಾಡುವುದಾಗಿ ಸಾಮಾನ್ಯ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಮೌನವಾಗಿದೆ.

‘ಮುನ್ಸಿಪಲ್ ಹೈಸ್ಕೂಲ್, ಹಾವೇರಿಯ ಹೆಮ್ಮೆಯ ಶಾಲೆ. ಈ ಶಾಲೆಯ ಶತಮಾನೋತ್ಸವ ಸಮಾರಂಭ ಏರ್ಪಡಿಸಬೇಕು’ ಎಂದು ಜನರು ಒತ್ತಾಯಿಸುತ್ತಿದ್ದಾರೆ.

ಬಣ್ಣದ ಮಠದಲ್ಲಿ ಶುರುವಾಗಿದ್ದ ಶಾಲೆ: ಬ್ರಿಟೀಷರ ಕಾಲದಲ್ಲಿ ಸ್ಥಳೀಯರಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಇಂಥ ಸಂದರ್ಭದಲ್ಲಿಯೇ ಹೊಸಮನಿ ಸಿದ್ದಪ್ಪ ಅವರು ಹಾವೇರಿಯ ಬಣ್ಣದಮಠದಲ್ಲಿ 1892ರಲ್ಲಿ ಮುನ್ಸಿಪಲ್ ಶಾಲೆ ಆರಂಭಿಸಿದರು. ಆರಂಭದ ವರ್ಷದಲ್ಲಿಯೇ ಹಾವೇರಿ ಮಾತ್ರವಲ್ಲದೇ ಜಿಲ್ಲೆಯ ಎಲ್ಲ ತಾಲ್ಲೂಕಿನ ವಿದ್ಯಾರ್ಥಿಗಳಿಗೆ, ಇದೇ ಶಾಲೆ ಅಚ್ಚುಮೆಚ್ಚಾಯಿತು.

ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಶಾಲೆಗೆ ದೊಡ್ಡ ಕಟ್ಟಡದ ಅವಶ್ಯಕತೆಯಿತ್ತು. ಅವಾಗಲೇ ಮುನ್ಸಿಪಲ್ ಸ್ಕೂಲ್‌ಗಾಗಿ ಪ್ರತ್ಯೇಕ ಕಟ್ಟಡ (ಇಂದಿನ ಜಿಲ್ಲಾ ಕ್ರೀಡಾಂಗಣ ಪಕ್ಕ) ನಿರ್ಮಾಣವಾಯಿತು. 1930ರಲ್ಲಿ ಬಣ್ಣದಮಠದಿಂದ ಹೊಸ ಕಟ್ಟಡಕ್ಕೆ ಶಾಲೆ ಸ್ಥಳಾಂತರವಾಯಿತು. ಅದರ ಬಳಿಕವೂ ಶಾಲೆಯ ಕೀರ್ತಿ ಮತ್ತಷ್ಟು ಎತ್ತರಕ್ಕೆ ಬೆಳೆಯಿತು. ಒಂದು ಕಾಲದಲ್ಲಿ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಗೂ ಪಾಠ ಮಾಡಲು 58 ಶಿಕ್ಷಕರು ಶಾಲೆಯಲ್ಲಿದ್ದರು. ಸಾಹಿತಿಗಳಾದ ಚಂದ್ರಶೇಖರ ಪಾಟೀಲ, ಪಾಟೀಲ ಪುಟ್ಟಪ್ಪ, ಜಿ.ಎಸ್. ಆಮೂರ ಸೇರಿದಂತೆ ಹಲವರು ಈ ಶಾಲೆಯ ಹಳೇ ವಿದ್ಯಾರ್ಥಿಗಳು.

ಅಂದು ನಿರ್ಮಿಸಿದ್ದ ಹೊಸ ಕಟ್ಟಡ ಶಿಥಿಲಾವಸ್ಥೆ ಕಂಡಿತು. ನಂತರ, ಹಂಚಿನ ಕಟ್ಟಡ ತಲೆ ಎತ್ತಿತು. ಇದೇ ಕಟ್ಟಡದಲ್ಲಿಯೇ ಸದ್ಯ ಮುನ್ಸಿಪಲ್ ಹೈಸ್ಕೂಲ್ ಕಾರ್ಯನಿರ್ವಹಿಸುತ್ತಿದೆ. ವರ್ಷ ಕಳೆದಂತೆ ಈ ಕಟ್ಟಡವೂ ತನ್ನ ಅಂದವನ್ನು ಕಳೆದುಕೊಳ್ಳುತ್ತಿದೆ. ಕಿಟಕಿಗಳು ಭಾಗಶಃ ಮುರಿದಿದೆ.

ಮಳೆಗೆ ಸೋರುವ ಕೊಠಡಿಗಳು: ಮುನ್ಸಿಪಲ್ ಹೈಸ್ಕೂಲ್‌ನಲ್ಲಿರುವ ಕೊಠಡಿಗಳ ಪೈಕಿ ಹಲವು ಕೊಠಡಿಗಳು ಮಳೆ ಬಂದರೆ ಸೋರುತ್ತವೆ. ಮುಖ್ಯ ಶಿಕ್ಷಕರ ಕೊಠಡಿ ಹಾಗೂ ಕೆಲ ಬೋಧನಾ ಕೊಠಡಿಗಳಲ್ಲಿಯೂ ಸೋರುವ ಸ್ಥಿತಿಯಿದೆ.

ಮಂಗಗಳ ಗುಂಪು ಆಗಾಗ ಶಾಲೆ ಕಟ್ಟಡಗಳ ಮೇಲೆ ಓಡಾಡುತ್ತಿವೆ. ಪಾರಿವಾಳ ಹಿಡಿಯುವ ಜನರು ಸಹ ಕಟ್ಟಡ ಏರುತ್ತಿದ್ದಾರೆ. ಇದರಿಂದಾಗಿ ಹೆಂಚುಗಳು ಪದೇ ಪದೇ ಒಡೆಯುತ್ತಿವೆ. ಹಳೇ ಕಾಲದ ಹೆಂಚುಗಳನ್ನು ಬದಲಾಯಿಸಿ, ಹೊಸ ಕಾಲದ ಹೆಂಚುಗಳು ಹಾಕಿದರೆ ಸರಿಯಾಗಿ ಕೂರುತ್ತಿಲ್ಲ. ಅವುಗಳಿಂದಲೂ ನೀರು ಸೋರುತ್ತಿದೆ. ಹೆಂಚುಗಳ ಮೇಲೆಯೇ ತಗಡಿನ ಶೀಟು ಹಾಕಿಸಬೇಕೆಂಬುದು ಶಿಕ್ಷಕರ ಒತ್ತಾಯವಾಗಿದೆ. ಆದರೆ, ಈ ಒತ್ತಾಯಕ್ಕೆ ನಗರಸಭೆ ಸ್ಪಂದಿಸುತ್ತಿಲ್ಲ.

ಶಾಲೆಗೆ ಬಾರದ ₹ 5 ಲಕ್ಷ

ನಗರಸಭೆಯಲ್ಲಿ ಫೆಬ್ರುವರಿ 28ರಂದು ‘2024–25ನೇ ಸಾಲಿನ ಪರಿಷ್ಕೃತ ಹಾಗೂ 2025–26ನೇ ಸಾಲಿನ ಬಜೆಟ್’ ಮಂಡಿಸಿದ್ದ ಅಧ್ಯಕ್ಷೆ ಶಶಿಕಲಾ ಮಾಳಗಿ ಮುನ್ಸಿಪಲ್ ಹೈಸ್ಕೂಲ್ ಅಭಿವೃದ್ಧಿಗೆ ₹ 5 ಲಕ್ಷ ಘೋಷಿಸಿದ್ದರು. ಆದರೆ ಈ ಹಣ ಇದುವರೆಗೂ ಶಾಲೆಗೆ ತಲುಪಿಲ್ಲ. ಜುಲೈ 17ರಂದು ನಗರಸಭೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿಯೂ ಮುನ್ಸಿಪಲ್ ಹೈಸ್ಕೂಲ್‌ನ ಶತಮಾನೋತ್ಸವ ಸಮಾರಂಭ ಆಯೋಜಿಸುವ ಬಗ್ಗೆ ಸದಸ್ಯರು ನಿರ್ಣಯ ತೆಗೆದುಕೊಂಡಿದ್ದಾರೆ. ಆದರೆ ಈ ಕುರಿತು ತಯಾರಿ ಆರಂಭಿಸದಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಹಣ ಬಾರದ ಬಗ್ಗೆ ಪ್ರತಿಕ್ರಿಯಿಸಿದ ಸದಸ್ಯರೊಬ್ಬರು ‘ಶಾಲೆ ಅಭಿವೃದ್ಧಿಗೆ ₹ 5 ಲಕ್ಷ ಸಾಲುವುದಿಲ್ಲ. ಹೆಚ್ಚಿನ ಹಣ ಬೇಕಾಗುತ್ತದೆ. ಶಾಸಕರ ಅನುದಾನ ಹಾಗೂ ಇತರೆ ಕಡೆಯಿಂದ ಹಣ ಹೊಂದಿಸಲು ಪ್ರಯತ್ನಿಸಲಾಗುತ್ತಿದೆ’ ಎಂದರು.

‘ವಿಶೇಷ ಅನುದಾನಕ್ಕೆ ಒತ್ತಾಯ’

‘ಹಾವೇರಿಯ ಮುನ್ಸಿಪಲ್ ಹೈಸ್ಕೂಲ್‌ಗೆ ಐತಿಹಾಸಿಕ ಮಹತ್ವವಿದೆ. ಅದರ ಘನತೆ– ಗೌರವ ಅರಿತು ರಾಜ್ಯ ಸರ್ಕಾರವೇ ವಿಶೇಷ ಅನುದಾನದ ಮೂಲಕ ಶಾಲೆಯನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಾಹಿತಿ ಸತೀಶ ಕುಲಕರ್ಣಿ ಒತ್ತಾಯಿಸಿದರು. ‘ಶಿಕ್ಷಣ ಮರೀಚಿಕೆಯಾಗಿದ್ದ ಕಾಲದಲ್ಲಿ ಹಲವರಿಗೆ ಶಿಕ್ಷಣ ನೀಡಿದ ಕೀರ್ತಿ ಮುನ್ಸಿಪಲ್ ಹೈಸ್ಕೂಲ್‌ನದ್ದು. ಇಂಥ ಶಾಲೆ ಈಗ ಮೂಲ ಸೌಕರ್ಯಗಳಿಂದ ವಂಚಿತವಾಗಿರುವುದು ವಿಪರ್ಯಾಸ. ಜನಪ್ರತಿನಿಧಿಗಳು ಶಾಲೆ ಅಭಿವೃದ್ಧಿಯತ್ತ ಗಮನಹರಿಸಬೇಕು. ಸಾರ್ವಜನಿಕರು ಸಹ ಕೈ ಜೋಡಿಸಬೇಕು’ ಎಂದು ಹೇಳಿದರು.

ಮೂರು ಬಾರಿ ಕಳ್ಳತನ

ಮುನ್ಸಿಪಲ್ ಹೈಸ್ಕೂಲ್‌ನಲ್ಲಿರುವ ಅಡುಗೆ ಮನೆಯಲ್ಲಿ ಮೂರು ಬಾರಿ ಕಳ್ಳತನವಾಗಿದೆ. ಹೈಸ್ಕೂಲ್‌ ಹಿಂಭಾಗದಲ್ಲಿರುವ ಸುಭಾಷ್ ವೃತ್ತದ ರಸ್ತೆಯ ಮೂಲಕ ಒಳಗೆ ನುಗ್ಗಿರುವ ಕಳ್ಳರು ಆಹಾರ ಸಾಮಗ್ರಿಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾದರೂ ಕಳ್ಳರು ಮಾತ್ರ ಪತ್ತೆಯಾಗಿಲ್ಲ. ‘1 ಸಿಲಿಂಡರ್‌ ಎರಡು ಸಮೆ (ದೀಪ) 20 ಚೀಲ ಅಕ್ಕಿ 6 ಚೀಲ ಬೇಳೆ 1 ಚೀಲ ಗೋಧಿ ಕಳ್ಳತನವಾಗಿದೆ. ಹೈಸ್ಕೂಲ್ ಹಿಂಭಾಗದಲ್ಲಿ ರಾತ್ರಿ ಕತ್ತಲು ಇರುತ್ತವೆ. ಇದೇ ಜಾಗದಿಂದಲೇ ಕಳ್ಳರು ಶಾಲೆಯೊಳಗೆ ಬಂದು ಕಳ್ಳತನ ಮಾಡಿದ್ದಾರೆ. ಈ ದಾರಿಯಲ್ಲಿ ಗ್ರಿಲ್ ಮಾಡಿಸಲಾಗಿದ್ದು ಅಷ್ಟಾದರೂ ಕಳ್ಳತನ ನಡೆದಿದೆ. ಶತಮಾನದ ಶಾಲೆಗೆ ಭದ್ರತೆಯ ಭಯವೂ ಕಾಡುತ್ತಿದೆ’ ಎಂದು ಶಾಲೆಯ ವಿದ್ಯಾರ್ಥಿಯೊಬ್ಬರ ಪೋಷಕರು ತಿಳಿಸಿದರು. ‘ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಮುರಿದು ಹಾಕಿ ಕಳ್ಳರು ಕೃತ್ಯ ಎಸಗಿದ್ದಾರೆ. ಈಗ ಶಾಲೆಯ ಕೆಲವು ಕಡೆಗಳಲ್ಲಿ ಕ್ಯಾಮೆರಾ ಹಾಕಲಾಗಿದ್ದು ಅವುಗಳ ನಿರ್ವಹಣೆ ಸಮರ್ಪಕವಾಗಬೇಕು’ ಎಂದು ಒತ್ತಾಯಿಸಿದರು.

ಹಾವೇರಿ ಮುನ್ಸಿಪಲ್ ಹೈಸ್ಕೂಲ್‌ನ ಮುಖ್ಯ ಶಿಕ್ಷಕರ ಕೊಠಡಿಯಲ್ಲಿ ನೀರು ಸೋರುವ ಜಾಗದಲ್ಲಿ ಗೋಣಿಚೀಲ ಇಟ್ಟಿರುವುದು
ಹಾವೇರಿಯ ಮುನ್ಸಿಪಲ್ ಹೈಸ್ಕೂಲ್‌ನ ಕೊಠಡಿಯೊಂದರಲ್ಲಿ ನೀರು ಸೋರಿ ಗೋಡೆ ಹಾಳಾಗುತ್ತಿರುವುದು
ಹಾವೇರಿ ಮುನ್ಸಿಪಲ್ ಹೈಸ್ಕೂಲ್ ಪ್ರವೇಶ ದ್ವಾರ
ನಮ್ಮದು ಹಳೇ ಶಾಲೆ. ಸೌಲಭ್ಯಗಳ ಕೊರತೆಯಿದ್ದು ನಗರಸಭೆಯ ಗಮನಕ್ಕೆ ತರಲಾಗಿದೆ. ನಗರಸಭೆಯಿಂದ ಸ್ಪಂದನೆ ಸಿಗುತ್ತಿದ್ದು ಒಂದೊಂದೇ ಬೇಡಿಕೆ ಈಡೇರುತ್ತಿವೆ
-ಶೋಭಾ ಎಸ್. ಜಾಗಟಗೇರಿ, ಮುಖ್ಯ ಶಿಕ್ಷಕಿ ಮುನ್ಸಿಪಲ್ ಹೈಸ್ಕೂಲ್
ಶಿಕ್ಷಕರು ಹಳೇ ವಿದ್ಯಾರ್ಥಿಗಳ ಸಭೆ ನಡೆಸಿ ಶತಮಾನೋತ್ಸವ ಸಮಿತಿ ರಚಿಸಲಾಗುವುದು. ಶಾಲೆ ಅಭಿವೃದ್ಧಿ ಹಾಗೂ ಸಮಾರಂಭಕ್ಕೆ ಸುಮಾರು ₹ 30 ಲಕ್ಷ ಅಗತ್ಯವಿದ್ದು ಅದನ್ನು ಹೊಂದಿಸಲು ಪ್ರಯತ್ನಿಸಲಾಗುತ್ತಿದೆ
-ಸಂಜೀವಕುಮಾರ ನೀರಲಗಿ, ನಗರಸಭೆ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.