ADVERTISEMENT

ಹಾನಗಲ್‌ ಉಪಚುನಾವಣೆ: ಮೋದಿಯಿಂದ ಸಬ್‌ ಕಾ ಸರ್ವನಾಶ್‌- ಮಲ್ಲಿಕಾರ್ಜುನ ಖರ್ಗೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 15:28 IST
Last Updated 27 ಅಕ್ಟೋಬರ್ 2021, 15:28 IST
ಹಾನಗಲ್‌ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಉಪಚುನಾವಣೆ ಪ್ರಚಾರಾರ್ಥ ಬುಧವಾರ ಏರ್ಪಡಿಸಿದ್ದ ‘ಕಾಂಗ್ರೆಸ್‌ ಬಹಿರಂಗ ಸಭೆ’ಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ, ಶಾಸಕ ಎಚ್‌.ಕೆ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಇದ್ದಾರೆ
ಹಾನಗಲ್‌ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಉಪಚುನಾವಣೆ ಪ್ರಚಾರಾರ್ಥ ಬುಧವಾರ ಏರ್ಪಡಿಸಿದ್ದ ‘ಕಾಂಗ್ರೆಸ್‌ ಬಹಿರಂಗ ಸಭೆ’ಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಉದ್ಘಾಟಿಸಿದರು. ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ, ಶಾಸಕ ಎಚ್‌.ಕೆ.ಪಾಟೀಲ, ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್‌, ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ, ಮಾಜಿ ಸ್ಪೀಕರ್‌ ಕೆ.ಬಿ.ಕೋಳಿವಾಡ ಇದ್ದಾರೆ   

ಹಾವೇರಿ: ಕಾಂಗ್ರೆಸ್‌ 70 ವರ್ಷಗಳಲ್ಲಿ ಸಂಪಾದಿಸಿದ್ದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಏಳೇ ವರ್ಷಗಳಲ್ಲಿ ಖಾಸಗಿಯವರಿಗೆ ಮಾರಿಕೊಂಡಿದ್ದಾರೆ. ರಸ್ತೆ, ರೈಲು, ವಿಮಾನ ನಿಲ್ದಾಣ, ಬಂದರು...ಹೀಗೆ ಎಲ್ಲವೂ ಖಾಸಗೀಕರಣವಾಗಿವೆ. ‘ಸಬ್‌ ಕಾ ಸರ್ವನಾಶ್‌’ ಮಾಡುತ್ತಿದ್ದಾರೆ ಎಂದು ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದರು.

ಹಾನಗಲ್‌ ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಕಾಂಗ್ರೆಸ್‌ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು. ನರೇಂದ್ರ ಮೋದಿ ಅವರು ಕಾಂಗ್ರೆಸ್‌ ಅನ್ನು ಪದೇ ಪದೇ ಚುಡಾಯಿಸುತ್ತಾರೆ. 70 ವರ್ಷಗಳಲ್ಲಿ ಏನು ಮಾಡಿದ್ದೀರಿ ಎಂದು ಪ್ರಶ್ನಿಸುತ್ತಾರೆ. ಏಳು ವರ್ಷಗಳಲ್ಲಿ ಮೋದಿಯವರೇ ನೀವೇನು ಕೊಟ್ಟಿದ್ದೀರಿ ಎಂದು ತಿರುಗೇಟು ನೀಡಿದರು.

ವಿಪಕ್ಷಗಳ ನಾಯಕರು ಮಾತನಾಡುವುದನ್ನು ಕದ್ದು ಕೇಳುವ ಕೆಲಸವನ್ನು ಮೋದಿ ಮಾಡಿದ್ದಾರೆ.ಪೆಗಾಸಸ್ ಪ್ರಕರಣ ಇಡೀ ದೇಶಕ್ಕೆ ಗೊತ್ತಿದೆ. ಇಸ್ರೇಲ್‌ನವರಿಗೆ ಕೊಟ್ಟು‌ ಫೋನ್‌ ಕದ್ದಾಲಿಕೆ ಮಾಡಿಸಿದ್ರಿ. ಸುಪ್ರೀಂ ಕೋರ್ಟ್ ಪೆಗಾಸಸ್ ತನಿಖೆ ಆಗಬೇಕು ಎಂದು ಹೇಳಿದೆ. ಇದು ಕಾಂಗ್ರೆಸ್ ಗೆಲುವು, ಮೋದಿಯವರು ಸೋಲು. ಕೇಂದ್ರ ಗೃಹ ಸಚಿವರು ತಕ್ಷಣ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದರು.

ADVERTISEMENT

ಸಿಎಂ ಸವಾಲು ಹಾಕಿದ ಸಿದ್ದು:

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ,ಬಸವರಾಜ ಬೊಮ್ಮಾಯಿ ಅವರು ಕ್ಷೇತ್ರದಲ್ಲಿ ಸುಳ್ಳಿನ ಮಳೆ ಸುರಿಸುತ್ತಿದ್ದಾರೆ. ನೀವು ಏನು ಮಾಡಿದ್ದೀರಿ, ನಾವು ಏನು ಮಾಡಿದ್ದೀವಿ ಎಂಬುದನ್ನು ಜನರಿಗೆ ತಿಳಿಸಿಲು ಜನತಾ ನ್ಯಾಯಾಲಯದ ಮುಂದೆ ಬನ್ನಿ ಎಂದು ಸವಾಲು ಹಾಕಿದ್ದೆ. ಇವತ್ತಿನವರೆಗೂ ಯಾವುದೇ ಉತ್ತರ ಕೊಟ್ಟಿಲ್ಲ. ಉತ್ತರ ಹೇಳುವುದಕ್ಕೆ ಧಮ್‌ ಇರಬೇಕಲ್ವಾ..? ಎಂದು ವ್ಯಂಗ್ಯವಾಡಿದರು.

ಬಿಜೆಪಿಯವರು ಹೇಡಿಗಳು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ₹5495 ಕೋಟಿ ತರಲು ಆಗಲಿಲ್ಲ. ನಾನು ಮುಖ್ಯಮಂತ್ರಿಯಾಗಿದ್ದರೆ, ನರೇಂದ್ರ ಮೋದಿ ಅವರ ಮನೆ ಮುಂದೆ ಧರಣಿ ಕುಳಿತು ಅನುದಾನ ತರುತ್ತಿದ್ದೆ. ಕೋವಿಡ್‌ ಸಂದರ್ಭದಲ್ಲಿ ಬಿಜೆಪಿಯವರು ₹2400 ಕೋಟಿ ನುಂಗಿ ಹಾಕಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.