ADVERTISEMENT

ಎಲ್ಲೆಲ್ಲೂ ಕರಬೂಜ ಘಮಲು

ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಾರುಕಟ್ಟೆಯಲ್ಲಿ ಈರುಳ್ಳಿದ ದರ ಇಳಿಕೆ; ತರಕಾರಿ ದರ ಸ್ಥಿರ

ಮಂಜುನಾಥ ರಾಠೋಡ
Published 2 ಜನವರಿ 2020, 19:30 IST
Last Updated 2 ಜನವರಿ 2020, 19:30 IST
ಹಾವೇರಿ ಮಾರುಕಟ್ಟೆಯಲ್ಲಿ ಕರಬೂಜ ಹಣ್ಣು ಖರೀದಿಸುತ್ತಿರುವ ಗ್ರಾಹಕ  –ಪ್ರಜಾವಾಣಿ ಚಿತ್ರ 
ಹಾವೇರಿ ಮಾರುಕಟ್ಟೆಯಲ್ಲಿ ಕರಬೂಜ ಹಣ್ಣು ಖರೀದಿಸುತ್ತಿರುವ ಗ್ರಾಹಕ  –ಪ್ರಜಾವಾಣಿ ಚಿತ್ರ    

ಹಾವೇರಿ: ನಗರದ ಮಾರುಕಟ್ಟೆ ಇಕ್ಕೆಲಗಳಲ್ಲಿ, ತಳ್ಳು ಗಾಡಿಗಳಲ್ಲಿ ಎಲ್ಲಿ ನೋಡಿದರೂ ಕರಬೂಜ ರಾರಾಜಿಸುತ್ತಿದ್ದು, ಘಮಲು ಮಾರುಕಟ್ಟೆಗೆ ಆವರಿಸಿದೆ. ಖರೀದಿ ಭರಾಟೆಯು ಜೋರಾಗಿ ನಡೆದಿದೆ.

ನಗರದ ಲಾಲ್‌ಬಹದ್ದೂರ್‌ ಶಾಸ್ತ್ರಿಮಾರುಕಟ್ಟೆಗೆ ಕರಬೂಜ ಹಣ್ಣುಗಳ ಪೂರೈಕೆ ಆರಂಭವಾಗಿದೆ. ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದಿಂದ ಹಣ್ಣುಗಳನ್ನು ತರಿಸಲಾಗುತ್ತಿದೆ. ಇನ್ನುಳಿದಂತೆಹಣ್ಣು ಮತ್ತು ತರಕಾರಿಗಳ ಬೆಲೆ ಸ್ಥಿರವಾಗಿದ್ದು, ಈರುಳ್ಳಿ ದರ ಇಳಿಕೆಯಾಗಿದೆ ಎನ್ನುತ್ತಾರೆ ವ್ಯಾಪಾರಿಗಳು.

ಕರಬೂಜ ಹಣ್ಣು ತಂಪುಕಾರಕವಾಗಿದ್ದು, ಆರೋಗ್ಯವರ್ಧಕ. ಬಿಸಿಲಿನ ಝಳ ತಪ್ಪಿಸಲು ಇದು ಸಹಕಾರಿ. ಸ್ಥಳೀಯ ಮಾರುಕಟ್ಟೆಗೆ ಆಂಧ್ರಪ್ರದೇಶದ ಕಡಪಾ, ಚಿತ್ರದುರ್ಗ ಭಾಗದಿಂದ ಬರುತ್ತಿದೆ. ಕೆ.ಜಿ.ಕರಬೂಜ ಹಣ್ಣಿನ ಬೆಲೆ ₹40 ಇದೆ. ಗಾತ್ರಕ್ಕೆ ತಕ್ಕಂತೆ ಕೆ.ಜಿ.ಗೆ ಎರಡರಿಂದ ಮೂರು ಹಣ್ಣು ಬರುತ್ತದೆ ಎಂದು ವ್ಯಾಪಾರಿ ಪ್ರಜ್ವಲ್‌ ಶಿವಣ್ಣನವರ ತಿಳಿಸಿದರು.

ADVERTISEMENT

ಈಗ ಕರಬೂಜ ಹಣ್ಣಿನ ಸೀಜನ್‌ ಆರಂಭವಾಗಿದೆ. ಬಿಸಿಲು ಹೆಚ್ಚಾದಂತೆ ಹಣ್ಣುಗಳು ಸಿಹಿಯನ್ನು ನೀಡುತ್ತದೆ. ಶಿವರಾತ್ರಿ ಹಬ್ಬದ ಸಮಯದಲ್ಲಿ ಈ ಹಣ್ಣು ಹೆಚ್ಚಾಗಿ ಆವಕವಾಗುವ ನಿರೀಕ್ಷೆ ಇದೆ ಅವರು ವಿವರಿಸಿದರು.

ಹಣ್ಣಿನ ಮಾರುಕಟ್ಟೆಯಲ್ಲಿ ಸೇಬು ಹಣ್ಣಿನ ಬೆಲೆ ಸ್ಥಿರವಾಗಿದ್ದು, ದ್ರಾಕ್ಷಿ ಹಾಗೂ ಸಪೋಟ (ಚಿಕ್ಕು) ಹಣ್ಣಿನ ಬೆಲೆ ಇಳಿಕೆಯಾಗಿದೆ. ಹಿಂದಿನ ವಾರ ₹100 ರಂತೆ ಮಾರಾಟವಾಗುತ್ತಿದ್ದ ಕೆ.ಜಿ. ದ್ರಾಕ್ಷಿ ಈ ವಾರ ₹80 ಹಾಗೂ ಚಿಕ್ಕು ₹ 40 ರಂತೆ ಮಾರಾಟವಾಗುತ್ತಿದೆ. ಇನ್ನುಳಿದಂತೆ ದಾಳಿಂಬೆ ₹100, ಕಿತ್ತಳೆ ₹100, ಮೂಸಂಬಿ ₹100, ಸ್ಟ್ರಾಬೆರಿ ಬಾಕ್ಸ್‌ಗೆ ₹100, ಕಿವಿ ಹಣ್ಣು ಬಾಕ್ಸ್‌ಗೆ ₹80 ರಂತೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿ ಮೆಹಬೂಬಲಿ ತಿಳಿಸಿದರು.

‘ಹಿಂದಿನ ವಾರ ಮಾರುಕಟ್ಟೆಯಲ್ಲಿ ₹ 40 ರಿಂದ ₹ 100ರವರೆಗೆ ಮಾರಾಟವಾಗುತ್ತಿದ್ದ ಈರುಳ್ಳಿ, ಈ ವಾರ ₹40 ರಿಂದ ₹80ರಂತೆ ಮಾರಾಟವಾಗುತ್ತಿದೆ. ಮತ್ತಷ್ಟುಬೆಲೆ ಇಳಿಕೆಯಾಗಬಹುದು’ ಎನ್ನುತ್ತಾರೆ ವ್ಯಾಪಾರಿ ಇಸ್ಮಾಯಿಲ್‌.

ನೆರೆಯಿಂದಾಗಿ ಬೇರೆ ಬೇರೆ ಜಿಲ್ಲೆಯಿಂದ ತರಕಾರಿಗಳ ಆವಕ ಕಡಿಮೆಯಾಗಿತ್ತು. ಅದರಿಂದ ತರಕಾರಿ ಬೆಲೆಯಲ್ಲಿ ತುಸು ಏರಿಕೆಯಾಗಿತ್ತು. ಈರುಳ್ಳಿ ಬೆಲೆ ಈಗ ಇಳಿಕೆಯಾಗುತ್ತಿದ್ದರೂ ಗ್ರಾಹಕರು ಕೇಳುವ ಬೆಲೆಯಷ್ಟು ಕಡಿಮೆಯಾಗಿಲ್ಲ. ಈ ತಿಂಗಳ ಅಂತ್ಯದವರೆಗೆ ಬೆಲೆಇಳಿಕೆಯಾಗಬಹುದು. ಇಲ್ಲದಿದ್ದರೆ ಇದೇ ದರ ಮುಂದುವರೆಯುತ್ತದೆ ಎಂದು ಅವರು ವಿವರಿಸಿದರು.

‘ಈ ವಾರ ಮಾರುಕಟ್ಟೆಯಲ್ಲಿ ಕೆ.ಜಿ.ಟೊಮೆಟೊ ₹10, ಸೌತೆಕಾಯಿ ₹40, ಬದನೆಕಾಯಿ (ಮುಳಗಾಯಿ), ಮೆಣಸಿನಕಾಯಿ ₹30, ಬೀನ್ಸ್‌ ₹50, ಚವಳಿಕಾಯಿ ₹50, ಹೀರೇಕಾಯಿ, ಹಾಗಲಕಾಯಿ, ಡೊಣ್ಣ ಮೆಣಸು₹60 ಇದೆ. ಅಲ್ಲದೆ, ಕ್ಯಾರೆಟ್‌ ₹50, ಬೀಟ್‌ರೂಟ್‌ ₹40, ಆಲೂಗಡ್ಡೆ ₹30, ಕ್ಯಾಬೆಜ್‌ ₹40, ಹೂಕೋಸು ₹ 30 ರಂತೆ ಮಾರಾಟವಾಗುತ್ತಿದೆ’ ಎಂದು ವ್ಯಾಪಾರಿ ಮುರ್ನಾಸಾಬ್ ಕೋಣನತಂಬಗಿ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.