
ಹಾವೇರಿ: ಅಪಘಾತ–1: ಹಾನಗಲ್ ತಾಲ್ಲೂಕಿನ ಅಕ್ಕಿಆಲೂರು ಬಳಿ 2025ರ ಜೂನ್ 16ರಂದು ರಾತ್ರಿ 8.30 ಗಂಟೆ ಸುಮಾರಿಗೆ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ. ಹೆಲ್ಮೆಟ್ ರಹಿತ ಚಾಲನೆ ಮಾಡುತ್ತಿದ್ದ ಮೂವರು, ತಲೆಗೆ ತೀವ್ರ ಪೆಟ್ಟು ಬಿದ್ದು ಸಾವು.
ಅಪಘಾತ–2: ತಿಳವಳ್ಳಿ ಹಾಗೂ ಹಂಸಭಾವಿ ರಸ್ತೆಯಲ್ಲಿ 2025ರ ಸೆಪ್ಟೆಂಬರ್‌ನಲ್ಲಿ ಬೈಕ್ ಉರುಳಿಬಿದ್ದು ಅಪಘಾತ. ಹೆಲ್ಮೆಟ್ ಧರಿಸದಿದ್ದಕ್ಕೆ ತಲೆಗೆ ಪೆಟ್ಟು ಬಿದ್ದು ತಂದೆ ಸಾವು. ಮಗಳಿಗೆ ತೀವ್ರ ಗಾಯ.
ಅಪಘಾತ–3: ಹೊಸ ಬೈಕ್ ಖರೀದಿಸಿ ಊರಿಗೆ ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಗೌರಾಪುರ ಬಳಿ ಅಪಘಾತ ಸಂಭವಿಸಿ, ಬೈಕ್‌ನಲ್ಲಿದ್ದ ಇಬ್ಬರು ಯುವಕರ ತಲೆಗೆ ಪೆಟ್ಟು ಬಿದ್ದು ಸಾವು.
ಅಪಘಾತ–4: ಹಂಸಬಾವಿ– ಚಿಕ್ಕೇರೂರು ರಾಜ್ಯ ಹೆದ್ದಾರಿಯಲ್ಲಿ 2025ರ ನವೆಂಬರ್‌ನಲ್ಲಿ ಬೈಕ್ ಉರುಳಿಬಿದ್ದು ಖಾಸಗಿ ಶಾಲೆಯ ಶಿಕ್ಷಕಿ ಸಾವು.
ಅಪಘಾತ–5: ಹಾವೇರಿ ಹಳೇ ಪಿ.ಬಿ. ರಸ್ತೆಯಲ್ಲಿ 2025ರ ಆಗಸ್ಟ್ 29ರಂದು ಬೈಕ್‌ನಿಂದ ಬಿದ್ದು ಮಹಿಳೆ ಸಾವು.
ಈ ಅಪಘಾತಗಳು ಉದಾಹರಣೆಗಳು ಮಾತ್ರ. ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಇಂಥ ಅಪಘಾತಗಳು ಹೆಚ್ಚಾಗುತ್ತಿದ್ದು, ಸಂಚಾರ ನಿಯಮ ಪಾಲಿಸದಿದ್ದಕ್ಕೆ ಹಲವು ಜನರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯ ಜನರು, ಅಂಗವಿಕಲರಾಗಿ ಆರೋಗ್ಯ ಸಮಸ್ಯೆ ಎದುರಿಸುತ್ತಿದ್ದಾರೆ. ಜೀವನಪೂರ್ತಿ ಆಸ್ಪತ್ರೆಗಳಿಗೂ ಅಲೆದಾಡುತ್ತಿದ್ದಾರೆ.
ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡು ಇಡೀ ಕುಟುಂಬಗಳು ಕಣ್ಣೀರಿನಲ್ಲಿ ಕೈ ತೊಳೆಯುತ್ತಿವೆ. ಅಷ್ಟಾದರೂ ಜಿಲ್ಲೆಯ ಜನರು ಸಂಚಾರ ನಿಯಮ ಪಾಲಿಸುವಲ್ಲಿ ಹಿಂದೇಟು ಹಾಕುತ್ತಿದ್ದಾರೆ. ನಿಯಮ ಉಲ್ಲಂಘಿಸುವ ಜನರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾದ ಪೊಲೀಸರು ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ) ಸಹ ಮೌನವಾಗಿದ್ದಾರೆ. ಉಲ್ಲಂಘನೆಗಳು ಕಣ್ಣಿಗೆ ಕಂಡರೂ ಕಾಣದಂತೆ ವರ್ತಿಸುತ್ತಿದ್ದಾರೆ. ಅವರ ಎದುರೇ ಜನರು, ನಿಯಮ ಉಲ್ಲಂಘಿಸಿ ರಾಜಾರೋಷವಾಗಿ ಸಂಚರಿಸುತ್ತಿರುವುದು ವ್ಯವಸ್ಥೆಯನ್ನು ಅಣುಕಿಸುವಂತಿದೆ.
ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ, ಅಡ್ಡಾದಿಡ್ಡಿಯಾಗಿ ವಾಹನ ನಿಲ್ಲಿಸುವವರು ಹೆಚ್ಚಿದ್ದಾರೆ. ಇದರಿಂದಾಗಿ, ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸಲು ಸಾಕಷ್ಟು ಅಡೆತಡೆಗಳು ಉಂಟಾಗುತ್ತಿವೆ. ತಿಂಗಳ ಕೊನೆಯಲ್ಲಿ ಹಾಗೂ ತಿಂಗಳ ಆರಂಭದಲ್ಲಿ ಮಾತ್ರ ಗುರಿ ಸಾಧನೆಗಾಗಿ ಪೊಲೀಸರು ರಸ್ತೆಗೆ ಇಳಿದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಕೆಲ ಜನರು, ಶಾಸಕರು–ಸಂಸದರು ಹಾಗೂ ರಾಜಕಾರಣಿಗಳ ಹೆಸರು ಹೇಳಿ ಮೊಬೈಲ್ ಕರೆ ಮಾಡಿಸಿ ಪೊಲೀಸರನ್ನು ಬೆದರಿಸಿ ಮುಂದಕ್ಕೆ ಹೋಗುತ್ತಿದ್ದಾರೆ.
ರಸ್ತೆಯಲ್ಲಿ ನಿಲ್ಲುವ ಪೊಲೀಸರ ಎದುರೇ ಜನರು ರಾಜಾರೋಷವಾಗಿ ಹೆಲ್ಮೆಟ್ ರಹಿತ ಸವಾರಿ ಮಾಡುತ್ತಿದ್ದಾರೆ. ಸೀಟ್ ಬೆಲ್ಟ್ ಧರಿಸದೇ ಕಾರು ಚಲಾಯಿಸುತ್ತಿದ್ದಾರೆ. ಅತಿ ವೇಗದಲ್ಲಿ ವಾಹನಗಳನ್ನು ಓಡಿಸುತ್ತಿದ್ದಾರೆ. ವಿಮೆ ಹಾಗೂ ಹೊಗೆ ಪ್ರಮಾಣ ಪತ್ರವಿಲ್ಲದೇ ವಾಹನಗಳನ್ನು ಓಡಿಸುತ್ತಿದ್ದಾರೆ. ಇಷ್ಟೆಲ್ಲ ನಿಯಮ ಉಲ್ಲಂಘನೆಯಾಗುತ್ತಿದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳುವ ಕೆಲಸ ಆಗುತ್ತಿಲ್ಲ.
ಜಿಲ್ಲೆಯಾದ್ಯಂತ ಇತ್ತೀಚೆಗಷ್ಟೇ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಅಂಗವಾಗಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಜನರ ಪಾಲ್ಗೊಳ್ಳುವಿಕೆ ಮಾತ್ರ ಆಗಿಲ್ಲ. ಅಧಿಕಾರಿಗಳೇ ಕೆಲ ಕಾರ್ಯಕ್ರಮಗಳನ್ನು ಮಾಡಿ ಮಾಸಾಚರಣೆ ಮುಗಿಸಿದ್ದಾರೆ. ಆರ್‌ಟಿಒ ಕಡೆಯಿಂದ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯಲ್ಲಿಯೇ ಹಲವು ಹೆಲ್ಮೆಟ್ ಧರಿಸಿರಲಿಲ್ಲವೆಂಬುದು, ಅಧಿಕಾರಿಗಳ ಬೇಜವಾಬ್ದಾರಿಗೆ ಸಾಕ್ಷಿಯಾಗಿದೆ.
ಅನುಮತಿ ಇಲ್ಲದೇ ಟಂಟಂ ವಾಹನಗಳಲ್ಲಿ ಹೆಚ್ಚಿನ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ತಿದ್ದರೂ ತಡೆಯುವ ಪ್ರಯತ್ನವಾಗುತ್ತಿಲ್ಲ. ಶಿಗ್ಗಾವಿ ತಾಲ್ಲೂಕಿನ ತೋರೂರು ಬಳಿ ಟಂಟಂ ವಾಹನ ಉರುಳಿಬಿದ್ದು ಕಾರ್ಮಿಕ ಮಹಿಳೆ ಇಂದ್ರವ್ವ ಲಮಾಣಿ (46) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಾರ್ಮೆಂಟ್ಸ್ ಉದ್ಯೋಗಿಗಳು ಪ್ರಯಾಣಿಸುತ್ತಿದ್ದ ಟಂಟಂ ಉರುಳಿಬಿದ್ದು, ಉದ್ಯೋಗಿಯೊಬ್ಬರು ಮೃತಪಟ್ಟಿದ್ದಾರೆ.
ಮೂರು ವರ್ಷಗಳಲ್ಲಿ 872 ಮಂದಿ ಸಾವು: ಅತಿ ವೇಗ, ನಿರ್ಲಕ್ಷ್ಯದ ಚಾಲನೆ ಸೇರಿದಂತೆ ಹಲವು ಸಂಚಾರ ನಿಯಮಗಳ ಉಲ್ಲಂಘನೆಯಿಂದಲೇ ಜಿಲ್ಲೆಯಾದ್ಯಂತ ಅಪಘಾತಗಳು ಸಂಭವಿಸುತ್ತಿವೆ. 2023ರಿಂದ 2025ರವರೆಗೆ ಜಿಲ್ಲೆಯಾದ್ಯಂತ 4,222 ಅಪಘಾತಗಳು ಸಂಭವಿಸಿದ್ದು, 872 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 3,986 ಮಂದಿ ಗಾಯಗೊಂಡಿದ್ದಾರೆ.
ಮೃತಪಟ್ಟವರ ಪೈಕಿ ಹಲವರು ಬೈಕ್ ಸವಾರರಿದ್ದಾರೆ. ಬಹುತೇಕರು ಹೆಲ್ಮೆಟ್ ರಹಿತ ಸವಾರಿ ಮಾಡಿ ತಲೆಗೆ ಪೆಟ್ಟು ಬಿದ್ದು ಪ್ರಾಣ ಕಳೆದುಕೊಂಡಿದ್ದಾರೆ. ಹೆಲ್ಮೆಟ್ ಧರಿಸಿ ಬೈಕ್ ಚಾಲನೆ ಮಾಡುವಂತೆ ಪೊಲೀಸರು ಜಾಗೃತಿ ಮೂಡಿಸಿದರೂ ಜನರು ಎಚ್ಚೆತ್ತುಕೊಳ್ಳುತ್ತಿಲ್ಲ.
ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಪೊಲೀಸ್ ಠಾಣೆ ವ್ಯಾಪ್ತಿಯಿಂದ ರಾಣೆಬೆನ್ನೂರ ತಾಲ್ಲೂಕಿನ ಕುಮಾರಪಟ್ಟಣ ಠಾಣೆವರೆಗೆ ಸುಮಾರು 112 ಕಿ.ಮೀ.ವರೆಗೆ ರಾಷ್ಟ್ರೀಯ ಹೆದ್ದಾರಿ- ಹಾದು ಹೋಗಿದೆ. ಇಲ್ಲಿಯೂ ಸಂಚಾರ ನಿಯಮ ಉಲ್ಲಂಘನೆಯಿಂದ, ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿವೆ.
ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿ ಸೇರಿದಂತೆ ವಿವಿಧ ಇಲಾಖೆಗಳ, ವಿವಿಧ ಯೋಜನೆಗಳ ಅಡಿಯಲ್ಲಿ ನಿರ್ಮಾಣವಾಗಿರುವ ರಸ್ತೆಗಳಲ್ಲಿಯೂ ಅಪಘಾತಗಳು ಸಂಭವಿಸುತ್ತಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿಯೇ 2023ರಲ್ಲಿ 73 ಅಪಘಾತ ಸಂಭವಿಸಿ 85 ಮಂದಿ ಮೃತಪಟ್ಟಿದ್ದಾರೆ. 2024ರಲ್ಲಿ 61 ಅಪಘಾತದಲ್ಲಿ 86 ಮಂದಿ ಮೃತರಾಗಿದ್ದಾರೆ. 2025ರಲ್ಲಿ 47 ಅಪಘಾತದಲ್ಲಿ 60 ಪ್ರಯಾಣಿಕರು ಪ್ರಾಣ ಕಳೆದುಕೊಂಡಿದ್ದಾರೆ.
ಜನರ ಸುರಕ್ಷಿತ ಹಾಗೂ ಸುಗಮ ಪ್ರಯಾಣಕ್ಕೆ ಸರ್ಕಾರ ನಿಯಮಗಳನ್ನು ರೂಪಿಸಿದ್ದು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು. ನಿಯಮ ಪಾಲಿಸದಿರುವವರ ವಿರುದ್ಧ ಪ್ರಕರಣ ದಾಖಲಿಸಿ ದಂಡ ವಿಧಿಸಲು ನಗರದ ಹಲವು ಕಡೆಗಳಲ್ಲಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಲಾಗುತ್ತಿದೆಯಶೋಧಾ ವಂಟಗೋಡಿ ಜಿಲ್ಲಾ ಎಸ್.ಪಿ.
ಬೈಕ್‌ನಲ್ಲಿ ಅಪಘಾತ ಸಂಭವಿಸಿದರೆ ಮೊದಲಿಗೆ ತಲೆಗೆ ತೀವ್ರ ಪೆಟ್ಟು ಬೀಳುತ್ತದೆ. ದೇಹದ ಬೇರೆ ಭಾಗಕ್ಕೆ ಪೆಟ್ಟು ಬಿದ್ದರೆ ಪ್ರಾಣ ಉಳಿಸಬಹುದು. ಆದರೆ ತಲೆಗೆ ಪೆಟ್ಟು ಬಿದ್ದರೆ ಪ್ರಾಣ ಉಳಿಸುವುದು ತೀರಾ ಕಷ್ಟಜಿಲ್ಲಾಸ್ಪತ್ರೆ ವೈದ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.