
ಗುತ್ತಲ: ಪಟ್ಟಣದ 16 ನೇ ವಾರ್ಡನಲ್ಲಿ ತುಂಗಭದ್ರ ನದಿ ನೀರಿನ ಪೈಪಲೈನ್ ಇದ್ದರು ಸಹ ನದಿಯ ನೀರು ಪೂರೈಕೆಯಾಗುತ್ತಿಲ್ಲ. ಈ ಕಾರಣಕ್ಕೆ 16 ನೇ ವಾರ್ಡಿನ ನಿವಾಸಿಗಳು ಕೊಳವೆ ಬಾವಿ ನೀರನ್ನು ಕುಡಿಯುತ್ತಾರೆ. ಕೊಳವೆ ಬಾವಿಯ ನೀರು ಸಮೃದ್ಧವಾಗಿದೆ. ಆದರೆ ಸಾರ್ವಜನಿಕ ನಳಗಳ ಸರಿಯಾದ ವ್ಯವಸ್ಥೆಯಿಂದ ಇಲ್ಲದ ಕಾರಣ ಅಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ.
ನಳಗಳಿಗೆ ವಾಲ್ ಜೋಡಿಸದ ಕಾರಣ ಕುಡಿಯುವ ನೀರು ನಿರಂತರವಾಗಿ ಚರಂಡಿಗಳಿಗೆ ಹೋಗುತ್ತಿದೆ ಎಂದು 16 ನೇ ವಾರ್ಡಿನ ನಿವಾಸಿಗಳು ಆರೋಪಿಸುತ್ತಿದ್ದಾರೆ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಜನರಿಗೆ ಸರಿಯಾಗಿ ಸ್ಪಂದನೆ ಮಾಡುತ್ತಿಲ್ಲ. ನಳಗಳಿಗೆ ವಾಲ್ ಜೋಡಿಸಲು ಹಲವಾರು ಬಾರಿ ಹೇಳಿದರೂ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಾರ್ಡಿನ ನಿವಾಸಿಗಳು ದೂರುತ್ತಾರೆ.
‘ಪಟ್ಟಣದ ಹಲವಾರು ವಾರ್ಡ್‌ಗಳಿಗೆ ಕಸ ವಿಲೇವಾರಿ ಮಾಡುವ ವಾಹನ ಹೋಗುತ್ತಿಲ್ಲ. ಕಸವನ್ನು ಮನೆ ಮುಂದೆ ಹಾಕುತ್ತಿದ್ದೇವೆ. 15 ದಿನಗಳಿಗೊಮ್ಮೆ ಬರುತ್ತಿದ್ದಾರೆ. ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಮತ್ತು ಸಿಬ್ಬಂದಿ ಸರಿಯಾಗಿ ಕೆಲಸ ನಿರ್ವಹಿಸದ ಕಾರಣ ಗಲ್ಲಿ ಗಲ್ಲಿಗಳಲ್ಲಿ ಕಸ ದುರ್ವಾಸನೆ ಬೀರುತ್ತಿವೆ’ ಎಂದು 8 ನೇ ವಾರ್ಡಿನ ನಿವಾಸಿ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
16 ನೇ ವಾರ್ಡಿನ ಪ್ರತಿಯೊಂದು ಸಾರ್ವಜನಿಕ ನಳಗಳಿಗೆ ವಾಲ್‌ಗಳು ಇರುವದಿಲ್ಲ. ನಳಗಳಲ್ಲಿ ನೀರು ನಿರಂತರವಾಗಿ ಹರಿಯುತ್ತವೆ. ಬೇಸಿಗೆ ಕಾಲದಲ್ಲಿ ನೀರಿಗಾಗಿ ಹಾಹಾಕಾರವಾಗುತ್ತದೆ. ನಳಗಳಿಗೆ ವಾಲ್ ಜೋಡನೆ ಮಾಡಿ ಎಂದು ಎರಡು ತಿಂಗಳುಗಳ ಕಾಲ ನಿರಂತರವಾಗಿ ಮನವಿ ಮಾಡಿಕೊಂಡರೂ ಮುಖ್ಯಾಧಿಕಾರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ವಾರ್ಡಿನ ನಿವಾಸಿ ಆರೋಪಿಸಿದ್ದಾರೆ.
‘ನಮ್ಮ ವಾರ್ಡಿಗೆ ನದಿಯ ನೀರನ್ನು ಸರಿಯಾಗಿ ಬಿಡುತ್ತಿಲ್ಲ. ತಿಂಗಳಿಗೊಮ್ಮೆ ನದಿಯ ನೀರನ್ನು ಬಿಡುತ್ತಾರೆ. ಹಲವಾರು ಕಡೆ ಪೈಪ್‌ಗಳು ಒಡೆದಿವೆ. ನಳಗಳಿಗೆ ವಾಲ್ ಜೋಡನೆ ಮಾಡಲು ಹೇಳಿದರೆ ಹಣವಿಲ್ಲ ಎಂದು ಮುಖ್ಯಾಧಿಕಾರಿಗಳು ಹೇಳುತ್ತಾರೆ. ಒಡೆದ ಪೈಪ್‌ಗಳನ್ನು ದುರಸ್ತಿ ಮಾಡಲು ಚರಂಡಿ ದುರಸ್ತಿ, ಕಸ ವಿಲೇವಾರಿ ಮಾಡಲು ಹಣವಿಲ್ಲ ಎಂದು ಹೇಳುತ್ತಾರೆಂದು 16 ನೇ ವಾರ್ಡಿನ ಸದಸ್ಯ ವಿಜಯ ಲಮಾಣಿ ಆರೋಪಿಸುತ್ತಿದ್ದಾರೆ. ವಾರ್ಡ ಅಭಿವೃದ್ಧಿ ಪಡಿಸಲು ಮುಖ್ಯಾಧಿಕಾರಿ ಸ್ಪಂದನೆ ಮಾಡುತ್ತಿಲ್ಲ’ ಎಂದು ಅವರು ಹೇಳಿದರು.
ಸಾರ್ವಜನಿಕ ನಳಗಳಿಗೆ ವಾಲ್‌ಗಳು ಇಲ್ಲದ ಕಾರಣ ಕುಡಿಯುವ ನೀರಿನ ನಳಗಳ ಸುತ್ತಮುತ್ತ ಎಮ್ಮೆ ಮತ್ತು ನಾಯಿಗಳ ತಾಣವಾಗಿದೆ. ನೀರು ಮಲಿನಗೊಂಡು ಸೊಳ್ಳೆಗಳ ತಾಣವಾಗಿ ಪರಿಣಮಿಸಿದೆ. ಅಲ್ಲಿ ವಾಸಿಸುತ್ತಿರುವ ನಿವಾಸಿಗಳು ಸಾಂಕ್ರಾಮಿಕ ರೋಗದ ಭೀತಿಯಲ್ಲಿ ಕಾಲ ಕಳೆಯುತ್ತಿದ್ದಾರೆ ಎಂದು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.