ADVERTISEMENT

ಹಾನಗಲ್: ವನ್ಯಜೀವಿಗಳ ದಾಹ ತೀರಿಸುವ ಕೃತಕ ನೀರಿನ ತೊಟ್ಟಿಗಳು

ಸ್ವಂತ ಹಣದಲ್ಲಿ ತೊಟ್ಟಿ ನಿರ್ಮಿಸಿ ವನ್ಯಜೀವಿಗಳ ದಾಹ ತೀರಿಸುತ್ತಿರುವ ಅರಣ್ಯ ಇಲಾಖೆಯ ಸಿಬ್ಬಂದಿ

ಮಾರುತಿ ಪೇಟಕರ
Published 29 ಮಾರ್ಚ್ 2024, 4:46 IST
Last Updated 29 ಮಾರ್ಚ್ 2024, 4:46 IST
ಹಾನಗಲ್ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಸಾಂದ್ರತೆ ಅಧಿಕವಾಗಿರುವ ಅರಣ್ಯ ಪ್ರದೇಶದಲ್ಲಿ ಕೃತಕ ತೊಟ್ಟಿ ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ
ಹಾನಗಲ್ ತಾಲ್ಲೂಕಿನಲ್ಲಿ ಕಾಡು ಪ್ರಾಣಿಗಳ ಸಾಂದ್ರತೆ ಅಧಿಕವಾಗಿರುವ ಅರಣ್ಯ ಪ್ರದೇಶದಲ್ಲಿ ಕೃತಕ ತೊಟ್ಟಿ ನಿರ್ಮಿಸಿ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತಿದೆ   

ಹಾನಗಲ್: ಕಡು ಬೇಸಿಗೆ ನಾಡಿನೆಲ್ಲೆಡೆ ಕುಡಿಯುವ ನೀರಿಗೆ ಅಭಾವ ಸೃಷ್ಟಿಸಿದೆ. ಕಾಡಿನಲ್ಲಿ ವನ್ಯ ಜೀವಿಗಳು ಅನುಭವಿಸುತ್ತಿರುವ ಸಂಕಷ್ಟ ಅರಿತ ಅರಣ್ಯ ಇಲಾಖೆ ಸಿಬ್ಬಂದಿ ಪ್ರಾಣಿ–ಪಕ್ಷಿಗಳಿಗೆ ನೀರಿನ ದಾಹ ತಣಿಸಲು ತಾಲ್ಲೂಕಿನ ವಿವಿಧ ಭಾಗಗಳ ದಟ್ಟ ಕಾಡಿನಲ್ಲಿ ಕೃತಕ ತೊಟ್ಟಿಗಳನ್ನು ನಿರ್ಮಿಸಿ ನೀರು ತುಂಬಿಸುವ ಕಾರ್ಯ ಮಾಡುತ್ತಿದ್ದಾರೆ.

ನಾಲ್ಕು ವರ್ಷಗಳ ಹಿಂದೆ ತಾಲ್ಲೂಕಿನ ಕಾಡು ಪ್ರದೇಶದ 6 ಭಾಗಗಳಲ್ಲಿ ಕಾಂಕ್ರೀಟ್ ತೊಟ್ಟಿಗಳನ್ನು ನಿರ್ಮಿಸಲಾಗಿತ್ತು. ವೃತ್ತಾಕಾರದ ಈ ತೊಟ್ಟಿಗಳು ಒಂದು ಬದಿಯಿಂದ ಮತ್ತೊಂದು ತುದಿಗೆ 4 ಮೀಟರ್ ವ್ಯಾಸದಲ್ಲಿವೆ. ಇಳಿಜಾರು ಮಾದರಿಯಲ್ಲಿ 1 ಮೀಟರ್ ಆಳ ಇವೆ. ಪ್ರಾಣಿಗಳ ನೀರಿನ ದಾಹ ತಣಿಸಲು ಸುರಕ್ಷಿತ ವಿನ್ಯಾಸದಲ್ಲಿ ನಿರ್ಮಾಣಗೊಂಡಿವೆ.

ಕಾಡು ಪ್ರಾಣಿ, ಪಕ್ಷಿಗಳು ಹೆಚ್ಚಿನ ಸಾಂದ್ರತೆಯುಳ್ಳ ಮಾವಕೊಪ್ಪ, ಹೊಂಕಣ, ಹಿರೂರ, ಹಿರೇಕಣಗಿ, ಹಲಗಿನಕಟ್ಟಿ, ದಶರಥಕೊಪ್ಪ ಅರಣ್ಯ ಪ್ರದೇಶದಲ್ಲಿ ಈ ತೊಟ್ಟಿಗಳು ರಚನೆಯಾಗಿವೆ. ಪ್ರತಿ ಬೇಸಿಗೆಯಲ್ಲಿ ಈ ತೊಟ್ಟಿಗಳಿಗೆ ಟ್ಯಾಂಕರ್‌ ಮೂಲಕ ಅರಣ್ಯ ಇಲಾಖೆ ಸಿಬ್ಬಂದಿ ನೀರು ತುಂಬಿಸುತ್ತಾರೆ.

ADVERTISEMENT

ವಿಶೇಷವೆಂದರೆ ತೊಟ್ಟಿಗಳ ನಿರ್ಮಾಣ ಮತ್ತು ನೀರು ತುಂಬಿಸುವ ಕೆಲಸಕ್ಕೆ ಇಲಾಖೆಯಿಂದ ಅನುದಾನ ಇಲ್ಲ. ಅರಣ್ಯ ಇಲಾಖೆ ಸಿಬ್ಬಂದಿಯೇ ಸ್ವಂತ ಹಣ ಹೊಂದಿಸಿಕೊಂಡು ಈ ಕಾರ್ಯ
ಮಾಡುತ್ತಿದ್ದಾರೆ.

ಪ್ರತಿ ಬೇಸಿಗೆ ಆರಂಭದಲ್ಲಿಯೇ ತೊಟ್ಟಿಗಳನ್ನು ಸ್ವಚ್ಛಗೊಳಿಸಿ ನೀರು ತುಂಬಿಸುವ ಕೆಲಸ ನಡೆಯುತ್ತದೆ. ಒಂದು ತಿಂಗಳಿನಿಂದ ತೊಟ್ಟಿಗಳಿಗೆ ನೀರು ಪೂರೈಕೆ ಆರಂಭಿಸಲಾಗಿದೆ. ಈಗಾಗಲೇ ಮೂರನೇ ಬಾರಿ ಟ್ಯಾಂಕರ್‌ ನೀರು ಸರಬರಾಜು ಮಾಡಲಾಗಿದೆ.

ಹಾನಗಲ್ ತಾಲ್ಲೂಕು ಜಿಲ್ಲೆಯಲ್ಲಿಯೇ ಹೆಚ್ಚು ಕಾಡು ಹೊಂದಿದೆ. ಸಹಜವಾಗಿ ಕಾಡು ಪ್ರಾಣಿಗಳ ಸಾಂದ್ರತೆ ಇಲ್ಲಿ ಹೆಚ್ಚಿದೆ. ಬೇಸಿಗೆ ಸಮಯದಲ್ಲಿ ಕಾಡಿನಲ್ಲಿ ಕೆರೆ-ಕಟ್ಟೆಗಳು ಬರಿದಾಗುತ್ತವೆ.
ಜೀವಜಲ ಅರಸಿಕೊಂಡು ವನ್ಯ ಜೀವಿಗಳು ನಾಡಿನತ್ತ ಮುಖ ಮಾಡುತ್ತವೆ. ಏಳೆಂಟು ವರ್ಷಗಳ ಹಿಂದೆ ಬೇಸಿಗೆ ವೇಳೆ ಕಾಡು ಪ್ರಾಣಿಗಳು ನಾಡಿಗೆ ಬಂದು ಜೀವ ತೆತ್ತ ದುರ್ಘಟನೆಗಳು ನಡೆದ ಪರಿಣಾಮವಾಗಿ ಅಂದಿನ ವಲಯ ಅರಣ್ಯಾಧಿಕಾರಿ ಶಿವರಾತ್ರೇಶ್ವರಸ್ವಾಮಿ ಕಾಡಿಗೆ ಟ್ಯಾಂಕರ್ ನೀರು ಸರಬರಾಜು ಮಾಡಿ ಸುದ್ದಿಯಾಗಿದ್ದರು. ಇವರ ಈ ಪ್ರಯೋಗ ಅತ್ಯಂತ ಯಶಸ್ವಿಯಾಗಿತ್ತು.

ಕಾಡಿನಲ್ಲಿ ಅಲ್ಲಲ್ಲಿ ತಗ್ಗುಗಳನ್ನು ನಿರ್ಮಿಸಿ, ಅದಕ್ಕೆ ಪ್ಲಾಸ್ಟಿಕ್ ಹೊದಿಕೆ ಹಾಕಿ, ಟ್ಯಾಂಕರ್ ಮೂಲಕ ನೀರು ಸಂಗ್ರಹಿಸಿ ಪ್ರಾಣಿಗಳ ದಾಹ ತೀರಿಸುವ ಅವರ ಪ್ರಯತ್ನಕ್ಕೆ ಜನಮೆಚ್ಚುಗೆ ಸಿಕ್ಕಿತ್ತು. ಇದೇ ಮಾದರಿ ಮುಂದುವರಿಸಿಕೊಂಡು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಡಿನ ಆಯ್ದ ಭಾಗಗಳಲ್ಲಿ ಶಾಶ್ವತ ನೀರಿನ ತೊಟ್ಟಿಗಳನ್ನು ನಿರ್ಮಿಸಿದ್ದಾರೆ.

ಕೃತಕ ನೀರಿನ ತೊಟ್ಟಿಗಳಿಗೆ ಅರಣ್ಯ ಇಲಾಖೆಯಿಂದ ಟ್ಯಾಂಕರ್ ಮೂಲಕ ನೀರು ತುಂಬಿಸುತ್ತಿರುವುದು

ಸಾರ್ವಜನಿಕರೂ ಕೈಜೋಡಿಸಿ

ಈ ತೊಟ್ಟಿಗಳಿಗೆ ವಾರದಲ್ಲಿ ಒಮ್ಮೆ ಟ್ಯಾಂಕರ್ ಮೂಲಕ ನೀರು ತುಂಬಿಸಲಾಗುತ್ತದೆ. ತೊಟ್ಟಿಯ ಸುತ್ತಲಿನ ಆವರಣವನ್ನು ಗಿಡಗಂಟಿಗಳಿಂದ ತೆರವು ಮಾಡಿ ಪ್ರಾಣಿ ಪಕ್ಷಿಗಳಿಗೆ ನೀರು ಕುಡಿಯಲು ಅನುವು ಮಾಡಿಕೊಡಲಾಗುತ್ತದೆ. ಈ ಕಾರ್ಯಕ್ಕೆ ಸಾರ್ವಜನಿಕರು ಕೈಜೋಡಿಸಬೇಕು ಎಂದು ವಲಯ ಅರಣ್ಯಾಧಿಕಾರಿ ಗಿರೀಶ ಚೌಗಲೆ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.