ಅಫಜಲಪುರ (ಕಲಬುರಗಿ ಜಿಲ್ಲೆ): ಪ್ರತಿ ಟನ್ ಕಬ್ಬಿಗೆ ₹3500 ದರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾ ಮತ್ತು ತಾಲ್ಲೂಕು ಕಬ್ಬು ಬೆಳೆಗಾರ ಸಂಘದ ನೇತೃತ್ವದಲ್ಲಿ ಗುರುವಾರ 'ಅಫಜಲಪುರ ಬಂದ್'ಗೆ ಕರೆ ನೀಡಲಾಗಿದೆ.
ಬಂದ್ ಅಂಗವಾಗಿ ಪಟ್ಟಣದ ಬಸವೇಶ್ವರ ವೃತ್ತದಲ್ಲಿ ಬೆಳಿಗ್ಗೆಯಿಂದಲೇ ಪ್ರತಿಭಟನೆ ನಡೆಯುತ್ತಿದ್ದು, ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.
ಲಬುರಗಿ – ಸೋಲಾಪುರ, ವಿಜಯಪುರ – ಘತ್ತರಗಿ ಗ್ರಾಮಗಳಿಗೆ ಸಂಚರಿಸುವ ಜನರಿಗೆ ಮತ್ತು ವಾಹನ ಸಾರರಿಗೆ ತೊಂದರೆ ಆಗಿದೆ. ವಿಶೇಷವಾಗಿ ಗುರುವಾರ ತಾಲ್ಲೂಕಿನ ದೇವಾಲ ಗಾಣಗಾಪುರದಲ್ಲಿ ಕಾರ್ತಿಕ ಮಹೋತ್ಸವ ಹಾಗೂ ವನಭೋಜನ ಕಾರ್ಯಕ್ರಮ ಇರುವುದರಿಂದ ಮಹಾರಾಷ್ಟ್ರದ ಸಾಕಷ್ಟು ಯಾತ್ರಿಕರು ಬರುತ್ತಿದ್ದು ಅವರಿಗೆ ತೊಂದರೆಯಾಗುತ್ತಿದೆ.
ಇನ್ನೊಂದೆಡೆ ಪಟ್ಟಣದ ಮಾದಾಬಾಳ್ ತಾಂಡಾ ಹತ್ತಿರ ಕಲಬುರಗಿ ಮತ್ತು ಗಾಣಗಾಪುರಕ್ಕೆ ಸಂಚರಿಸಲು ರಾಷ್ಟ್ರೀಯ ಹೆದ್ದಾರಿ ಸಂಪರ್ಕಿಸುವ ಬೈಪಾಸ್ ರಸ್ತೆ ಮಾಡಲಾಗಿದೆ.
ಪ್ರತಿಭಟನೆಕಾರು ಕಬ್ಬು ಬೆಳೆಗಾರರು ಪಟ್ಟಣದ ನಾಲ್ಕು ರಸ್ತೆಗಳು ಬಂದ್ ಮಾಡಿ ಟೈರ್‌ಗೆ ಬೆಂಕಿ ಹಚ್ಚಿ ಸರ್ಕಾರ ಮತ್ತು ಕಾರ್ಖಾನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಹಲಿಗೆ ಬಡಿಯುತ್ತಾ ಬಜಾರ್‌ದಲ್ಲಿ ಸಂಚರಿಸಿ ಅಂಗಡಿ ಮುಂಗಟುಗಳು ಬಂದ್ ಮಾಡುವಂತೆ ಮನವಿ ಮಾಡಿದರು. ಹೀಗಾಗಿ ಪಟ್ಟಣದಲ್ಲಿ ಎಲ್ಲ ಕಡೆಗೂ ಅಂಗಡಿ ಮುಂಗಟ್ಟುಗಳು ಬಂದ್ ಮಾಡಲಾಗಿದೆ.
'ಕಬ್ಬು ಬೆಳೆಗಾರರಿಗೆ ತೂಕ ಮತ್ತು ಅಳತೆಯಲ್ಲಿ ಆಗುತ್ತಿರುವ ಮೋಸವನ್ನು ತಡೆಗಟ್ಟಬೇಕು. ಕಬ್ಬು ಸಾಗಿಸುವ ಟ್ರ್ಯಾಕ್ಟರ್ ಮಾಲೀಕರಿಂದ ಕಿರುಕುಳವಾಗುತ್ತಿದೆ. ಅವರು ಪ್ರತಿ ಟ್ರಿಪ್‌ಗೆ ಹಣ ಕೇಳುತ್ತಾರೆ. ಕಬ್ಬು ಕಟಾವು ಮಾಡುವ ಟೋಳಿಗಳು ಕಬ್ಬು ಬೆಳೆಗಾರರಿಂದ ಹಣ ವಸೂಲಿ ಮಾಡುತ್ತಿದ್ದಾರೆ. ಇದೆಲ್ಲವೂ ನಿಲ್ಲಬೇಕು' ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಯವರು ಪ್ರತಿ ಎಕರೆ ಕಬ್ಬಿಗೆ ₹3,500 ಬೆಲೆ ನಿಗದಿ ಮಾಡಿ ಕಾರ್ಖಾನೆ ಆರಂಭಿಸಬೇಕು. ನಾವು ಅಲ್ಲಿಯವರೆಗೆ ಪ್ರತಿಭಟನೆ ರಸ್ತೆ ತಡೆ ಹಿಂದಕ್ಕೆ ಪಡೆಯುವುದಿಲ್ಲ ಎಂದು ಕಬ್ಬು ಬೆಳೆಗಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಹೂಗಾರ ತಾಲ್ಲೂಕು ಘಟಕದ ಅಧ್ಯಕ್ಷ ಭಾಗಣ್ಣ ಕುಂಬಾರ, ಸಿದ್ದು ದನ್ನೂರ, ಲಕ್ಷ್ಮಿಪುತ್ರ ಮನಮಿ, ಶರಣಗೌಡ ಮಾಲಿ ಪಾಟೀಲ, ಧಾನು ಪತಾಟೆ, ರಾಜು ಬಡದಾಳ, ಸಿದ್ದರಾಮ ಸುಲ್ತಾನಪುರ, ಬಸವರಾಜ ವಾಳಿ, ರೇವಣಸಿದ್ದಯ್ಯ ಮಠ, ಧರೆಪ್ಪ ಗೌಡ ಬಿರಾದಾರ, ಶರಣಪ್ಪ ಮೇಳಕುಂದಿ ಮತ್ತಿತರರು ಇದ್ದರು.
ಪಟ್ಟಣದಲ್ಲಿ ಬಂದ್ ನಿಮಿತ್ತವಾಗಿ ವಿಶೇಷ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.