ADVERTISEMENT

ಆಳಂದ: 1,31,131 ಹೆಕ್ಟೇರ್ ಬಿತ್ತನೆ ಗುರಿ

ರೈತ ಸಂಪರ್ಕ ಕೇಂದ್ರಗಳ ಎದುರು ಬಿತ್ತನೆ ಬೀಜ ಖರೀದಿಗೆ ನೂಕುನುಗ್ಗಲು

​ಪ್ರಜಾವಾಣಿ ವಾರ್ತೆ
Published 8 ಜೂನ್ 2021, 7:58 IST
Last Updated 8 ಜೂನ್ 2021, 7:58 IST
ಮುನ್ನೋಳ್ಳಿ ಗ್ರಾಮದ ಹೊಲದಲ್ಲಿ ಬಿತ್ತನೆಯಲ್ಲಿ ನಿರತರಾಗಿರುವ ರೈತರು
ಮುನ್ನೋಳ್ಳಿ ಗ್ರಾಮದ ಹೊಲದಲ್ಲಿ ಬಿತ್ತನೆಯಲ್ಲಿ ನಿರತರಾಗಿರುವ ರೈತರು   

ಆಳಂದ: ತಾಲ್ಲೂಕಿನ ವಿವಿಧೆಡೆ ಕಳೆದ ವಾರದಿಂದ ಉತ್ತಮ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆಯ ಕಾರ್ಯದಲ್ಲಿ ನಿರತರಾಗಿದ್ದಾರೆ. ಪ್ರಸಕ್ತ ವರ್ಷ ತಾಲ್ಲೂಕಿನಲ್ಲಿ ಒಟ್ಟು 1,31,131 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿದೆ.

ತಾಲ್ಲೂಕಿನ ವಿವಿಧ ಮಳೆ ಮಾಪನಕೇಂದ್ರದ ಆಧಾರದಲ್ಲಿ ಖಜೂರಿ, ನರೋಣಾ ವಲಯ ಹಾಗೂ ನಿಂಬರ್ಗಾ ವಲಯ ವ್ಯಾಪ್ತಿಯಲ್ಲಿ ಉತ್ತಮ ಮಳೆಯಾಗಿದೆ. ಒಂದು ವಾರದಲ್ಲಿ ಆಳಂದ 125.6 ಮಿಮೀ, ಖಜೂರಿ 162.70 ಮಿ.ಮೀ, ನರೋಣಾ 170 ಮಿ.ಮೀ, ಮಾದನ ಹಿಪ್ಪರಗಾ 119 ಮಿ.ಮೀ, ನಿಂಬರ್ಗಾ 121 ಮಿ.ಮೀ ಮಳೆಯಾಗಿದೆ. ಹೀಗಾಗಿ ತಾಲ್ಲೂಕಿನ ಎಲ್ಲಡೆ ನಿರೀಕ್ಷೆಗಿಂತ ಹೆಚ್ಚಿನ ಮಳೆಯಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಶರಣಗೌಡ ತಿಳಿಸಿದರು.

ಮೂರು ದಿನಗಳಿಂದ ಉತ್ತಮ ಮಳೆಯಾಗಿರುವ ಖಜೂರಿ, ಮಟಕಿ, ತಡೋಳಾ, ಮುನ್ನೋಳ್ಳಿ, ಹೆಬಳಿ, ನಿಂಬರ್ಗಾ, ಬಟ್ಟರ್ಗಾ, ಹಿತ್ತಲ ಶಿರೂರು, ಚಿಂಚೋಳಿ, ನಿರಗುಡಿ ಗ್ರಾಮದ ರೈತರು ಬಿತ್ತನೆ ಆರಂಭಿಸಿದ್ದಾರೆ. ಮುಂಗಾರು ಬಿತ್ತನೆಗಾಗಿ ಕೃಷಿ ಇಲಾಖೆಯಿಂದ ಆಳಂದ, ಖಜೂರಿ, ನರೋಣಾ, ಮಾದನ ಹಿಪ್ಪರಗಾ, ನಿಂಬರ್ಗಾ ರೈತ ಸಂಪರ್ಕ ಕೇಂದ್ರಗಳಿಂದ ಈಗಾಗಲೇ ಬಿತ್ತನೆ ಬೀಜ ವಿತರಣೆ ಕಾರ್ಯ ನಡೆದಿದೆ. ಕೋವಿಡ್‌ ಸುರಕ್ಷತೆ ದೃಷ್ಟಿಯಿಂದ ರುದ್ರವಾಡಿ, ಕಿಣಿಸುಲ್ತಾನ , ಅಂಬಲಗಾ, ವಿ.ಕೆ.ಸಲಗರ ಕೃಷಿ ಪ್ರಾಥಮಿಕ ಸಹಕಾರಿ ಸಂಘದಿಂದಲೂ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ.

ADVERTISEMENT

ಉದ್ದು, ಹೆಸರು, ಸೋಯಾಬಿನ್, ಸಜ್ಜೆ ಸೇರಿದಂತೆ ಮುಂಗಾರು ಬಿತ್ತನೆಯ ಬೀಜಗಳು ವಿತರಣೆ ಕಾರ್ಯ ಮುಂದುವರದಿದೆ. ಆಳಂದ ಪಟ್ಟಣದ ಖಾಸಗಿ ಕೇಂದ್ರಗಳಲ್ಲಿಯು ಬೀಜ ಹಾಗೂ ರಸಗೊಬ್ಬರ ಖರೀದಿಯು ಜೋರಾಗಿ ನಡೆದಿದೆ.

ಆಳಂದ ಪಟ್ಟಣದ ಹೊರವಲಯದ ರೈತ ಸಂಪರ್ಕ ಕೇಂದ್ರದಲ್ಲಿ ಅಗತ್ಯ ಬೀಜ ಪಡೆಯಲು ರೈತರು ಬೆಳಗ್ಗೆಯಿಂದಲೇ ಸರದಿ ಸಾಲು ಕಂಡು ಬರುತ್ತಿದೆ. ಕೋವಿಡ್‌ ಸುರಕ್ಷತೆ ನಿಯಮಗಳು ಗಾಳಿಗೆ ತೂರಿ ಹಲವು ರೈತರು ನೂಕುನುಗ್ಗಲಲ್ಲಿ ನಿಂತು ಬಿತ್ತನೆ ಬೀಜದ ಪಾಕೇಟ್‌ ಪಡೆಯಲು ಹರಸಾಹಸ ಪಡುತ್ತಿದ್ದಾರೆ. ಖಜೂರಿ, ನರೋಣಾ ವಲಯದಲ್ಲಿ ಹೆಚ್ಚುವರಿಯಾಗಿ ಸಹಕಾರಿ ಸಂಘದಿಂದ ಬೀಜ ವಿತರಣೆ ಕೇಂದ್ರ ತೆರೆಯಲಾಗಿದೆ.

ತಾಲ್ಲೂಕಿನ ಯಳಸಂಗಿ, ಸರಸಂಬಾ, ಭೂಸನೂರು, ಜಿಡಗಾ, ನಿಂಬಾಳ ಕೃಷಿ ಸಹಕಾರಿ ಕೇಂದ್ರಗಳಲ್ಲಿ ಹೆಚ್ಚುವರಿ ಬೀಜ ವಿತರಣೆ ಕೇಂದ್ರ ತೆರೆದು ತಕ್ಷಣ ಬಿತ್ತನೆ ಬೀಜ ವಿತರಣೆ ಕೈಗೊಳ್ಳಲು ಎಂದು ಕೃಷಿಕ ಸಮಾಜದ ತಾಲ್ಲೂಕು ಅಧ್ಯಕ್ಷ ಗುರುಶರಣ ಪಾಟೀಲ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.