ADVERTISEMENT

ಕಲಬುರಗಿ | ಕಾಂಗ್ರೆಸ್ ಅಧ್ಯಕ್ಷ ಖರ್ಗೆ ತವರಿನಲ್ಲಿ ಪಾಲಿಕೆ ಆಡಳಿತ BJP ತೆಕ್ಕೆಗೆ

ವಿಶಾಲ ದರ್ಗಿ ಮೇಯರ್, ಶಿವಾನಂದ ಪಿಸ್ತಿ ಉಪ ಮೇಯರ್

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 11:46 IST
Last Updated 23 ಮಾರ್ಚ್ 2023, 11:46 IST
ಕಲಬುರಗಿ ಮಹಾನಗರ ಪಾಲಿಕೆ ನೂತನ ಮೇಯರ್ ವಿಶಾಲ ದರ್ಗಿ ಅವರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೂಗುಚ್ಛ ನೀಡಿ ಅಭಿನಂದಿಸಿದರು. ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಸುನೀಲ್ ವಲ್ಯಾಪುರೆ, ಶಾಸಕ ಬಸವರಾಜ ಮತ್ತಿಮಡು, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಉಪ ಮೇಯರ್ ಶಿವಾನಂದ ಪಿಸ್ತಿ, ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಇದ್ದರು
ಕಲಬುರಗಿ ಮಹಾನಗರ ಪಾಲಿಕೆ ನೂತನ ಮೇಯರ್ ವಿಶಾಲ ದರ್ಗಿ ಅವರಿಗೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಹೂಗುಚ್ಛ ನೀಡಿ ಅಭಿನಂದಿಸಿದರು. ವಿಧಾನಪರಿಷತ್ ಸದಸ್ಯರಾದ ಶಶೀಲ್ ನಮೋಶಿ, ಸುನೀಲ್ ವಲ್ಯಾಪುರೆ, ಶಾಸಕ ಬಸವರಾಜ ಮತ್ತಿಮಡು, ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ಉಪ ಮೇಯರ್ ಶಿವಾನಂದ ಪಿಸ್ತಿ, ಪರಿಷತ್ ಸದಸ್ಯ ಬಿ.ಜಿ. ಪಾಟೀಲ ಇದ್ದರು   

ಕಲಬುರಗಿ: ಇಲ್ಲಿನ ಟೌನ್‌ಹಾಲ್‌ನಲ್ಲಿ ಗುರುವಾರ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಯ 46ನೇ ವಾರ್ಡ್ ಸದಸ್ಯ ವಿಶಾಲ್ ದರ್ಗಿ ಮೇಯರ್ ಆಗಿ, 25ನೇ ವಾರ್ಡ್ ಸದಸ್ಯ ಶಿವಾನಂದ ಪಿಸ್ತಿ ಉಪಮೇಯರ್ ಆಗಿ ಚುನಾಯಿತರಾದರು. ಆ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಲ್ಲಿ 13 ವರ್ಷಗಳ ಬಳಿಕ ಬಿಜೆಪಿ ಅಧಿಕಾರದ ಗದ್ದುಗೆ ಏರಿತು.

68 ಜನರಿಗೆ ಮತದಾನಕ್ಕೆ ಅವಕಾಶವಿತ್ತು. ಅದರಲ್ಲಿ ರಾಜ್ಯಸಭೆ ಸದಸ್ಯರೂ ಆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಧಾನಪರಿಷತ್ ಸದಸ್ಯ ಬಿಜೆಪಿಯ ಲಕ್ಷ್ಮಣ ಸವದಿ ಹಾಗೂ ಜೆಡಿಎಸ್ ಸದಸ್ಯ ಅಲೀಮುದ್ದೀನ್ ಪಟೇಲ್ ಅವರು ಗೈರಾದರು. ಇದರಿಂದಾಗಿ 65 ಜನರು ಮತ ಹಾಕಿದರು.

ವಿಶಾಲ ದರ್ಗಿ 33 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಪ್ರಕಾಶ ಕಪನೂರ 32 ಮತಗಳನ್ನು ಪಡೆದು ಪರಾಭವಗೊಂಡರು. ಉಪ ಮೇಯರ್ ಹುದ್ದೆಗೆ ಸ್ಪರ್ಧಿಸಿದ್ದ ಶಿವಾನಂದ ಪಿಸ್ತಿ 33 ಮತಗಳನ್ನು ಪಡೆದರೆ, ಕಾಂಗ್ರೆಸ್ ಬೆಂಬಲಿತ ಜೆಡಿಎಸ್ ಅಭ್ಯರ್ಥಿ ವಿಜಯಲಕ್ಷ್ಮಿ ರೆಡ್ಡಿ ಅವರು 32 ಮತಗಳನ್ನು ಪಡೆದು ಪರಾಭವಗೊಂಡರು.

ADVERTISEMENT

ಚುನಾವಣೆ ಮುಕ್ತಾಯದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ, ‘ಚುನಾವಣೆ ಸುಸೂತ್ರವಾಗಿ ಮುಕ್ತಾಯವಾಗಿದ್ದು, ವಿಶಾಲ ದರ್ಗಿ ಮೇಯರ್, ಶಿವಾನಂದ ಪಿಸ್ತಿ ಉಪ ಮೇಯರ್ ಆಗಿ ಚುನಾಯಿತರಾಗಿದ್ದಾರೆ’ ಎಂದರು ಘೋಷಿಸಿದರು.

ಪಾಲಿಕೆಯಲ್ಲಿ ಕಾಂಗ್ರೆಸ್ ಪರಾಭವಗೊಳ್ಳುವ ಸಾಧ್ಯತೆ ಇದ್ದುದರಿಂದ ಎಐಸಿಸಿ ಅಧ್ಯಕ್ಷರೂ ಆದ ರಾಜ್ಯಸಭೆ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಅವರು ಮತದಾನದಲ್ಲಿ ಭಾಗವಹಿಸಲಿಲ್ಲ.ಇತ್ತೀಚೆಗೆ ವಿಧಾನಪರಿಷತ್ ಸದಸ್ಯತ್ವ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿರುವ ಬಾಬುರಾವ ಚಿಂಚನಸೂರ ಅವರಿಗೆ ಮತದಾನದ ಹಕ್ಕು ಇರಲಿಲ್ಲ. ವಿಧಾನಪರಿಷತ್ ಸದಸ್ಯ ಲಕ್ಷ್ಮಣ ಸವದಿ ಅವರು ಗೈರಾಗಿದ್ದರು. ಆಸ್ತಿ ವಿವರ ಸಲ್ಲಿಕೆಯ ಕುರಿತು ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಪಕ್ಷೇತರ ಸದಸ್ಯ ಶಂಭುಲಿಂಗ ಬಳಬಟ್ಟಿ ಅವರಿಗೆ ಮತದಾನದ ಹಕ್ಕು ಇರಲಿಲ್ಲ.

ಜೆಡಿಎಸ್‌ನಿಂದ ಚುನಾಯಿತರಾಗಿದ್ದ ಅಲೀಮುದ್ದೀನ್ ಪಟೇಲ್ ಅವರನ್ನು ಬಿಜೆಪಿಯವರೇ ಅಪಹರಿಸಿದ್ದಾರೆ ಎಂದು ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ಚುನಾವಣೆ ಸಂದರ್ಭದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು.

ಚುನಾವಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಕೆಆರ್‌ಡಿಬಿ ಅಧ್ಯಕ್ಷ, ಶಾಸಕ ದತ್ತಾತ್ರೇಯ ಪಾಟೀಲ ರೇವೂರ, ‘ಹಲವು ವರ್ಷಗಳ ಬಳಿಕ ಬಿಜೆಪಿ ಮಹಾನಗರ ಪಾಲಿಕೆಯ ಅಧಿಕಾರವನ್ನು ಹಿಡಿದಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಬೇಕಿದ್ದು, ಇದಕ್ಕೆ ಕಾಂಗ್ರೆಸ್ ಸದಸ್ಯರು ಸಹಕಾರ ನೀಡಬೇಕು. ಇಲ್ಲದಿದ್ದರೆ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ’ ಎಂದರು.

ಸಂಸದ ಡಾ. ಉಮೇಶ ಜಾಧವ, ರಾಜ್ಯಸಭೆ ಸದಸ್ಯ ಲಹರ್ ಸಿಂಗ್ ಸಿರೋಯಾ, ಶಾಸಕರಾದ ಖನೀಜ್ ಫಾತಿಮಾ, ಬಸವರಾಜ ಮತ್ತಿಮಡು, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ಶಶೀಲ್ ಜಿ. ನಮೋಶಿ, ಮುನಿರಾಜುಗೌಡ, ಭಾರತಿ ಶೆಟ್ಟಿ, ರಘುನಾಥರಾವ್ ಮಲ್ಕಾಪೂರೆ, ಚಂದ್ರಶೇಖರ ಪಾಟೀಲ ಹಾಗೂ ಸಾಬಣ್ಣ ತಳವಾರ ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.