
ಜೇವರ್ಗಿ: ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಸರ್ಕಲ್ ಹತ್ತಿರದ ಟೌನ್‌ಹಾಲ್‌ನಲ್ಲಿ ಶನಿವಾರ ತಾಲ್ಲೂಕಾಡಳಿತದ ವತಿಯಿಂದ ಹಮ್ಮಿಕೊಂಡ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಂಗ್ಲಿಷ್ ಪುಸ್ತಕಗಳ ಕೊಡುಗೆ ನೀಡಿರುವ ಘಟನೆ ಜರುಗಿದೆ.
ತಹಶೀಲ್ದಾರ್ ಮಲ್ಲಣ್ಣ ಯಲಗೋಡ ಅಧ್ಯಕ್ಷತೆಯಲ್ಲಿ ಜರುಗಿದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ವಿವಿಧ ಕನ್ನಡ ಪರ ಸಂಘಟನೆಯ ಮುಖಂಡರು, ಶಾಲಾ ಮಕ್ಕಳು, ಸಾಹಿತಿಗಳು, ಕಲಾವಿದರು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಅಧಿಕಾರಿಗಳಿಗೆ ಹಾಗೂ ಕನ್ನಡ ಪರ ಹೋರಾಟಗಾರರಿಗೆ, ಎಸ್‌ಎಸ್‌ಎಲ್‌ಸಿ ಕನ್ನಡ ಭಾಷೆಯಲ್ಲಿ ಅತಿ ಹೆಚ್ವು ಅಂಕ ಪಡೆದ ವಿದ್ಯಾರ್ಥಿಗಳಿಗೆ ಹಾಗೂ ನೂತನ ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಿಗೆ ಸನ್ಮಾನ ಮಾಡಲಾಯಿತು. ಈ ವೇಳೆ ಎಲ್ಲ ಅತಿಥಿಗಳಿಗೆ ಮುಚ್ಚಿದ ಲಕೋಟೆಯಲ್ಲಿ ಇಂಗ್ಲಿಷ್ ಪುಸ್ತಕಗಳನ್ನು ನೀಡಿ ಗೌರವಿಸಲಾಗಿದೆ.
ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ ಮಹನೀಯರ, ದಾರ್ಶನಿಕರ, ವಚನಕಾರರ, ಸಾಹಿತಿ, ವಿದ್ವಾಂಸರ ಪುಸ್ತಕಗಳನ್ನು ನೀಡುವ ಬದಲು ಆಂಗ್ಲ ಭಾಷೆಯ ಎಂ.ಬಿ.ಕಡಕೋಳ ರಚಿತ ಫೈನಾನ್ಸಿಯಲ್ ಅಕೌಂಟಿಂಗ್ ಪುಸ್ತಕ ನೀಡಿರುವುದಕ್ಕೆ ತಾಲ್ಲೂಕಿನ ಕನ್ನಡಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.