ಭೀಮಾ ನದಿ ಪ್ರವಾಹದಿಂದ ಮನೆಗೆ ನೀರು ಹೊಕ್ಕಿದ್ದರಿಂದ ಉಂಟಾದ ಕೆಸರನ್ನು ಕಲಬುರಗಿ ತಾಲ್ಲೂಕಿನ ಹಾಗರಗುಂಡಗಿ ಗ್ರಾಮದ ಮಲ್ಲಮ್ಮ ಮಾಂಗ ಅವರು ಶನಿವಾರ ತೆರವುಗೊಳಿಸಿದರು
ಪ್ರಜಾವಾಣಿ ಚಿತ್ರ
ಕಲಬುರಗಿ: ರಸ್ತೆ ದಾಟಲು ಮುಂದಾದರೆ ಎಲ್ಲಿ ಕಾಲು ಜಾರುವುದೋ ಎಂಬ ಭಯ, ಮನೆಯ ಮುಂದೆ ನಿಂತಿರುವ ಪ್ರವಾಹದ ನೀರು ತಂದು ಹಾಕಿರುವ ತ್ಯಾಜ್ಯ, ಓಣಿಯ ತುಂಬ ಹಬ್ಬಿರುವ ಸತ್ತ ಜಲಚರಗಳ ವಾಸನೆ, ನೆರೆಯ ನೀರಿನಿಂದ ಶಿಥಿಲಗೊಂಡ ಮನೆ ಯಾವಾಗ ಬೀಳುವುದೋ ಎಂಬ ಆತಂಕ...
ಇದು ಭೀಮಾ ನದಿ ಪ್ರವಾಹದಿಂದಾಗಿ ಒಂದು ವಾರದಿಂದ ಜಲಾವೃತವಾಗಿದ್ದ ಕಲಬುರಗಿ ತಾಲ್ಲೂಕಿನ, ಅಫಜಲಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಾಗರಗುಂಡಗಿ ಗ್ರಾಮದಲ್ಲಿ ಕಂಡು ಬಂದ ಶನಿವಾರದ ಭೀಕರ ನೋಟ.
ನೆರೆಯ ಮಹಾರಾಷ್ಟ್ರದ ಮೂರು ಜಲಾಶಯಗಳಿಂದ ಭಾರಿ ಪ್ರಮಾಣದಲ್ಲಿ ಹರಿದು ಬಂದ ಅಪಾರ ಪ್ರಮಾಣದ ನೀರು ಜಿಲ್ಲೆಯ ನಾಲ್ಕೈದು ತಾಲ್ಲೂಕುಗಳ ಸಾವಿರಾರು ಜನರನ್ನು ನಿರಾಶ್ರಿತರನ್ನಾಗಿ ಮಾಡಿತ್ತು. ಅಫಜಲಪುರ, ಜೇವರ್ಗಿ, ಕಲಬುರಗಿ, ಶಹಾಬಾದ್ ಹಾಗೂ ಚಿತ್ತಾಪುರ ತಾಲ್ಲೂಕಿನ ಸಾವಿರಾರು ಮನೆಗಳು ಜಲಾವೃತಗೊಂಡ ಪರಿಣಾಮ ಎಂಟು ಸಾವಿರಕ್ಕೂ ಅಧಿಕ ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಕಳೆದ ಮೂರು ದಿನಗಳಿಂದ ಭೀಮಾ ಪ್ರವಾಹ ಇಳಿಮುಖವಾಗಿದ್ದರಿಂದ ಜನರು ಮನೆಯತ್ತ ಮರಳುತ್ತಿದ್ದಾರೆ. ಆದರೆ, ಪ್ರವಾಹ ತಂದಿಟ್ಟ ತ್ಯಾಜ್ಯವು ಅವರಲ್ಲಿ ಭ್ರಮನಿರಸನ ಉಂಟು ಮಾಡಿದೆ.
ಹಾಗರಗುಂಡಗಿ ಗ್ರಾಮದಲ್ಲಿ ನದಿ ತೀರದ 70ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದವು, 200ಕ್ಕೂ ಅಧಿಕ ಜನರು ಕಾಳಜಿ ಕೇಂದ್ರದಲ್ಲಿ ಆಶ್ರಯ ಪಡೆದಿದ್ದರು. ಇದೀಗ ನಾಲ್ಕು ಕುಟುಂಬಗಳ 20ಕ್ಕೂ ಅಧಿಕ ಜನರು ಕಾಳಜಿ ಕೇಂದ್ರದಲ್ಲಿ ಉಳಿದುಕೊಂಡಿದ್ದಾರೆ. ಅವರೂ ಮನೆಗೆ ಬರಬೇಕು ಎಂಬ ಧಾವಂತದಲ್ಲಿದ್ದಾರಾದರೂ ಕೆಸರು ತುಂಬಿಕೊಂಡ ಮನೆಯನ್ನು ಹೇಗೆ ಸ್ವಚ್ಛಗೊಳಿಸುವುದು ಎಂಬ ಚಿಂತೆಯಲ್ಲಿದ್ದಾರೆ.
‘ನೋಡ ನೋಡುತ್ತಿದ್ದಂತೆಯೇ ನೀರು ಬಂದಿದ್ದರಿಂದ ಏನು ಮಾಡಬೇಕು ಎಂದು ದಿಕ್ಕು ತೋಚದೇ ಸರ್ಕಾರದವರು ತೆರೆದಿದ್ದ ಕಾಳಜಿ ಕೇಂದ್ರದಲ್ಲಿ ಎಂಟು ದಿನ ಉಳಿದೆವು. ಸೊಸೆಯಂದಿರನ್ನು ತವರು ಮನೆಗೆ ಕಳಿಸಿದೆವು. ನಮ್ಮ ಮನೆ ಒಂದು ವಾರ ನೀರಲ್ಲೇ ನಿಂತಿತ್ತು. ಎಲ್ಲವನ್ನೂ ಕಟ್ಟಿ ಮೇಲೆ ಇಟ್ಟಿದ್ದೆವು. ಪ್ರತಿ ಸರ್ತಿ ಹೀಗಾದರೆ ಹೆಂಗರಿ. ನಮಗೊಂದು ಬೇರೆ ಕಡೆ ಮನೆ ಕಟ್ಟಿಸಿಕೊಡಬೇಕು’ ಎಂದು ಹಾಗರಗುಂಡಗಿ ಗ್ರಾಮದ ವೃದ್ಧೆ ಇಮಾಮ್‌ಬಿ ತಮ್ಮ ಸಮಸ್ಯೆಯನ್ನು ‘ಪ್ರಜಾವಾಣಿ’ ಬಳಿ ಬಿಚ್ಚಿಟ್ಟರು.
ನದಿ ತೀರದ ಮನೆಗಳಿಗೆ ‘ಪ್ರಜಾವಾಣಿ’ ತಂಡ ಭೇಟಿ ನೀಡುತ್ತಿದ್ದಂತೆಯೇ ಕಾಳಜಿ ಕೇಂದ್ರದಿಂದ ಧಾವಿಸಿದ ಮಲ್ಲಮ್ಮ ಮಾಂಗ, ‘ದೊಡ್ಡ ಹಬ್ಬವಾದ ದಸರೆಯನ್ನು ಆಚರಿಸಲು ಸಾಧ್ಯವಾಗಲೇ ಇಲ್ಲ. ಮನೆಯ ಮೇಲೆಯಾದರೂ ಅಡುಗೆ ಮಾಡಿಕೊಳ್ಳಲು ಪ್ರಯತ್ನ ಮಾಡಿದೆವು. ಭಾರಿ ಪ್ರಮಾಣದಲ್ಲಿ ನೀರು ಬಂದಿದ್ದರಿಂದ ಸಾಮಾನು, ಸರಂಜಾಮುಗಳನ್ನು ಮನೆಯಲ್ಲೇ ಬಿಟ್ಟು ಶಾಲೆಯಲ್ಲಿ ತೆರೆದಿದ್ದ ಕಾಳಜಿ ಕೇಂದ್ರಕ್ಕೆ ಬಂದೆವು. ಈಗ ಎಲ್ಲ ಬಟ್ಟೆಗಳೂ ತೊಯ್ದು ಹೋಗಿದ್ದರಿಂದ ಏನು ಮಾಡಬೇಕೆಂಬುದೇ ತೋಚುತ್ತಿಲ್ಲ’ ಎಂದು ಬಕೆಟ್‌ನಲ್ಲಿ ನೀರು ತುಂಬಿಕೊಂಡು ಮನೆ ಸ್ವಚ್ಛಗೊಳಿಸಲು ಮುಂದಾದರು.
ಪ್ರವಾಹ ಇಳಿದ ಬಳಿಕ ಹಾಗರಗುಂಡಗಿ ಗ್ರಾಮದ ರಸ್ತೆಯ ತುಂಬ ಕೆಸರು ತುಂಬಿಕೊಂಡಿದ್ದು ಗ್ರಾಮಸ್ಥರು ಕೆಸರಿನಲ್ಲೇ ನಡೆದುಕೊಂಡು ಬರುತ್ತಿರುವುದು ಶನಿವಾರ ಕಂಡು ಬಂತು
ಪ್ರವಾಹದ ನೀರು ಬರದಂತೆ ನದಿ ದಡದಲ್ಲಿ ತಡೆಗೋಡೆ ನಿರ್ಮಿಸಬೇಕು. ಈ ಬಾರಿಯ ಪ್ರವಾಹಕ್ಕೆ ಇಡೀ ಊರು ದ್ವೀಪದಂತಾಗಿತ್ತು. ಮಿಣಜಗಿ ಮೂಲಕ ಹೋಗುವ ರಸ್ತೆಯನ್ನು ದುರಸ್ತಿಪಡಿಸಬೇಕು. ವಿಶೇಷ ಪ್ಯಾಕೇಜ್ ಘೋಷಿಸಬೇಕು.– ಬಾಬುರಾವ್ ಪರೀಟ, ಹಾಗರಗುಂಡಗಿ ಗ್ರಾಮಸ್ಥ
ಮನೆಯಲ್ಲಿಟ್ಟ ಸಾಮಾನುಗಳೊಂದಿಗೆ ಮನೆಯ ಗೋಡೆ ಕುಸಿದು ಬಿದ್ದಿದೆ. ಪ್ರವಾಹದ ನೀರು ಬಂದಾಗ ಕೊಡಗಳಲ್ಲಿ ಸಂಗ್ರಹಿಸಿ ಇಟ್ಟಿದ್ದ ನೀರನ್ನೇ ಕುಡಿದೆವು. ಬೇರೆ ಕಡೆ ಮನೆ ಹುಡುಕೋಣವೆಂದರೆ ಬಾಡಿಗೆ ಮನೆಯೂ ಸಿಗುತ್ತಿಲ್ಲ. ಸರ್ಕಾರ ಸ್ಥಳಾಂತರ ಮಾಡಬೇಕು.– ಶಿವಮ್ಮ ಹರಳಯ್ಯ, ಹಾಗರಗುಂಡಗಿ
ಅಧಿಕಾರಿಗಳೆಂದು ಧಾವಿಸಿ ಬಂದರು...
ಹಾಗರಗುಂಡಗಿ ಗ್ರಾಮಕ್ಕೆ ‘ಪ್ರಜಾವಾಣಿ’ ತಂಡ ಭೇಟಿ ನೀಡಿದಾಗ ಮನೆ ನೀರಲ್ಲಿ ನಿಂತಿದ್ದಕ್ಕೆ ಪರಿಹಾರ ಕೊಡುವ ಅಧಿಕಾರಿಗಳು ಬಂದಿದ್ದಾರೆ ಎಂದು ಭಾವಿಸಿ ಮಹಿಳೆಯರು ಧಾವಿಸಿ ಬಂದು ತಮ್ಮದೂ ಫೋಟೊ ತೆಗೆದುಕೊಳ್ಳುವಂತೆ ದುಂಬಾಲು ಬಿದ್ದರು.
ಮಹಿಳೆಯೊಬ್ಬರು ‘ನೀವು ಕಡಿಮೆ ನೀರು ಹೊಕ್ಕವರನ್ನು ಮಾತನಾಡಿಸುತ್ತಿದ್ದೀರಿ. ನಮ್ಮ ಫೋಟೊವನ್ನೂ ತೆಗೆದುಕೊಳ್ಳಿ’ ಎಂದು ಪಟ್ಟು ಹಿಡಿದರು. ಅವರ ಸಮಾಧಾನಕ್ಕಾಗಿ ಒಂದು ಫೋಟೊ ತೆಗೆದುಕೊಂಡು ಬರಬೇಕಾಯಿತು. ಕೆಲ ಮಹಿಳೆಯರು ‘ಬಟ್ಟೆ ಬರೆಗಳೆಲ್ಲ ನೀರಲ್ಲಿ ಕೊಚ್ಚಿ ಹೋಗಿದ್ದರಿಂದ ಹೊಸ ಬಟ್ಟೆ ಖರೀದಿಸಲೂ ಹಣವಿಲ್ಲ. ಕೆಲವು ಬಟ್ಟೆ ಬೆಡ್‌ಶೀಟ್ ಒದಗಿಸಿಕೊಡಿ’ ಎಂದು ಕೇಳಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.