ADVERTISEMENT

ಕಲಬುರಗಿ ಅಭಿವೃದ್ಧಿಯ ನೀಲನಕ್ಷೆ ಅನಾವರಣ

​ಪ್ರಜಾವಾಣಿ ವಾರ್ತೆ
Published 26 ಜನವರಿ 2026, 7:07 IST
Last Updated 26 ಜನವರಿ 2026, 7:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಕಲಬುರಗಿ: ‘ಭವಿಷ್ಯದಲ್ಲಿ ಕಲಬುರಗಿ ನಗರ ಹೇಗಿರಬೇಕು ಎಂಬ ಪರಿಕಲ್ಪನೆಯೊಂದಿಗೆ ₹ 297 ಕೋಟಿ ಮೊತ್ತದ ವಿವಿಧ ಕಾಮಗಾರಿಗಳಿಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

‘ಕಲಬುರಗಿ ನಗರದ ನಿವಾಸಿಗಳ ಜೀವನಮಟ್ಟ ಸುಧಾರಣೆಗೆ ಮತ್ತು ಹಸಿರು-ನೀಲಿ ಸುಸ್ಥಿರ ಅಭಿವೃದ್ಧಿಗೆ ಈಗಾಗಲೆ ಅರ್ಬನ್ ಪ್ಲ್ಯಾನರ್‌ಗಳ ಸೇವೆ ಪಡೆದು ನವ ಕಲಬುರಗಿ ನಿರ್ಮಾಣಕ್ಕೆ ಸರ್ಕಾರ ಪಣತೊಟ್ಟಿದೆ’ ಎಂದು ಜಿಲ್ಲಾಧಿಕಾರಿ ಕಚೇರಿ ಸಭಾಗಂಣದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

ADVERTISEMENT

‘ಮೊದಲ ಬಾರಿಗೆ ನಮ್ಮ ಸರ್ಕಾರ ಕಲಬುರಗಿ ಮಹಾನಗರದಲ್ಲಿ ರಸ್ತೆಗಳ ಆಡಿಟ್ ಮಾಡಿಸಿದೆ. 783.82 ಕಿ.ಮೀ ಮೇಲ್ಪದರಿನ ರಸ್ತೆ, 219.96 ಕಿ.ಮೀ. ಮೇಲ್ಪದರು ಇಲ್ಲದ ರಸ್ತೆ ಸೇರಿದಂತೆ ಒಟ್ಟಾರೆ 1003.78 ಕಿ.ಮೀ. ರಸ್ತೆ ಜಾಲವಿದೆ. ಸಂಪೂರ್ಣ ರಸ್ತೆ ಸುಧಾರಣೆಗೆ ಸುಮಾರು ₹300 ಕೋಟಿಗಳಷ್ಟು ಅನುದಾನದ ಅಗತ್ಯವಿದೆ. ಅದರಲ್ಲಿ ಮಹಾತ್ಮಗಾಂಧಿ ನಗರ ವಿಕಾಸ ಯೋಜನೆ 2.0 ಅಡಿ 53 ರಸ್ತೆಗಳನ್ನು ₹ 127.50 ಕೋಟಿ ವೆಚ್ಚದಲ್ಲಿ ಹೊಸದಾಗಿ/ಮರು ನಿರ್ಮಿಸಲಾಗುವುದು’ ಎಂದರು.

‘ಎಸ್.ಎಫ್.ಸಿ ₹ 25 ಕೋಟಿ ವಿಶೇಷ ಅನುದಾನದಲ್ಲಿ ಕಲಬುರಗಿ ಉತ್ತರ ಕ್ಷೇತ್ರದಲ್ಲಿ 10 ರಸ್ತೆಗಳನ್ನು ದುರಸ್ತಿ ಮಾಡಲಾಗುವುದು. ಎನ್‌ಕ್ಯಾಪ್‌ನ ₹ 1 2.44 ಕೋಟಿ ಅನುದಾನದಲ್ಲಿ ಎಸ್.ವಿ.ಪಿ ವೃತ್ತದಿಂದ ಜಗತ್ ವೃತ್ತ, ಜಗತ್ ವೃತ್ತದಿಂದ ಹುಮನಾಬಾದ್‌ ಬೇಸ್ ಹಾಗೂ ಅನ್ನಪೂರ್ಣ ಕ್ರಾಸ್‌ನಿಂದ ಸೇಡಂ ರಸ್ತೆ ಅಭಿವೃದ್ಧಿಪಡಿಸಲಾಗುತ್ತಿದೆ. ಒಟ್ಟಾರೆಯಾಗಿ ₹ 164 ಕೋಟಿ ವೆಚ್ಚದಲ್ಲಿ ರಸ್ತೆಗಳ ಸುಧಾರಣೆ ನಡೆಯಲಿದೆ. ಇದಲ್ಲದೆ 31 ವಾರ್ಡ್‌ಗಳಲ್ಲಿ 60.51 ಕಿ.ಮೀ ರಸ್ತೆ ನಿರ್ಮಾಣ ಮತ್ತು ರಿಲೇಯಿಂಗ್ ಮಾಡಬೇಕಾಗಿದೆ. ಇದಕ್ಕಾಗಿ ₹ 157.62 ಕೋಟಿ ಡಿಪಿಆರ್‌ ಸಿದ್ದಪಡಿಸಲಾಗಿದೆ’ ಎಂದರು.

ಉದ್ಯಾನಗಳ ಅಭಿವೃದ್ಧಿ:

‘ಕಲಬುರಗಿ ಪಾಲಿಕೆಯಿಂದ 2024–25ನೇ ಸಾಲಿನ ಕೆಕೆಆರ್‌ಡಿಬಿ ಮ್ಯಾಕ್ರೊ ಯೋಜನೆಯಡಿ ಒಟ್ಟು 4 ನಾಲ್ಕು ಉದ್ಯಾನಗಳನ್ನು ₹ 7.50 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. 3 ಕಾಮಗಾರಿಗಳು ಟೆಂಡರ್ ಪ್ರಕ್ರಿಯೆಯಲ್ಲಿದ್ದರೆ, ಅಕ್ಕಮಹಾದೇವಿ ಕಾಲೊನಿ ಉದ್ಯಾನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಅಮೃತ 2.0 ಯೋಜನೆಯಡಿ ₹ 4 ಕೋಟಿ ವೆಚ್ಚದಲ್ಲಿ ಐದು ಉದ್ಯಾನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಪಾಲಿಕೆಯಿಂದ ₹ 3 ಕೋಟಿ ಪಬ್ಲಿಕ್‌ ಗಾರ್ಡನ್, ₹ 3 ಕೋಟಿ ಅನುದಾನದಲ್ಲಿ ರಾಜೀವ್ ಗಾಂಧಿ ಥೀಮ್ ಪಾರ್ಕ್ ಅಭಿವೃದ್ಧಿಪಡಿಸಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಹಂತದಲ್ಲಿದೆ’ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

‘ಇದಲ್ಲದೆ ಕೆ.ಆರ್.ಐ.ಡಿ.ಎಲ್ ಸಂಸ್ಥೆಯಿಂದ ಕಲಬುರಗಿ ದಕ್ಷಿಣ ಮತಕ್ಷೇತ್ರದ ವಿವಿಧ ವಾರ್ಡ್‌ಗಳಲ್ಲಿ ಸುಮಾರು ₹2.10 ಕೋಟಿ ವೆಚ್ಚದಲ್ಲಿ ಏಳು ಉದ್ಯಾನ ಅಭಿವೃದ್ಧಿಪಡಿಸಲಾಗುತ್ತಿದೆ. ಜೊತೆಗೆ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ₹ 4.50 ಕೋಟಿ ವೆಚ್ಚದಲಿ 18 ಉದ್ಯಾನಗಳ ಅಭಿವೃದ್ಧಿ ನಡೆಯಲಿದೆ. ಒಟ್ಟಾರೆಯಾಗಿ ಪಾಲಿಕೆ ಮತ್ತು ಕುಡಾದಿಂದ ₹ 22.40 ಕೋಟಿ ವೆಚ್ಚದಲ್ಲಿ ನಗರದಾದ್ಯಂತ 33 ಉದ್ಯಾನಗಳ ಅಭಿವೃದ್ಧಿ ನಡೆಯಲಿದೆ’ ಎಂದು ಸಚಿವರು ತಿಳಿಸಿದರು.

25 ವೃತ್ತ–ಜಂಕ್ಷನ್‌ಗಳ ಸೌಂದರ್ಯೀಕರಣ:

ಒಟ್ಟು ₹ 13.40 ಕೋಟಿ ವೆಚ್ಚದಲ್ಲಿ ನಗರದ 25 ಜಂಕ್ಷನ್‌/ ವೃತ್ತಗಳ ಸೌಂದರ್ಯೀಕರಣ ಮಾಡಲಾಗುತ್ತಿದೆ. ಈ ಪೈಕಿ ಎಂಜಿಎನ್‌ವಿವೈ 2.0 ಅಡಿಯ ₹ 4 ಕೋಟಿ ವೆಚ್ಚದಲ್ಲಿ 8 ವೃತ್ತಗಳು, ಎನ್‌ಕ್ಯಾಪ್‌ ಯೋಜನೆಯಡಿ ₹3.60ಕೋಟಿ ವೆಚ್ಚದಲ್ಲಿ ಏಳು ವೃತ್ತಗಳ ಅಭಿವೃದ್ಧಿ ನಡೆಯಲಿದೆ. ಕುಡಾದಿಂದ ₹ 5.80 ಕೋಟಿ ವೆಚ್ಚದಲ್ಲಿ 10 ಪ್ರಮುಖ ವೃತ್ತಗಳ ಅಭಿವೃದ್ಧಿ ನಡೆಯಲಿದ್ದು, ಈಗಾಗಲೇ ಟೆಂಡರ್‌ ಕರೆಯಲಾಗಿದೆ ಎಂದು ಸಚಿವ ಪ್ರಿಯಾಂಕ್‌ ಹೇಳಿದರು.

‘₹ 34.50 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ’

ಕಲಬುರಗಿಯ ನಗರದ ಹೃದಯ ಭಾಗದಲ್ಲಿರುವ ಶರಣಬಸವೇಶ್ವರ ಅಪ್ಪ ಕೆರೆ ₹ 1 ಕೋಟಿ ವೆಚ್ಚದಲ್ಲಿ, ₹ 14.50 ಕೋಟಿ ಮೊತ್ತದಲ್ಲಿ ಬಹಮನಿ ಕೋಟೆ ಕಂದಕ ಪ್ರದೇಶ ಸೇರಿದಂತೆ ಒಟ್ಟು ₹ 34.50 ಕೋಟಿ ವೆಚ್ಚದಲ್ಲಿ ಕೆರೆಗಳ ಅಭಿವೃದ್ಧಿ ಜೊತೆಗೆ ಜಲಮೂಲಗಳ ಸಂರಕ್ಷಣೆಗೂ ಆದ್ಯತೆ ನೀಡಲಾಗಿದೆ’ ಎಂದು ಪ್ರಿಯಾಂಕ್‌ ವಿವರಿಸಿದರು.

ಮಹಾನಗರ ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಅವರು ನಗರದಲ್ಲಿ ಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ನಡೆಯುತ್ತಿರುವ ಕಾಮಗಾರಿಗಳ ಕುರಿತು ಪಿ.ಪಿ.ಟಿ. ಮೂಲಕ ವಿವರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ, ಕುಡಾ ಅಧ್ಯಕ್ಷ ಮಜಹರ್‌ ಆಲಂಖಾನ್‌ ಸೇರಿದಂತೆ ಹಲವರು ಇದ್ದರು.