ಕಲಬುರಗಿಯಲ್ಲಿ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಅಂಗವಾಗಿ ಬುಧವಾರ ಜಿಮ್ಸ್ ಆಸ್ಪತ್ರೆ ಆವರಣದಿಂದ ಜಾಗೃತಿ ಜಾಥಾ ನಡೆಯಿತು
ಕಲಬುರಗಿ: ‘ಮನುಷ್ಯ ಘನತೆಯಿಂದ ಬದುಕಬೇಕು. ಕಷ್ಟಗಳು ಎಲ್ಲರಿಗೂ ಬರುತ್ತವೆ. ಹಾಗಂತ ಆತ್ಮಹತ್ಯೆ ಎಲ್ಲದಕ್ಕೂ ಪರಿಹಾರವಲ್ಲ. ಆತ್ಮಹತ್ಯೆಗೆ ಪ್ರಯತ್ನಿಸುವುದು ಅಪರಾಧವೆಂದು 1860ರಲ್ಲೇ ಬ್ರಿಟಿಷರಿದ್ದಾಗಲೇ ಕಾನೂನು ಜಾರಿಯಾಗಿದೆ’ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶ್ರೀನಿವಾಸ ನವಲೆ ಹೇಳಿದರು.
ಜಿಮ್ಸ್ ಕಮ್ಯುನಿಟಿ ಮೆಡಿಷಿನ್ ಸಭಾಂಗಣದಲ್ಲಿ ಬುಧವಾರ ವಿಶ್ವ ಆತ್ಮಹತ್ಯೆ ತಡೆಗಟ್ಟುವ ದಿನದ ಕುರಿತ ಅರಿವಿನ ಕಾರ್ಯಕ್ರಮ ಮತ್ತು ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಪ್ತ ಸಮಾಲೋಚಕರ ತರಬೇತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಆತ್ಮಹತ್ಯೆ ಬೆದರಿಕೆ ತಂತ್ರಗಳಿಗೆ ಶಿಕ್ಷೆ ಇದೆ. ಆತ್ಮಹತ್ಯೆಗೆ ಪ್ರಯತ್ನಿಸಿದವರಿಗೆ 1 ವರ್ಷ ಸಜೆ ಇದೆ. 2017ರಲ್ಲಿ ಮಾನಸಿಕ ಆರೋಗ್ಯ ಕಾಯ್ದೆ ಜಾರಿಯಾಗಿದ್ದು, ಮಾನಸಿಕ ಖಿನ್ನತೆಗೆ ಒಳಗಾದವರನ್ನು ಆರೈಕೆ ಮಾಡುವ ಕೆಲಸ ನಡೆಯುತ್ತಿದೆ. ಕೌಟುಂಬಿಕ ಸಮಸ್ಯೆ, ಹಣಕಾಸಿನ ತೊಂದರೆ, ವ್ಯವಹಾರದಲ್ಲಿ ನಷ್ಟ ಹೀಗೆ ಅನೇಕ ಕಾರಣಗಳಿಗೆ ಆತ್ಮಹತ್ಯೆಗಳು ಸಂಭವಿಸುತ್ತವೆ. ಅದರಲ್ಲಿ ವಿದ್ಯಾರ್ಥಿಗಳು, ರೈತರೇ ಹೆಚ್ಚಾಗಿದ್ದಾರೆ. ಆತ್ಮಹತ್ಯೆಗೆ ಪ್ರಯತ್ನಿಸಿದವರಿಗೆ ಸಾಂತ್ವನ ಹೇಳಿ, ಮಾನಸಿಕ ಧೈರ್ಯ ತುಂಬಿ’ ಎಂದು ಹೇಳಿದರು.
ಜಿಮ್ಸ್ ಆಸ್ಪತ್ರೆ ಮನೋರೋಗ ವಿಭಾಗದ ಮುಖ್ಯಸ್ಥ ಡಾ.ಪ್ರಭುಕಿರಣ ವಿ. ಗೋಗಿ ಮಾತನಾಡಿ, ‘ಪ್ರತಿವರ್ಷ ದೇಶದಲ್ಲಿ 7 ಲಕ್ಷ ಮಂದಿ ಆತ್ಮಹತ್ಯೆಗೆ ಈಡಾಗುತ್ತಿದ್ದಾರೆ. ಇದರ ಪ್ರಮಾಣ ಹೆಚ್ಚಾಗುತ್ತಲೇ ಇದ್ದು, ಪ್ರತಿವರ್ಷ 20 ಮಂದಿ ಸೇರಿಕೊಳ್ಳುತ್ತಲೇ ಇದ್ದಾರೆ. ಮನುಷ್ಯ ಸಾಯುವುದರಿಂದ ಕಷ್ಟಗಳನ್ನು ತೆಗೆದುಕೊಂಡು ಹೋಗಲ್ಲ, ಬದಲಾಗಿ ಇರುವವರ ಮೇಲೆ ಹಾಕಿ ಹೋಗ್ತಾನೆ. ಹೀಗಾಗಿ ಸಾವು ಪರಿಹಾರ ಎನ್ನುವ ಮನೋಭಾವನೆ ಬದಲಾಗಬೇಕು’ ಎಂದು ಹೇಳಿದರು.
‘ಆತ್ಮಹತ್ಯೆಗೆ ಮಾನಸಿಕ ಒತ್ತಡ ಮತ್ತು ಚಿಂತೆ ಕಾರಣ. ಒಬ್ಬ ವ್ಯಕ್ತಿಯ ಆತ್ಮಹತ್ಯೆಯಿಂದ ಇಡೀ ಕುಟುಂಬ ಸಂಕಷ್ಟ ಅನುಭವಿಸುತ್ತದೆ. ಇತ್ತೀಚೆಗೆ ಮಕ್ಕಳೂ ಆತ್ಮಹತ್ಯೆಯ ಮೊರೆ ಹೋಗುತ್ತಿದ್ದು, ಅದಕ್ಕೆ ವ್ಯಕ್ತಿತ್ವದ ಸಮಸ್ಯೆಗಳು ಕಾರಣ. ಮನುಷ್ಯನಲ್ಲಿ ತಾಳ್ಮೆ ಕಡಿಮೆಯಾಗಿ ನಿರೀಕ್ಷೆಗಳು ಹೆಚ್ಚಾದಾಗ ಆತ್ಮಹತ್ಯೆಗಳು ಸಂಭವಿಸುತ್ತವೆ. ಹೀಗಾಗಿ ಉಚಿತ ಆಪ್ತ ಸಮಾಲೋಚನೆಗಾಗಿ ಟೋಲ್ ಫ್ರೀ ನಂ. 14416/1800–89–14416 ಸಂಪರ್ಕಿಸಬೇಕು. ಇದನ್ನು ಸಾರ್ವಜನಿಕರಿಗೂ ಮುಟ್ಟಿಸಿ’ ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕ್ಲಿನಿಕಲ್ ಸೈಕಾಲಜಿಸ್ಟ್ ಸಂತೋಷಿ ಗೋಳೆ ಪ್ರಮಾಣವಚನ ಬೋಧಿಸಿದರು. ಗಂಗೂಬಾಯಿ ಪ್ರಾರ್ಥಿಸಿದರು. ನಾಗರಾಜ ಬಿರಾದಾರ ನಿರೂಪಿಸಿದರು. ಮಕ್ಕಳ ಸಮಾಲೋಚಕ ಮಂಜುನಾಥ ಕಂಬಾಳಿಮಠ ಸೇರಿದಂತೆ ಸಮುದಾಯ ಆರೋಗ್ಯ ಅಧಿಕಾರಿಗಳು, ಆಪ್ತ ಸಮಾಲೋಚಕರು ಹಾಜರಿದ್ದರು. ವೇದಿಕೆ ಕಾಯರ್ಕ್ರಮಕ್ಕೂ ಮೊದಲು ಜಿಮ್ಸ್ ಆಸ್ಪತ್ರೆ ಆವರಣದಿಂದ ಜಾಥಾ ನಡೆಯಿತು.
‘ಆತ್ಮಹತ್ಯೆ ಮಾನಸಿಕ ಕಾಯಿಲೆ’ ‘ಯುವಜನತೆಯೇ ಆತ್ಮಹತ್ಯೆಗೆ ಹೆಚ್ಚು ಈಡಾಗುತ್ತಿದ್ದಾರೆ’ ಎಂದು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಅಧಿಕಾರಿ ಡಾ.ವಿವೇಕಾನಂದ ರಡ್ಡಿ ವಿಷಾದ ವ್ಯಕ್ತಪಡಿಸಿದರು. ‘ಆತ್ಮಹತ್ಯೆ ಮಾನಸಿಕ ಕಾಯಿಲೆಯಾಗಿದೆ. ಈ ಕಾಯಿಲೆಗೆ ಚಿಕಿತ್ಸೆ ಇದೆ. ಹೀಗಾಗಿ ಅರಿವು ಮೂಡಿಸುವ ಕಾರ್ಯ ಹೆಚ್ಚಾಗಬೇಕು. ಹೀಗಾಗಿ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಪ್ತ ಸಮಾಲೋಚಕರು ತರಬೇತಿಯ ನಂತರ ಶಾಲಾ ಕಾಲೇಜು ಹಾಸ್ಟೆಲ್‌ಗಳಿಗೆ ಹೆಚ್ಚು ಭೇಟಿ ನೀಡಿ ಅರಿವು ಮೂಡಿಸಿ. ಸಮುದಾಯದಲ್ಲೂ ಜಾಗೃತಿ ಮೂಡಿಸಿ’ ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.