ಚಿತ್ತಾಪುರ: ಪಟ್ಟಣದ ವೆಂಕಟೇಶ್ವರ ಬಡಾವಣೆಯಲ್ಲಿ ಭಾನುವಾರ ರಾತ್ರಿ ಎರಡು ಮನೆಗಳಲ್ಲಿ ಕಳ್ಳತನ ನಡೆದಿದೆ.
ಗುರುನಾಥ ಹಿಟ್ಟಿನ ಗಿರಿಣಿಯವರ ಮನೆಯಲ್ಲಿದ್ದ 20 ಗ್ರಾಂ ಬಂಗಾರ, 150 ಗ್ರಾಂ ಬೆಳ್ಳಿ ಹಾಗೂ ₹10 ಸಾವಿರ ನಗದು ಕಳ್ಳತನವಾಗಿದೆ.
ಇದೇ ಬಡಾವಣೆಯಲ್ಲಿನ ಧೂಳಯ್ಯ ಸ್ವಾಮಿ ಎನ್ನುವವರ ಮನೆಯಲ್ಲಿದ್ದ 30 ಗ್ರಾಂ ಬಂಗಾರ, 90 ಗ್ರಾಂ ಬೆಳ್ಳಿ ಹಾಗೂ ₹30 ಸಾವಿರ ನಗದು ಕಳ್ಳತನವಾಗಿದೆ. ಶಂಕರ ಕೊಳಕೂರ್ ಎನ್ನುವವರ ಮನೆಯ ಬೀಗ ಮುರಿದು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಗುರುನಾಥ ಹಿಟ್ಟಿನ ಗಿರಣಿಯವರು ಶುಕ್ರವಾರ ಬೆಂಗಳೂರಿಗೆ ಹೋಗಿ ಮರಳಿ ಸೋಮವಾರ ಬೆಳಗಿನ ಜಾವ 5 ಗಂಟೆಗೆ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿದ್ದು ಬೆಳಕಿಗೆ ಬಂದಿದೆ. ಧೂಳಯ್ಯಸ್ವಾಮಿ ಅವರು ಕಾಳಗಿ ತಾಲ್ಲೂಕಿನ ರಟಕಲ್‌ಗೆ ಹೋದಾಗ ಮನೆ ಕಳ್ಳತನವಾಗಿದೆ.
ಸುದ್ದಿ ತಿಳಿಯುತ್ತಿದ್ದಂತೆ ಸಿಪಿಐ ಚಂದ್ರಶೇಖರ ತಿಗಡಿ, ಪಿಎಸ್‌ಐ ಶ್ರೀಶೈಲ ಅಂಬಾಟಿ, ಕ್ರೈಂ ಪಿಎಸ್‌ಐ ಚಂದ್ರಾಮಪ್ಪ, ಸಿಬ್ಬಂದಿ ಲಾಲ್ ಅಹ್ಮದ್, ದತ್ತು ಜಾನೆ, ಬೆರಳಚ್ಚು ತಜ್ಞರು ಹಾಗೂ ಶ್ವಾನ ದಳದ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.