ADVERTISEMENT

ಚಿಂಚೋಳಿ: ಇಬ್ಬರು ಎಸ್‌ಐಗಳ ಅಮಾನತು

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 5:20 IST
Last Updated 26 ಜನವರಿ 2021, 5:20 IST

ಕಲಬುರ್ಗಿ: ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಸುಳಿವಿಗಾಗಿ ಯುವಕನೊಬ್ಬನನ್ನು ವಿಚಾರಣೆಗೊಳಪಡಿಸಿರುವುದು ಇಬ್ಬರು ಸಬ್ ಇನಸ್ಪೆಕ್ಟರ್‌ಗಳಿಗೆ ಉರುಳಾಗಿ ಪರಿಣಮಿಸಿದ್ದು, ಚಿಂಚೋಳಿ ಠಾಣೆಯ ಸಬ್ ಇನ್‌ಸ್ಪೆಕ್ಟರ್‌ ರಾಜಶೇಖರ ರಾಠೋಡ ಮತ್ತು ಸುಲೇಪೇಟ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಚೇತನ ಬಿದಿರಿ ಅವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್ ಅಮಾನತು ಮಾಡಿದ್ದಾರೆ.

ಈಚೆಗೆ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪಿ ತಲೆ ಮರೆಸಿಕೊಂಡಿದ್ದರಿಂದ ಆತನ ಪತ್ತೆಗಾಗಿ ಆರೋಪಿಯ ಸ್ನೇಹಿತನೊಬ್ಬನನ್ನು ವಿಚಾರಣೆಗೆ ಒಳಪಡಿಸಿದ್ದರು.

ತನಗೆ ವಿನಾಕಾರಣ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಸಂಘಟನೆಯೊಂದರ ಮುಖಂಡರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದರು ಎನ್ನಲಾಗಿದೆ. ಇದನ್ನು ಆಧರಿಸಿ ಇಬ್ಬರು ಸಬ್ ಇನ್‌ಸ್ಪೆಕ್ಟರ್‌ಗಳನ್ನು ಅಮಾನತುಗೊಳಿಸಲಾಗಿದೆ.

ADVERTISEMENT

ಕಳೆದ ನವೆಂಬರ್ ತಿಂಗಳಲ್ಲಿ ಚಿಂಚೋಳಿ ಪೊಲೀಸ್ ಠಾಣೆಯ ಎದುರು ದಲಿತ ಸಂಘಟನೆಗಳ ಮುಖಂಡರು ಧರಣಿ ನಡೆಸಿದ್ದರು. ಇದಕ್ಕೆ ಪ್ರತಿಯಾಗಿ ವಿವಿಧ ಸಮಾಜದ ಮುಖಂಡರು, ಬಿಜೆಪಿ ಕಾರ್ಯಕರ್ತರು ಚಿಂಚೋಳಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ ನಿರ್ದಿಷ್ಟ ಸಮುದಾಯದ ಯುವತಿಯರ ಅಪಹರಣ, ಚುಡಾಯಿಸುವಿಕೆ ಮೂಲಕ ಸಮಾಜದ ಸ್ವಾಸ್ಥ್ಯ ಕದಡಲಾಗುತ್ತಿದೆ ಮತ್ತು ಅಧಿಕಾರಿಗಳಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಅಧಿಕಾರಿಗಳ ಪರ ನಿಂತವರೇ ಈಗ ದೂರು ನೀಡಿದ್ದರಿಂದ ಅಧಿಕಾರಿಗಳಿಗೆ ಉರುಳಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.