ಕಲಬುರಗಿ: ‘ದೇಶದಲ್ಲಿ ರಾಹುಲ್ ಗಾಂಧಿ ಅವರು ನಡೆಸುತ್ತಿರುವ ಮತಗಳ್ಳತನ ಅಭಿಯಾನಕ್ಕೆ ಆಳಂದದಲ್ಲಿ ಮತದಾರರ ಹೆಸರುಗಳನ್ನು ಮತದಾರರಪಟ್ಟಿಯಿಂದ ಅಳಿಸಲು ಯತ್ನಿಸಿದ್ದ ಪ್ರಕರಣವೇ ಜೀವಂತ ಸಾಕ್ಷಿ’ ಎಂದು ಆಳಂದ ಶಾಸಕರೂ ಆಗಿರುವ ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಹೇಳಿದರು.
‘2023ರ ವಿಧಾನಸಭಾ ಚುನಾವಣೆಗೂ ಮುನ್ನ ಆಳಂದ ಮತಕ್ಷೇತ್ರದಲ್ಲಿ 6 ಸಾವಿರದಷ್ಟು ಹೆಸರುಗಳನ್ನು ಮತದಾರರಪಟ್ಟಿಯಿಂದ ಅಳಿಸಲು ಯತ್ನಿಸಲಾಗಿತ್ತು. ಮತದಾರಪಟ್ಟಿಯಿಂದ ಹೆಸರು ಅಳಿಸಲು ಸಲ್ಲಿಕೆಯಾಗಿದ್ದ 6,018 ಅರ್ಜಿಗಳ ಪೈಕಿ 24 ಅರ್ಜಿಗಳ ಮಾತ್ರವೇ ನೈಜವೆಂದು ಸಾಬೀತಾಗಿತ್ತು. ಇನ್ನುಳಿದ 5,994 ಅರ್ಜಿಗಳು ನಕಲಿ ಎಂದು ಸಾಬೀತಾಗಿತ್ತು’ ಎಂದು ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಆರೋಪಿಸಿದರು.
‘ನನ್ನ ಬೆಂಬಲಿಗರ ಹೆಸರುಗಳನ್ನು ಮತದಾರರಪಟ್ಟಿಯಿಂದ ಅಳಿಸಿ ಹಾಕಲು ನಕಲಿ ಫಾರಂ–7 ಬಳಸಲಾಗಿತ್ತು. ಈ ಸಂಬಂಧ ಆಗಿನ ಚುನಾವಣಾ ಅಧಿಕಾರಿ ನೀಡಿದ ದೂರಿನ್ವಯ ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೊದಲಿಗೆ ಆಳಂದ ಡಿವೈಎಸ್ಪಿ, ನಂತರ ಹೆಚ್ಚುವರಿ ಎಸ್ಪಿ ತನಿಖೆ ನಡೆಸಿದರೂ ತಾರ್ಕಿಕ ಅಂತ್ಯ ಕಾಣಲಿಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಅದನ್ನು ಸಿಐಡಿಗೆ ವಹಿಸಿತ್ತು. ಆದರೆ, ಸಿಐಡಿ ತನಿಖೆಗೆ ಚುನಾವಣಾ ಆಯೋಗದ ಅಧಿಕಾರಿಗಳು ಸಮರ್ಪಕ ಮಾಹಿತಿ ನೀಡದ ಕಾರಣ ತನಿಖೆಗೆ ಸ್ಥಗಿತಗೊಂಡಿದೆ’ ಎಂದರು.
ಕೈವಾಡ ಪತ್ತೆಯಾಗಲಿ: ‘ಮತದಾರರ ಹೆಸರು ಅಳಿಸಲು ಎರಡು ಗುಂಪುಗಳನ್ನು ಸೇರಿಸಿ ವ್ಯವಸ್ಥಿತವಾಗಿ ಷಡ್ಯಂತ್ರ ನಡೆಸಲಾಗಿತ್ತು. ಆ ಗುಂಪುಗಳಿಗೆ ಸ್ಥಳೀಯರಲ್ಲಿ ಯಾರೆಲ್ಲ ನಮ್ಮ ಬೆಂಬಲಿಗರು ಎಂಬುದನ್ನು ರಾಜಕೀಯ ವಿರೋಧಿಗಳು ಮಾಹಿತಿ ಕೊಟ್ಟ ಬಳಿಕ, ಅವರ ಹೆಸರುಗಳನ್ನು ಡಿಲೀಟ್ ಮಾಡಲು ಅರ್ಜಿಗಳು ಸಲ್ಲಿಕೆಯಾಗಿದ್ದವು. ಜಾರ್ಖಂಡ್, ಚೆನ್ನೈ, ಮಂಡ್ಯ, ಮಹಾರಾಷ್ಟ್ರದಿಂದ ಇಂಥ ಅರ್ಜಿಗಳು ಸಲ್ಲಿಸಿರುವುದು ಗೊತ್ತಾಗಿತ್ತು. ಈ ಅಕ್ರಮದಲ್ಲಿ ಯಾರ ಕೈವಾಡವಿದೆ ಎಂಬುದು ಹೊರಬರಬೇಕು. ಅಲ್ಲಿಯ ತನಕ ನ್ಯಾಯಕ್ಕಾಗಿ ಹೋರಾಟ ನಡೆಸಲಾಗುವುದು’ ಎಂದರು.
‘ಆರಂಭದಲ್ಲಿ ತನಿಖೆಗೆ ಸಹಕರಿಸಿದ್ದ ಚುನಾವಣಾ ಆಯೋಗವು ಐಪಿ ಲಾಗ್‌ಗಳು ಹಾಗೂ ಸಂಬಂಧಿತ ದತ್ತಾಂಶವನ್ನು ಸಿಐಡಿಗೆ ಒದಗಿಸಿತ್ತು. ಆದರೆ ನಕಲಿ ಅರ್ಜಿಗಳನ್ನು ಸಲ್ಲಿಸಿದ ಸಾಧನಗಳನ್ನು ಗುರುತಿಸಲು ಅಗತ್ಯವಿರುವ ಡೆಸ್ಟಿನೇಷನ್ ಐಪಿಗಳು ಹಾಗೂ ಪೋರ್ಟ್ ವಿವರಗಳನ್ನು ಚುನಾವಣಾ ಆಯೋಗ ಒದಗಿಸಿಲ್ಲ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ವಂಚನೆಯ ಮೂಲಪತ್ತೆಹಚ್ಚಲು ಸಾಧ್ಯವಾಗದೇ ತನಿಖೆ ಸ್ಥಗಿತಗೊಂಡಿದೆ’ ಎಂದು ದೂರಿದರು.
ಪ್ರಜಾತಂತ್ರ ಅಪಾಯದಲ್ಲಿದೆ: ‘ಮತದಾರರಪಟ್ಟಿಯಿಂದ 5,994 ಹೆಸರುಗಳನ್ನು ಅಕ್ರಮವಾಗಿ ತೆಗೆದುಹಾಕುವ ಯತ್ನದ ಹಿಂದೆ ಯಾರ ಕೈವಾಡವಿದೆ ಎಂಬುದರ ಪತ್ತೆ ಚುನಾವಣಾ ಆಯೋಗ ಏಕೆ ಸಹರಿಸುತ್ತಿಲ್ಲ? ಚುನಾವಣಾ ಆಯೋಗ ಸ್ವತಂತ್ರವಾದ ಹಾಗೂ ಸಂವಿಧಾನಬದ್ಧ ಸಂಸ್ಥೆ. ಅದು ತನಿಖೆಗೆ ಸಹರಿಸಬೇಕು. ನಿಕಟ ಪೈಪೋಟಿ ಇರುವ 30–40 ಕ್ಷೇತ್ರಗಳಲ್ಲಿ ಇಂಥ ಅಕ್ರಮ ನಡೆದರೆ, ಸರ್ಕಾರ ರಚಿಸಬಹುದು ಇಲ್ಲವೇ ಉರುಳಿಸಬಹುದು. ಇಂಥ ಕುತಂತ್ರ ದೇಶದಲ್ಲಿ ನಡೆಯುತ್ತಿದೆ. ಇದು ಪ್ರಜಾತಂತ್ರಕ್ಕೆ ಅಪಾಯಕಾರಿ. ಪ್ರಜಾಪ್ರಭುತ್ವನ್ನು ಹೈಜಾಕ್ ಮಾಡುವ ಯತ್ನ’ ಎಂದರು.
ಚುನಾವಣಾ ಆಯೋಗ ಮುಕ್ತ– ಪಾರದರ್ಶಕವಾಗಿಲ್ಲ. ಬಿಜೆಪಿ ಪರವಾಗಿ ಕೆಲಸ ಮಾಡುತ್ತಿದ್ದು, ಷಡ್ಯಂತ್ರ ಮಾಡಿ ಬಿಜೆಪಿಯನ್ನು ಅಧಿಕಾರದಲ್ಲಿ ಕೂರಿಸುವ ಕೆಲಸ ಮಾಡುತ್ತಿದೆಬಿ.ಆರ್.ಪಾಟೀಲ, ರಾಜ್ಯ ಯೋಜನಾ ಮತ್ತು ನೀತಿ ಆಯೋಗದ ಉಪಾಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.