ಮಡಿಕೇರಿ/ ಚಿಕ್ಕಮಗಳೂರು: ಕೊಡಗು, ಚಿಕ್ಕಮಗಳೂರು ಮತ್ತು ಬೆಳಗಾವಿ ಜಿಲ್ಲೆಗಳ ವಿವಿಧೆಡೆ ಬುಧವಾರ ಮಳೆಯಾಗಿದೆ. ಕೊಡಗು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಗುಡುಗು, ಸಿಡಿಲುಗಳ ಅಬ್ಬರದ ನಡುವೆ ಬುಧವಾರ ಭಾರಿ ಮಳೆ ಸುರಿದಿದೆ. ಸುಂಟಿಕೊಪ್ಪ, ನಾಪೋಕ್ಲುವಿನಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಕೊಟ್ಟಿಗೆಹಾರ ಸುತ್ತಮುತ್ತ ಬಿರುಗಾಳಿ ಸಹಿತ ಮಳೆ ಸುರಿಯಿತು. ಆಲ್ದೂರು, ಬಾಳೆಹೊನ್ನೂರು, ನರಸಿಂಹರಾಜಪುರ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಮಲೆನಾಡಿನಲ್ಲಿ ಮಳೆಯಾಗುತ್ತಿರುವುದರಿಂದ ಕಾಫಿ ಬೆಳೆಗೆ ಹೆಚ್ಚು ಅನುಕೂಲವಾಗಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ, ಕಿತ್ತೂರು, ಬೈಲಹೊಂಗಲ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಮಂಗಳವಾರ ತಡರಾತ್ರಿ ಮತ್ತು ಬುಧವಾರ ಮಧ್ಯಾಹ್ನ ಭಾರಿ ಗಾಳಿ ಜೊತೆ ಮಳೆ ಸುರಿಯಿತು. ಅಲ್ಲಲ್ಲಿ ಗಿಡ, ಮರ ಮತ್ತು ಕಂಬಗಳು ಧರೆಗುರುಳಿದವು. ಕೆಲ ಕಡೆ ಮನೆಯ ಚಾವಣಿಗಳು ಹಾರಿ ಹೋದವು.
ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ಮತ್ತು ಸುತ್ತಲಿನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ. ಬೆಳ್ತಂಗಡಿ, ಉಜಿರೆ ಸುತ್ತಲಿನ ಪ್ರದೇಶದಲ್ಲಿ ಸಾಮಾನ್ಯ ಮಳೆಯಾಗಿದೆ.
ಕೊಡಗು ಜಿಲ್ಲೆಯ ನಾಪೋಕ್ಲು ಹೋಬಳಿಯಲ್ಲಿ ಸುಮಾರು ಒಂದೂವರೆಗಂಟೆಗೂ ಅಧಿಕ ಕಾಲ ಬಿರುಗಾಳಿ, ಆಲಿಕಲ್ಲು ಮಳೆಯಾಗಿದೆ. ಕೆಲವೆಡೆ ಮರಗಳು ಉರುಳಿ ಬಿದ್ದಿವೆ. ಕುಶಾಲನಗರ, ಗೋಣಿಕೊಪ್ಪಲಿನಲ್ಲಿಯೂ ಸಿಡಿಲು ಸಹಿತ ಮಳೆಯಾಗಿದೆ. ಸೋಮವಾರಪೇಟೆ, ಹಾಸನ ಜಿಲ್ಲಾ ಕೇಂದ್ರ ಹಾಗೂ ಅರಕಲಗೂಡು ತಾಲ್ಲೂಕಿನಲ್ಲಿ ಸಾಧಾರಣ ಮಳೆ ಸುರಿದಿದೆ. ಮಡಿಕೇರಿ ನಗರದಲ್ಲಿ ಮಧ್ಯಾಹ್ನದಿಂದಲೂ ಗುಡುಗು, ಸಿಡಿಲುಗಳು ಅಬ್ಬರಿಸಿತು. ಸಂಜೆಯ ನಂತರ ಸಾಧಾರಣ ಮಳೆಯಾಯಿತು.
ಹುಬ್ಬಳ್ಳಿ ವರದಿ: ಬೆಳಗಾವಿ ಜಿಲ್ಲೆಯ ಬೈಲವಾಡ, ಅಮಟೂರ, ನಯಾನಗರ, ಜಾಲಿಕೊಪ್ಪ, ಗರ್ಜೂರ, ಸಂಗೊಳ್ಳಿ, ಆನಿಗೋಳ ಗ್ರಾಮ ಸೇರಿದಂತೆ ಹಲವು ಗ್ರಾಮಗಳಲ್ಲಿ ಮಳೆಯಾಯಿತು. ಮನೆಗಳಿಗೆ ನುಗ್ಗಿದ ಮಳೆ ನೀರು ತೆಗೆದು ಹಾಕಲು, ನಿವಾಸಿಗಳು ಪ್ರಯಾಸಪಟ್ಟರು.
‘ಮಳೆಯಿಂದ ತಗ್ಗು ಪ್ರದೇಶ ಮತ್ತು ಗದ್ದೆಗಳಲ್ಲಿ ನೀರು ನಿಂತಿದೆ. ಕಟಾವು ಮಾಡಿದ್ದ ಕಬ್ಬಿನ ಗದ್ದೆಗಳಲ್ಲಿನ ಕೂಳೆ ಕಬ್ಬಿಗೆ ಇದರಿಂದ ಅನುಕೂಲವಾಗಿದೆ’ ಎಂದು ರೈತರು ತಿಳಿಸಿದರು.
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ಪಟ್ಟಣ, ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿಯಲ್ಲಿ ತುಂತುರು ಮಳೆಯಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.