ADVERTISEMENT

ಕೊಡಗು ಪ್ರಕೃತಿ ವಿಕೋಪ: ಕಾಂಗ್ರೆಸ್‌ನಿಂದ ಹಾನಿ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 12:42 IST
Last Updated 6 ಸೆಪ್ಟೆಂಬರ್ 2018, 12:42 IST
ಮಳೆ ಹಾನಿ ಪ್ರದೇಶಗಳಿಗೆ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು
ಮಳೆ ಹಾನಿ ಪ್ರದೇಶಗಳಿಗೆ ಕಾಂಗ್ರೆಸ್‌ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು   

ಮಡಿಕೇರಿ: ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡುತ್ತಿರುವ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಕೃತಿ ವಿಕೋಪ ಅಧ್ಯಯನ ತಂಡವು ಸಮೀಕ್ಷಾ ಕಾರ್ಯವನ್ನು ಮುಂದುವರೆಸಿದೆ.

ಗಾಳಿಬೀಡು, ಕೆ. ನಿಡುಗಣೆ, ಮಕ್ಕಂದೂರು ಮತ್ತು ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗ್ರಾಮಗಳಿಗೆ ತೆರಳಿದ ಮುಖಂಡರು ನೊಂದವರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ನಷ್ಟದ ಬಗ್ಗೆ ಮಾಹಿತಿಯನ್ನೂ ಸಂಗ್ರಹಿಸಿದರು. ಸರ್ಕಾರದಿಂದ ನೆರವು ಕೊಡಿಸಿ ಹೊಸ ಬದುಕಿಗೆ ದಾರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರು.

ಮನೆ, ದಾರಿ, ಗದ್ದೆ, ತೋಟಗಳು ಕೆಸರಿನಡಿ ಸಿಲುಕಿವೆ. ಕಾಫಿ ತೋಟಗಳು ಇನ್ನೆಂದೂ ತಲೆ ಎತ್ತದ ಪರಿಸ್ಥಿತಿಯಲ್ಲಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ADVERTISEMENT

ರಸ್ತೆ, ವಿದ್ಯುತ್ ಸಂಪರ್ಕವಿಲ್ಲದ ಗ್ರಾಮಗಳು ದಶಕಕ್ಕೂ ಹಿಂದಕ್ಕೆ ಸರಿದಿದೆ. ಅಸಹಾಯಕ ಸ್ಥಿತಿಯಲ್ಲಿರುವ ನಮಗೆ ಇನ್ನು ಮುಂದೆ ಯಾರು ದಿಕ್ಕು, ಎಲ್ಲಿ ನೆಲೆ ಎನ್ನುವ ಆತಂಕ ಶುರುವಾಗಿದೆ ಎಂದು ಸಂತ್ರಸ್ತರು ಅಧ್ಯಯನ ತಂಡದ ಎದುರು ಕಣ್ಣೀರು ಹಾಕಿದರು.

ಸೆ. 2ರಂದು ಕಾಲೂರು, ದೇವಸ್ತೂರು ಭಾಗದ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭ ಸಮಿತಿಯ ಸಂಚಾಲಕ ಬೇಕಲ್ ರಮಾನಾಥ್, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾ ಸಂಯೋಜಕ ತೆನ್ನಿರಾ ಮೈನಾ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹನೀಫ್ ಸಂಪಾಜೆ, ನಗರ ಅಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್, ಚಂದ್ರಶೇಖರ್, ಚುಮ್ಮಿ ದೇವಯ್ಯ, ಸ್ವರ್ಣಲತಾ, ಶಶಿ, ಜಪ್ರು, ಬಶೀರ್, ಕಾಲೂರು ಗ್ರಾಮದ ಕಾಶಿ, ಪವನ್, ನರೇನ್ ಹಾಗೂ ಚಂದನ್ ಹಾಜರಿದ್ದರು.

ಸೆ. 4ರಂದು ಅಧ್ಯಯನ ತಂಡ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ ಸಂದರ್ಭ ಜಿಲ್ಲಾ ಕಾಂಗ್ರೆಸ್ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಸಂಚಾಲಕ ರಮಾನಾಥ್, ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವೀಂದ್ರ ಅಪ್ರು, ನಗರ ಘಟಕದ ಅಧ್ಯಕ್ಷ ಕೆ.ಯು. ಅಬ್ದುಲ್ ರಜಾಕ್, ಚುಮ್ಮಿ ದೇವಯ್ಯ, ಡಿಸಿಸಿ ಕೋಶಾಧಿಕಾರಿ ಮನು ಮೇದಪ್ಪ, ತೆನ್ನೀರಾ ಮೈನಾ, ನಟೇಶ್ ಗೌಡ, ಜಪ್ರು, ಮಕ್ಕಂದೂರು ವಲಯ ಕಾಂಗ್ರೆಸ್ ಅಧ್ಯಕ್ಷ ಪವನ್, ನಗರ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಹಿಂದುಳಿದ ವಿಭಾಗದ ಅಧ್ಯಕ್ಷ ಸುಂದರ, ಗ್ರಾ.ಪಂ ಸದಸ್ಯ ಇಬ್ರಾಹಿಂ, ಮಾದಾಪುರ ವಲಯ ಕಾಂಗ್ರೆಸ್ ಅಧ್ಯಕ್ಷ ದಾದು ಬೋಪಯ್ಯ, ನಾಸಿರ್, ಚೇರಂಬಾಣೆ ವಲಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಷೀರ್ ಹಾಗೂ ಕಾರ್ಯಕರ್ತರು ಹಾಜರಿದ್ದರು.

ಸದ್ಯದಲ್ಲೇ ಗರ್ವಾಲೆ ಗ್ರಾಮಕ್ಕೂ ಭೇಟಿ ನೀಡಲಾಗುವುದೆಂದು ಟಿ.ಪಿ. ರಮೇಶ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.