ಮಡಿಕೇರಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೂ ಕೊಡಗಿಗೂ ಅವಿನಾಭಾವ ಸಂಬಂಧ ಇದೆ. ಅವರೊಂದಿಗೆ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅನೇಕ ಮಹನೀಯರು ಕೊಡಗಿನವರು ಎಂಬುದು ವಿಶೇಷ. ನೇತಾಜಿ ಅವರ ಸೋದರ ಶರತ್‌ಚಂದ್ರ ಬೋಸ್ ಅವರನ್ನು ಮಡಿಕೇರಿಯಲ್ಲೇ ಬ್ರಿಟಿಷರು ಗೃಹಬಂಧನದಲ್ಲಿರಿಸಿದ್ದರು. ಈ ಸಂಗತಿಯನ್ನು ಸ್ವತಃ ಅವರ ಮೊಮ್ಮಗ ಚಂದ್ರಕುಮಾರ್ ಬೋಸ್ ಅವರು ತಮ್ಮ ಲೇಖನವೊಂದರಲ್ಲಿ ಪ್ರಸ್ತಾಪಿಸಿದ್ದಾರೆ.
1941ರಲ್ಲಿ ಮೊದಲಿಗೆ ಬ್ರಿಟಿಷರು ಶರತ್‌ಚಂದ್ರ ಬೋಸ್ ಅವರನ್ನು ತಿರುಚನಾಪಳ್ಳಿಯಲ್ಲಿ ನಂತರ ಮಡಿಕೇರಿಯಲ್ಲಿ ಗೃಹಬಂಧನದಲ್ಲಿರಿಸಿದ್ದರು ಎಂದು ಅವರು ತಮ್ಮ ಲೇಖನದಲ್ಲಿ ನೆನಪಿಸಿಕೊಳ್ಳುತ್ತಾರೆ. ಅನೇಕ ಮಂದಿ ನೇತಾಜಿ ಅವರ ಐಎನ್‌ಎ ಸೇನೆಯಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರು.
ಈ ಕುರಿತು ‘ಪ್ರಜಾವಾಣಿ’ ಐಎನ್‌ಎ ಸೇನೆಯಲ್ಲಿದ್ದ ನೆಲಜಿ ಗ್ರಾಮದ ಮಣವಟ್ಟಿರ ಮೇದಯ್ಯ ಅವರ ಪುತ್ರ ಪೊನ್ನಣ್ಣ ಅವರನ್ನು ಸಂಪರ್ಕಿಸಿದಾಗ ಅವರು, ‘ನಮ್ಮ ತಂದೆ ನೇತಾಜಿ ಅವರ ಜೊತೆ ಮಲೇಷಿಯಾ, ಸಿಂಗಾಪುರ, ಮಯನ್ಮಾರ್ ಸೇರಿದಂತೆ ಅನೇಕ ದೇಶಗಳಲ್ಲಿದ್ದರು. ಕೊನೆಗೆ ಮಯನ್ಮಾರದಲ್ಲಿ ಅವರು ಸೆರೆಯಾದರು. ಅವರೊಂದಿಗೆ ನಮ್ಮ ಕುಟುಂಬದ ಗಣಪತಿ ಹಾಗೂ ಅಪ್ಪಚ್ಚು ಎಂಬುವವರು ಸಹ ನೇತಾಜಿ ಅವರೊಂದಿಗೆ ಯುದ್ಧದಲ್ಲಿ ಹೋರಾಡಿದ್ದರು’ ಎಂದು ಸ್ಮರಿಸಿಕೊಂಡರು.
ಹಿರಿಯ ಸಂಶೋಧಕ ಬಾಚರಣಿಯಂಡ ಪಿ.ಅಪ್ಪಣ್ಣ ಪ್ರತಿಕ್ರಿಯಿಸಿ, ‘ಬೆಂಗೂರು ಗ್ರಾಮದ ಪಿ.ಬಿ.ಕಾರ್ಯಪ್ಪ ಸಹ ನೇತಾಜಿ ಅವರೊಂದಿಗೆ ಇದ್ದರು. ಮಣವಟ್ಟಿರ ಮೇದಯ್ಯ ಅವರನ್ನು ಮೈಸೂರಿನಿಂದ ಮೆರವಣಿಗೆಯಲ್ಲಿ ಇಲ್ಲಿಗೆ ಕರೆ ತಂದಿದ್ದು ನನಗೆ ಇನ್ನೂ ನೆನಪಿದೆ’ ಎಂದು ಹೇಳಿದರು.
ಚೇರಂಬಾಣೆಯ ಬಿ.ಬಾಡಗ ಗ್ರಾಮದಲ್ಲಿದ್ದ ಐಯ್ಯಣ್ಣ ಎಂಬುವವರೂ ನೇತಾಜಿ ಅವರೊಂದಿಗೆ ಇದ್ದು, ಇಲ್ಲಿ ಅವರು ನೇತಾಜಿ ಧರಿಸುತ್ತಿದ್ದ ಟೊಪ್ಪಿಯನ್ನೇ ತಾವೂ ಧರಿಸುತ್ತಿದ್ದರು. ಜೊತೆಗೆ, ನೇತಾಜಿ ಅವರ ಸೋದರ ಶರತ್‌ಚಂದ್ರ ಬೋಸ್ ಅವರನ್ನು ಈಗಿನ ಕೆಎಸ್‌ಆರ್‌ಟಿಸಿ ಬಸ್ ಡಿಪೊ ಎದುರಲ್ಲಿದ್ದ ಬಂಗ್ಲೆಯಲ್ಲಿ ಗೃಹಬಂಧನಲ್ಲಿರಿಸಿದ್ದ ಸಂಗತಿ ಇನ್ನೂ ನೆನಪಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಟಿ.ಪಿ.ರಮೇಶ್ ಪ್ರತಿಕ್ರಿಯಿಸಿ, ‘ತ್ಯಾಗರಾಜ ಮೊದಲಿಯಾರ್ ಎಂಬುವವರೂ ಸಹ ನೇತಾಜಿ ಅವರ ಐಎನ್‌ಎ ದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಹಿಂದೆ ಪುರಭವನದಲ್ಲಿ ನೇತಾಜಿ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿತ್ತು. ಆದರೆ, ಕಾಲಕ್ರಮೇಣ ಅದು ನಿಂತಿತು’ ಎಂದು ಹೇಳಿದರು.
ಹಿರಿಯ ಮುತ್ಸದ್ದಿ ಎಂ.ಸಿ.ನಾಣಯ್ಯ ಪ್ರತಿಕ್ರಿಯಿಸಿ, ‘ಕೊಡಗಿನಿಂದ ಸಾಕಷ್ಟು ಮಂದಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರೊಂದಿಗೆ ಹೋರಾಟ ನಡೆಸಿದ್ದರು. ಸಾಕಷ್ಟು ಮಂದಿಗೆ ಐಎನ್‌ಎ ಪಿಂಚಣಿ ದೊರೆಯುತ್ತಿತ್ತು’ ಎಂದರು. ‘ಬಲ್ಲಮಾವಟಿ ಪ್ರೌಢಶಾಲೆಗೆ ನೇತಾಜಿ ಹೆಸರನ್ನಿಟ್ಟಿದ್ದು ಬಹಳ ವರ್ಷ ಗಳ ಕಾಲ ಅವರ ಜನ್ಮದಿನಂದೇ ಶಾಲಾ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿತ್ತು’ ಎಂದು ನೇತಾಜಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಸಿ.ಎಸ್.ಸುರೇಶ್ ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.