ADVERTISEMENT

ಮಡಿಕೇರಿ: ‌ರೇಬೀಸ್ ನಿರೋಧಕ ಚಿಕಿತ್ಸಾಲಯ ಆರಂಭ

ಕೆ.ಎಸ್.ಗಿರೀಶ್
Published 7 ಆಗಸ್ಟ್ 2025, 6:13 IST
Last Updated 7 ಆಗಸ್ಟ್ 2025, 6:13 IST
ಮಡಿಕೇರಿಯಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ
ಮಡಿಕೇರಿಯಲ್ಲಿ ಬೀದಿನಾಯಿಗಳ ಸಂಖ್ಯೆ ಹೆಚ್ಚಾಗಿದೆ   

ಮಡಿಕೇರಿ: ‌ನಾಯಿ ಕಡಿತ ಪ್ರಕರಣಗಳು ದಿನೇ ದಿನೇ ಹೆಚ್ಚುತ್ತಿದ್ದು, ನಾಯಿ ಕಡಿತಕ್ಕೆ ಒಳಗಾದವರಿಗೆ ಲಸಿಕೆ ನೀಡಲೆಂದೇ ‘ರೇಬೀಸ್ ನಿರೋಧಕ ಚಿಕಿತ್ಸಾಲಯ’ವು ಇಲ್ಲಿನ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಆರಂಭವಾಗಿದೆ. ಇದರಿಂದ ನಾಯಿ ದಾಳಿಗೆ ಒಳಗಾದವರು ಅತ್ಯಂತ ಬೇಗನೇ ಚಿಕಿತ್ಸೆ ಪಡೆದುಕೊಳ್ಳಬಹುದು.

ಇಲ್ಲಿಯವರೆಗೂ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗ ಇಲ್ಲವೇ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ನಾಯಿ ದಾಳಿಗೆ ಒಳಗಾದವರು ಚಿಕಿತ್ಸೆ ಹಾಗೂ ಲಸಿಕೆ ಪಡೆದುಕೊಳ್ಳಬೇಕಿತ್ತು. ಈ ವಿಭಾಗಗಳಲ್ಲಿ ಇತರೆ ರೋಗಗಳಿಂದ ಬಳಲುವ ರೋಗಿಗಳು ಸಾಕಷ್ಟು ಸಂಖ್ಯೆಯಲ್ಲಿ ಇದ್ದುದ್ದರಿಂದ ಲಸಿಕೆ ಪಡೆಯಬೇಕಾದವರು ಕಾಯಬೇಕಾಗಿತ್ತು. ಎಷ್ಟೋ ಬಾರಿ ಮೊದಲ ಬಾರಿಗೆ ಲಸಿಕೆ ಪಡೆದುಕೊಂಡವರು ನಂತರದ ಲಸಿಕೆ ಪಡೆಯಲು ಕಾಯಬೇಕಾದ ಸ್ಥಿತಿ ಇದ್ದ ಕಾರಣ ‘ಸಣ್ಣ ಗಾಯ ವಾಸಿಯಾಗಿದೆ, ಲಸಿಕೆ ಬೇಡ’ ಎಂದು ವಾಪಸ್ ತೆರಳುತ್ತಿದ್ದರು. ಆಗ ಅವರು ರೇಬೀಸ್ ಕಾಯಿಲೆಗೆ ತುತ್ತಾಗುವ ಸಂಭವ ಅಧಿಕ ಇತ್ತು. ಹಾಗಾಗಿ, ನಾಯಿ ದಾಳಿಗೆ ಒಳಗಾದವರಿಗಾಗಿಯೇ ಪ್ರತ್ಯೇಕ ಚಿಕಿತ್ಸಾಲಯವನ್ನು ಆರಂಭಿಸಲಾಗಿದೆ.

ಇಲ್ಲಿ ಹಾವು ಕಡಿತಕ್ಕೆ ಒಳಗಾದವರನ್ನು ಹೊರತುಪಡಿಸಿ ನಾಯಿ, ಬೆಕ್ಕು, ಕೋತಿ, ಹಸು ಸೇರಿದಂತೆ ಇತರೆ ಪ್ರಾಣಿಗಳ ಕಡಿತಕ್ಕೆ ಒಳಗಾದವರಿಗೂ ಚಿಕಿತ್ಸೆ, ಲಸಿಕೆ ನೀಡಲಾಗುತ್ತದೆ.

ADVERTISEMENT

ಈ ಚಿಕಿತ್ಸಾಲಯದಲ್ಲಿ ನಾಯಿ ಕಡಿತಕ್ಕೆ ಒಳಗಾದವರ ಗಾಯದ ಆರೈಕೆ, ಅದರ ನಿರ್ವಹಣೆ, ಚಿಕಿತ್ಸೆ, ರೇಬೀಸ್ ನಿರೋಧಕ ಲಸಿಕೆ ನೀಡಲು ಪ್ರತ್ಯೇಕ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇರುತ್ತಾರೆ.

ಮಡಿಕೇರಿಯಲ್ಲಿ ಬೀದಿನಾಯಿಗಳು

ಲಸಿಕೆ ನೀಡಿದ ನಂತರ ಮುಂದೆ ಎಷ್ಟು ದಿನಕ್ಕೆ ಲಸಿಕೆ ತೆಗೆದುಕೊಳ್ಳಬೇಕು ಎಂಬ ಮಾಹಿತಿ ಇರುವಂತಹ ಕಾರ್ಡ್ ನೀಡಲಾಗುತ್ತದೆ. ಇದರಲ್ಲಿ ಮುಂದೆ ಯಾವ ದಿನಾಂಕದಂದು ಲಸಿಕೆ ತೆಗೆದುಕೊಳ್ಳಬೇಕು, ಈಗ ನೀಡಿರುವ ಲಸಿಕೆಯ ಹೆಸರು ಹಾಗೂ ಅದರ ವಿವರಗಳನ್ನೂ ನಮೂದಿಸಲಾಗಿರುತ್ತದೆ. ಇದರಿಂದ ಕೊಡಗಿಗೆ ಹೆಚ್ಚು ಬರುವ ಪ್ರವಾಸಿಗರು ನಾಯಿ ಕಡಿತಕ್ಕೆ ಒಳಗಾದರೆ ಮತ್ತೆ ಲಸಿಕೆ ಪಡೆಯಲು ಇಲ್ಲಿಗೆ ಬರಬೇಕೆಂದಿಲ್ಲ. ಇಲ್ಲಿ ಲಸಿಕೆ ನೀಡಿದ ಎಲ್ಲ ವಿವರಗಳಿರುವ ಕಾರ್ಡ್ ನೀಡುವುದರಿಂದ ಅವರು ಇರುವಲ್ಲಿಯೇ ಲಸಿಕೆ ಪಡೆದುಕೊಳ್ಳಬಹುದಾಗಿದೆ.

ಈಗ ಜಿಲ್ಲೆಯಲ್ಲಿ ಕೇವಲ ಜಿಲ್ಲಾಸ್ಪತ್ರೆ ಮಾತ್ರವಲ್ಲ ಎಲ್ಲ ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ರೇಬೀಸ್ ನಿರೋಧಕ ಲಸಿಕೆ ಲಭ್ಯವಿದೆ. ಹೆಚ್ಚು ಆಳವಾದ ಹಾಗೂ ಹೆಚ್ಚು ಗಾಯಗಳಾಗಿದ್ದಲ್ಲಿ ಈ ಚಿಕಿತ್ಸಾಲಯಕ್ಕೆ ಬರಬೇಕಿದೆ. ಇಲ್ಲಿ ಅಂತಹವರಿಗೆ ಲಸಿಕೆಯ ಜೊತೆಗೆ ಇಮ್ಯುನೋ ಗ್ಲಾಬಿಯನ್ಸ್‌ನಂತಹ ಔಷಧಗಳನ್ನೂ ನೀಡಲಾಗುತ್ತದೆ. ಶಂಕಿತ ರೇಬೀಸ್ ಪೀಡಿತ ನಾಯಿ ಕಚ್ಚಿದ್ದರೆ ಅವರ ಮೇಲೆ ಅತೀವ ನಿಗಾ ವಹಿಸಿ, ಫಾಲೊಅ‍ಪ್ ಚಿಕಿತ್ಸೆಗಳನ್ನು ನೀಡಲೂ ಈ ಚಿಕಿತ್ಸಾಲಯ ಸಹಾಯಕವಾಗಿದೆ.

ಇಲ್ಲಿ ಕೇವಲ ನಾಯಿ ಕಡಿತಕ್ಕೆ ಒಳಗಾದವರಿಗೆ ಮಾತ್ರವಲ್ಲ, ನಾಯಿ ಅಥವಾ ಪ್ರಾಣಿ ಕಡಿತಕ್ಕೆ ಒಳಗಾಗುವ ಸಾಧ್ಯತೆ ಇರುವವರಿಗೂ ಮುಂಚಿತವಾಗಿಯೇ ಲಸಿಕೆ ನೀಡಲಾಗುತ್ತದೆ. ಪ್ರಾಣಿಗಳೊಂದಿಗೆ ಹೆಚ್ಚು ನಿಕಟವಾಗಿ ಕೆಲಸ ಮಾಡುವವರು ಈ ಲಸಿಕೆ ಪಡೆದುಕೊಳ್ಳಬಹುದಾಗಿದೆ.

ಮಡಿಕೇರಿಯ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ಸೇರಿದ ಬೋಧನಾ ಆಸ್ಪತ್ರೆ (ಜಿಲ್ಲಾಸ್ಪತ್ರೆ)ಯಲ್ಲಿ ಈಚೆಗೆ ಆರಂಭಗೊಂಡಿರುವ ರೇಬೀಸ್ ನಿರೋಧಕ ಚಿಕಿತ್ಸಾಲಯ
ಈ ವರ್ಷ ಜನವರಿಯಿಂದ ಇಲ್ಲಿಯವರೆಗೆ 3 ಸಾವಿರಕ್ಕೂ ಅಧಿಕ ಮಂದಿಗೆ ನಾಯಿಗಳು ಕಚ್ಚಿವೆ. ಸಾರ್ವಜನಿಕರು ನಾಯಿ ಬೆಕ್ಕು ಕಡಿತವನ್ನು ನಿರ್ಲಕ್ಷಿಸಬಾರದು
ಡಾ.ಶ್ರೀನಿವಾಸ್ ಜಿಲ್ಲಾ ಸರ್ವೇಕ್ಷಣಾಧಿಕಾರಿ
ನಾಯಿ ಬೆಕ್ಕು ಕಡಿತಕ್ಕೆ ಒಳಗಾದವರು ರೇಬೀಸ್ ನಿರೋಧಕ ಚಿಕಿತ್ಸಾಲಯಕ್ಕೆ ಬಂದರೆ ಸೂಕ್ತ ಚಿಕಿತ್ಸೆ ದೊರೆಯಲಿದೆ. ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೇ ಲಸಿಕೆ ಪಡೆಯಿರಿ
ಡಾ.ಕೆ.ಕೃತಿಕಾ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ನೋಡಲ್ ಅಧಿಕಾರಿ
ನಾಯಿ ಬೆಕ್ಕು ಕಡಿತಕ್ಕೆ ಒಳಗಾದವರು ರೇಬೀಸ್ ನಿರೋಧಕ ಚಿಕಿತ್ಸಾಲಯಕ್ಕೆ ಬಂದರೆ ಸೂಕ್ತ ಚಿಕಿತ್ಸೆ ದೊರೆಯಲಿದೆ. ಸಾರ್ವಜನಿಕರು ನಿರ್ಲಕ್ಷ್ಯ ವಹಿಸದೇ ಲಸಿಕೆ ಪಡೆಯಿರಿ
ಡಾ.ಕೆ.ಕೃತಿಕಾ ರೇಬಿಸ್ ನಿಯಂತ್ರಣ ಕಾರ್ಯಕ್ರಮದ ನೋಡಲ್ ಅಧಿಕಾರಿ

ಕಳೆದ ವರ್ಷಕ್ಕಿಂತ ಹೆಚ್ಚು ನಾಯಿ ಕಡಿತ!

ಕಳೆದ ವರ್ಷ ಜನವರಿಯಿಂದ ಡಿಸೆಂಬರ್‌ವರೆಗೆ ಕೊಡಗು ಜಿಲ್ಲೆಯಲ್ಲಿ 4872 ಮಂದಿ ನಾಯಿ ಕಡಿತಕ್ಕೆ ಒಳಗಾಗಿದ್ದರು. ಆದರೆ ಈ ವರ್ಷ ಜನವರಿಯಿಂದ ಜುಲೈವರೆಗೆ 7 ತಿಂಗಳಿನಲ್ಲಿ 3058 ಮಂದಿಗೆ ನಾಯಿಗಳು ಕಚ್ಚಿವೆ. ಅಂಕಿ ಅಂಶಗಳನ್ನು ಗಮನಿಸಿದರೆ ನಾಯಿ ಕಡಿತ ಪ್ರಕರಣಗಳು ಕಳೆದ ವರ್ಷಕ್ಕಿಂತ ಹೆಚ್ಚಾಗಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ.

Cut-off box - ರೇಬೀಸ್ ಕಾಯಿಲೆಯಿಂದ ಸಾವು ಖಚಿತ ರೇಬೀಸ್ ಕಾಯಿಲೆಯಿಂದ ಸಾವು ಖಚಿತ. ಇದನ್ನು ತಪ್ಪಿಸಲು ಸಾಧ್ಯವೇ ಇಲ್ಲ. ಹಾಗಾಗಿ ಸಾರ್ವಜನಿಕರು ಯಾವುದೇ ನಾಯಿ ಬೆಕ್ಕು ಹಾಗೂ ಇತರೆ ಪ್ರಾಣಿಗಳ ಕಡಿತವನ್ನು ಉದಾಸೀನ ಮಾಡಲೇಬಾರದು. ಯಾವುದೇ ಕಾರಣಕ್ಕೂ ಬೀದಿ ನಾಯಿಗಳ ಸಮೀಪ ಹೋಗಲೇಬಾರದು. ಕೈಯಲ್ಲಿ ಅವುಗಳಿಗೆ ಆಹಾರ ಕೊಡಲೇಬಾರದು. (ಆಹಾರ ಕೊಡಲೇಬೇಕಿದ್ದರೆ ಒಂದು ಕಡೆ ಇಡಬಹುದು). ಮಕ್ಕಳ ಎತ್ತರ ಕಡಿಮೆ ಇರುವುದರಿಂದ ನಾಯಿಗಳು ಮಕ್ಕಳ ಮುಖಕ್ಕೆ ಕಚ್ಚುತ್ತವೆ. ಹಾಗಾಗಿ ತಕ್ಷಣವೇ ಆಸ್ಪತ್ರೆಗೆ ಕರೆದುಕೊಂಡು ಬರಬೇಕು. ನಾಯಿ ಕಚ್ಚಿದ ತಕ್ಷಣ ಗಾಯವನ್ನು ನೀರಿನಿಂದ 10ರಿಂದ 15 ನಿಮಿಷಗಳ ಕಾಲ ತೊಳೆಯಲೇಬೇಕು. ಇಲ್ಲದಿದ್ದರೆ ಹೆಚ್ಚು ಹೆಚ್ಚು ವೈರಸ್‌ಗಳು ದೇಹ ಪ್ರವೇಶಿಸುತ್ತವೆ. ರೇಬೀಸ್ ನಿರೋಧಕ ಚಿಕಿತ್ಸಾಲಯ ತೆರೆಯಲು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಮತ್ತು ನಿರ್ದೇಶಕ ಡಾ.ಲೋಕೇಶ್ ಕೂಡಲೇ ಸ್ಪಂದಿಸಿ ಎಲ್ಲ ಬಗೆಯ ಸಹಕಾರ ನೀಡಿದ್ದಾರೆ ಎನ್ನುತ್ತಾರೆ ಸಮುದಾಯ ಆರೋಗ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ರಾಮಚಂದ್ರ ಕಾಮತ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.