SSLC Results
ಪ್ರಜಾವಾಣಿ ಚಿತ್ರ: ತಾಜುದ್ದೀನ್ ಆಜಾದ್
ಮಡಿಕೇರಿ: ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ 5ನೇ ಸ್ಥಾನಕ್ಕೆ ಇಳಿದಿದೆ. ಕಳೆದ ವರ್ಷ ಜಿಲ್ಲೆ 4ನೇ ಸ್ಥಾನದಲ್ಲಿತ್ತು. ಅದಕ್ಕೂ ಹಿಂದಿನ ವರ್ಷದಲ್ಲಿ 8ನೇ ಸ್ಥಾನದಲ್ಲಿತ್ತು.
ರಾಜ್ಯದಲ್ಲಿ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳು ಮೊದಲ 4 ಸ್ಥಾನಗಳನ್ನು ಪಡೆದಿವೆ. ಅದರಲ್ಲಿ 4ನೇ ಸ್ಥಾನದಲ್ಲಿರುವ ಶಿವಮೊಗ್ಗ ಜಿಲ್ಲೆ ಶೇ 82.29ರಷ್ಟು ಫಲಿತಾಂಶ ಪಡೆದಿದ್ದರೆ, ಕೊಡಗು ಶೇ 82.21ರಷ್ಟು ಫಲಿತಾಂಶ ಪಡೆದಿದೆ. ಈ ಮೂಲಕ ಕೂದಲೆಳೆ ಅಂತರದಲ್ಲಿ ತನ್ನ ಹಿಂದಿನ ಸ್ಥಾನವನ್ನು ಜಿಲ್ಲೆ ಕಳೆದುಕೊಂಡಿದೆ.
ಆದರೆ, ಶೇಕಡಾವಾರು ಫಲಿತಾಂಶದಲ್ಲೂ ಜಿಲ್ಲೆಯಲ್ಲಿ ಇಳಿಕೆಯಾಗಿದೆ. ಕಳೆದ ವರ್ಷ ಶೇ 91.24 ಫಲಿತಾಂಶ ಪಡೆದಿದ್ದ ಜಿಲ್ಲೆ ಈ ಬಾರಿ ಶೇ 82.21ರಷ್ಟು ಫಲಿತಾಂಶಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಜಿಲ್ಲೆಯಲ್ಲಿರುವ ಒಟ್ಟು 171 ಪ್ರೌಢಶಾಲೆಗಳಿಂದ 6,673 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,486 ವಿದ್ಯಾರ್ಥಿಗಳು ಪಾಸಾಗಿದ್ದಾರೆ.
ಜಿಲ್ಲೆಯಲ್ಲಿ 621 ಅಂಕವೇ ಅತ್ಯಧಿಕ ಅಂಕ ಎನಿಸಿದ್ದು, ವಿರಾಜಪೇಟೆಯ ಕಾವೇರಿ ಪ್ರೌಢಶಾಲೆಯ ಟಿ.ಎಂ.ಆಶ್ರಯ್ ಅಕ್ಕಮ್ಮ ಹಾಗೂ ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢಶಾಲೆಯ ಪಂಚಮಿ ತಲಾ 621 ಅಂಕ ಗಳಿಸಿ ಜಿಲ್ಲೆಯಲ್ಲೇ ಅತ್ಯಧಿಕ ಅಂಕ ಗಳಿಸಿದವರು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದಾರೆ.
ಇನ್ನು 620 ಅಂಕಗಳನ್ನು ಪಡೆದ ವಿರಾಜಪೇಟೆ ತಾಲ್ಲೂಕಿನ ಕಲ್ತಮಾಡುವಿನ ಲಯನ್ಸ್ ಪ್ರೌಢಶಾಲೆಯ ತೆಜಸ್ ಬಿಮಯ್ಯ, ಮೂರ್ನಾಡುವಿನ ಜ್ಞಾನಜ್ಯೋತಿ ಪ್ರೌಢಶಾಲೆಯ ಸಿ.ಎಂ.ಮೊಹಮ್ಮದ್ ಸಾಹಿಲ್ ಹಾಗೂ ಕೂಡುಮಂಗಳೂರಿನ ಯೂನಿಕ್ ಅಕಾಡೆಮಿಯ ಕೆ.ಎಂ.ಸಮೃದ್ಧಿ ಆಚಾರ್ 2ನೇ ಸ್ಥಾನದಲ್ಲಿದ್ದಾರೆ.
619 ಅಂಕಗಳನ್ನು ಪಡೆದ ಮಡಿಕೇರಿಯ ಸಂತ ಮೈಕಲರ ಪ್ರೌಢಶಾಲೆಯ ನಿಸರ್ಗಾ ರೈ, ಚೇರಂಬಾಣೆಯ ರಾಜರಾಜೇಶ್ವರಿ ಪ್ರೌಢಶಾಲೆಯ ಕೆ.ಕೆ.ಇಂಚರಾ, ಸೋಮವಾರಪೇಟೆಯ ವಿಶ್ವಮಾನವ ಕುವೆಂಪು ಪ್ರೌಢಶಾಲೆಯ ಸಿ.ಎಸ್.ತೇಜಸ್ವಿನಿ ಹಾಗೂ ಸಿ.ಎಸ್.ಆದ್ವಿ 3ನೇ ಸ್ಥಾನದಲ್ಲಿದ್ದಾರೆ.
ಗ್ರೇಡ್‌ವಾರು ಫಲಿತಾಂಶವನ್ನು ಗಮನಿಸಿದರೂ, ಅದರಲ್ಲೂ ಜಿಲ್ಲೆ ತೀರಾ ಆಶಾದಾಯಕ ಸಾಧನೆಯನ್ನೇನೂ ಮಾಡಿಲ್ಲ. ಪಾಸಾಗಿರುವ 5,486 ವಿದ್ಯಾರ್ಥಿಗಳ ಪೈಕಿ ಕೇವಲ 468 ವಿದ್ಯಾರ್ಥಿಗಳು ಮಾತ್ರ ‘ಎ+’ ಗ್ರೇಡ್ ಪಡೆದಿದ್ದಾರೆ. 944 ವಿದ್ಯಾರ್ಥಿಗಳು ‘ಎ’, 1,166 ವಿದ್ಯಾರ್ಥಿಗಳು ‘ಬಿ +’, 1,342 ವಿದ್ಯಾರ್ಥಿಗಳು ‘ಬಿ’, 1,030 ವಿದ್ಯಾರ್ಥಿಗಳು ‘ಸಿ+’, 192 ವಿದ್ಯಾರ್ಥಿಗಳು ‘ಸಿ’ ಗ್ರೇಡ್ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.