
ವಿರಾಜಪೇಟೆ: ಅನುದಾನಿತ ಕಾಲೇಜುಗಳ ಉಪನ್ಯಾಸಕರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದಿಂದ ಸೋಮವಾರ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಮಾತನಾಡಿದ ಕೊಡಗು ಜಿಲ್ಲಾ ಅನುದಾನಿತ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಖಜಾಂಚಿ ಎ.ಎನ್.ಹೇಮಂತ್ ಕುಮಾರ್, ‘ಕಾರ್ಯಭಾರದ ಕೊರತೆಯಿರುವ ಅನುದಾನಿತ ಕಾಲೇಜುಗಳ ಉಪನ್ಯಾಸಕರನ್ನು ಕಾರ್ಯಭಾರ ಹೊಂದಿರುವ ಕಾಲೇಜುಗಳಿಗೆ ನಿಯೋಜಿಸಲಾಗುತ್ತಿದೆ. ಇದರಿಂದ ಕೆಲ ಉಪನ್ಯಾಸಕರು ವಾರದ 3 ದಿನಗಳು ಸಾಕಷ್ಟು ದೂರದ ಊರುಗಳಲ್ಲಿನ ಅನುದಾನಿತ ಕಾಲೇಜಿಗೆ ತೆರಳಿ ಕಾರ್ಯನಿರ್ವಹಿಸುವಂತಾಗಿದೆ. ಕೆಲ ಉಪನ್ಯಾಸಕರಿಗೆ ನಿಯೋಜನೆ ಸ್ಥಳಾವಕಾಶವು ಇಲ್ಲವಾಗಿದೆ. ಆದ್ದರಿಂದ ನಿಗದಿತ ಕಾರ್ಯಭಾರವಿಲ್ಲದ ಉಪನ್ಯಾಸಕರನ್ನು ಈ ಹಿಂದೆ ಇದ್ದಂತೆ ಸಮೀಪದ ಸರ್ಕಾರಿ ಕಾಲೇಜುಗಳಿಗೆ ನಿಯೋಜಿಸಿದರೆ ಉಪನ್ಯಾಸಕರಿಗೆ ಅನುಕೂಲವಾಗಲಿದೆ. ಇದರಿಂದ ಸರ್ಕಾರಕ್ಕೂ ಆರ್ಥಿಕ ಹೊರೆ ಆಗುವುದಿಲ್ಲ’ ಎಂದರು.
ಜಿಲ್ಲಾ ಅನುದಾನಿತ ಪದವಿಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ಪದಾಧಿಕಾರಿ ಮಾಲೇಟಿರ ರಶ್ಮಿ, ಅನುದಾನಿತ ಕಾಲೇಜಿನ ಉಪನ್ಯಾಸಕರ ಸಮಸ್ಯೆಗಳನ್ನು ಶಾಸಕರ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿದ ಶಾಸಕ ಎ.ಎಸ್.ಪೊನ್ನಣ್ಣ, ಈ ಕುರಿತು ಸಚಿವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಸಂಘದ ಪದಾಧಿಕಾರಿಗಳಾದ ಜೋಮನ್ ಥೋಮಸ್, ನೋಹ ವಿವೇಕ್, ನಾಚಪ್ಪ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.