ADVERTISEMENT

ಕ್ಷೇತ್ರದಲ್ಲಿ ಬಿಜೆಪಿ ಗೆಲುವು ಶತಸಿದ್ಧ: ಮುನಿಸ್ವಾಮಿ ವಿಶ್ವಾಸ

​ಪ್ರಜಾವಾಣಿ ವಾರ್ತೆ
Published 3 ಮೇ 2019, 10:46 IST
Last Updated 3 ಮೇ 2019, 10:46 IST

ಕೋಲಾರ: ‘ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ವಿಪಕ್ಷಗಳ ನಾಯಕರು ಪಕ್ಷಾತೀತವಾಗಿ ಬಿಜೆಪಿ ಪರ ಕೆಲಸ ಮಾಡಿದ್ದು, ನನ್ನ ಗೆಲುವು ಶತಸಿದ್ಧ’ ಎಂದು ಬಿಜೆಪಿ ಅಭ್ಯರ್ಥಿ ಎಸ್‌.ಮುನಿಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಸ್ವಪಕ್ಷೀಯ ಕಾರ್ಯಕರ್ತರು ಹಾಗೂ ಮುಖಂಡರ ಜತೆಗೆ ವಿಪಕ್ಷದವರು ಚುನಾವಣೆಯಲ್ಲಿ ನನ್ನ ಪರ ಕೆಲಸ ಮಾಡಿದ್ದಾರೆ. ಕ್ಷೇತ್ರದ ಜನರು ಸಹ ನನ್ನ ಪರ ಒಲವು ವ್ಯಕ್ತಪಡಿಸಿದ್ದು, ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ’ ಎಂದರು.

‘ಚುನಾವಣೆ ಘೋಷಣೆಯಾದ ದಿನದಿಂದ ದೇಶದೆಲ್ಲೆಡೆ ಜನ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಬಯಸಿದ್ದಾರೆ. ಕ್ಷೇತ್ರದಲ್ಲೂ ಮೋದಿ ಅಲೆ ಕೆಲಸ ಮಾಡಿದ್ದು, ಶೇ 75ರಷ್ಟು ಮತದಾರರು ನನ್ನ ಪರ ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆದ್ದು ಇತಿಹಾಸ ನಿರ್ಮಿಸುತ್ತದೆ’ ಎಂದು ತಿಳಿಸಿದರು.

ADVERTISEMENT

‘ಜಿಲ್ಲಾ ಕೇಂದ್ರವಾದ ಕೋಲಾರ ನಗರವು ಅಭಿವೃದ್ಧಿ ವಿಚಾರದಲ್ಲಿ ಹಳ್ಳಿಗಿಂತಲೂ ಕಡೆಯಾಗಿದೆ. ಇಲ್ಲಿನ ಮೂಲಸೌಕರ್ಯ ಸಮಸ್ಯೆ ಗಮನಿಸಿದರೆ ಕೋಲಾರ ಕುಗ್ರಾಮವೆಂಬ ಅನುಮಾನ ಮೂಡುತ್ತದೆ. ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿದ್ದು, ಮರು ಕ್ಷಣವೇ ಜಿಲ್ಲೆಯ ಅಭಿವೃದ್ಧಿ ಕಾರ್ಯ ಆರಂಭಿಸುತ್ತೇನೆ. ನಿರುದ್ಯೋಗ, ನೀರು ಸೇರಿದಂತೆ ಜನರ ಸಮಸ್ಯೆಗೆ ಸ್ಪಂದಿಸಿ ಪಕ್ಷಾತೀತವಾಗಿ ಕ್ಷೇತ್ರ ಅಭಿವೃದ್ಧಿ ಮಾಡುತ್ತೇನೆ’ ಎಂದು ಭರವಸೆ ನೀಡಿದರು.

ವಿಜಯೋತ್ಸವ ಆಚರಿಸಲಿದೆ: ‘ಜಿಲ್ಲಾ ಕೇಂದ್ರ, ಹೋಬಳಿ, ಹಳ್ಳಿಗಳಲ್ಲಿ ಚುನಾವಣಾ ಪ್ರಚಾರ ಮಾಡಿದ್ದೇವೆ. ಮೋದಿ ಪಡೆಗೆ ಕ್ಷೇತ್ರದ ಮುನಿಸ್ವಾಮಿ ಅವರನ್ನು ಸೇರಿಸಿ ಮೋದಿಯವರ ಕೈ ಬಲಪಡಿಸುತ್ತೇವೆ. ಕ್ಷೇತ್ರದಲ್ಲಿ ಮೇ 23ರಂದು ಬಿಜೆಪಿ ವಿಜಯೋತ್ಸವ ಆಚರಿಸಲಿದೆ’ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಕೃಷ್ಣಾರೆಡ್ಡಿ ಹೇಳಿದರು.

‘ಕ್ಷೇತ್ರದಲ್ಲಿ ಕಾಂಗ್ರೆಸ್– ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ರನ್ನು ಸೋಲಿಸಲು ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಹಾಲಿ ಶಾಸಕ ಎಚ್.ನಾಗೇಶ್, ಚಿಂತಾಮಣಿ ಕ್ಷೇತ್ರದ ಮಾಜಿ ಶಾಸಕ ಎಂ.ಸಿ.ಸುಧಾಕರ್‌ ಸೇರಿದಂತೆ ಹಲವರು ಪಕ್ಷದ ಅಭ್ಯರ್ಥಿಗೆ ನೇರ ಬೆಂಬಲ ನೀಡಿದ್ದಾರೆ. ಮತ್ತೆ ಕೆಲವರು ತೆರೆಮರೆಯಲ್ಲೇ ನಿಂತು ಸಹಕರಿಸಿದ್ದಾರೆ’ ಎಂದು ವಿವರಿಸಿದರು.

ಕನಸು ನನಸು: ‘ಹಿಂದಿನ 3 ಲೋಕಸಭಾ ಚುನಾವಣೆಗಳಲ್ಲಿ ಪಕ್ಷದ ಅಭ್ಯರ್ಥಿಗಳು ಕಡಿಮೆ ಮತಗಳ ಅಂತರದಲ್ಲಿ ಸೋತಿದ್ದರು. ಈ ಬಾರಿ ಮೋದಿಯವರ ಹೆಸರು ಎಲ್ಲರ ಮನಸ್ಸಿನಲ್ಲಿದ್ದು, ಪಕ್ಷದ ಬಹಳ ವರ್ಷಗಳ ಕನಸು ಪ್ರಸಕ್ತ ಚುನಾವಣೆಯಲ್ಲಿ ನನಸಾಗುತ್ತದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ ಹೇಳಿದರು.

ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ವಾಸುದೇವ್, ರಾಮಚಂದ್ರೇಗೌಡ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.