ADVERTISEMENT

ಕಾಂಗ್ರೆಸ್‌ ಕೊಪ್ಪಳ ಜಿಲ್ಲಾಧ್ಯಕ್ಷರಾಗಿ ಅಮರೇಗೌಡ ಬಯ್ಯಾಪುರ ನೇಮಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2024, 17:24 IST
Last Updated 1 ಏಪ್ರಿಲ್ 2024, 17:24 IST
   

ಕೊಪ್ಪಳ: ಲೋಕಸಭಾ ಚುನಾವಣೆ ಸವಾಲು ಎದುರಿಸುತ್ತಿರುವ ಹೊತ್ತಿನಲ್ಲಿಯೇ ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ಅವರನ್ನು ಕಾಂಗ್ರೆಸ್‌ ಪಕ್ಷದ ಕೊಪ್ಪಳ ಜಿಲ್ಲೆಯ ನೂತನ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಬಯ್ಯಾಪುರ ಅವರು ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ 2008 ಹಾಗೂ 2018ರಲ್ಲಿ ಕಾಂಗ್ರೆಸ್‌ನಿಂದ ಶಾಸಕರಾಗಿದ್ದರು. ಹಿಂದಿನ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಲೋಕಸಭಾ ಚುನಾವಣೆಗೆ ಅವರು ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಪಕ್ಷ ರಾಜಶೇಖರ ಹಿಟ್ನಾಳ ಅವರಿಗೆ ಟಿಕೆಟ್‌ ನೀಡಿ ಬಯ್ಯಾಪುರ ಅವರಿಗೆ ಪಕ್ಷ ಸಂಘಟಿಸುವ ಜವಾಬ್ದಾರಿ ನೀಡಿದೆ.

ಜಿಲ್ಲಾ ಉಸ್ತುವಾರಿ ಸಚಿವರೂ ಆದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಖಾತೆ ಸಚಿವ ಶಿವರಾಜ ತಂಗಡಗಿ ಇಷ್ಟು ದಿನಗಳ ಕಾಲ ಪಕ್ಷದ ಜಿಲ್ಲಾಧ್ಯಕ್ಷರಾಗಿದ್ದರು. ಇವರ ಅವಧಿಯೂ ಮುಗಿದಿತ್ತು. ಆರಂಭದಿಂದಲೂ ಬಯ್ಯಾಪುರ ಹೆಸರು ಈ ಸ್ಥಾನಕ್ಕೆ ಕೇಳಿಬಂದಿತ್ತು.

ADVERTISEMENT

ಬಂಪರ್‌: 15 ದಿನಗಳ ಅಂತರದಲ್ಲಿ ಕುಷ್ಟಗಿ ಕ್ಷೇತ್ರಕ್ಕೆ ಮತ್ತೊಂದು ಬಂಪರ್‌ ಅವಕಾಶ ಲಭಿಸಿದಂತಾಗಿದೆ. ಕುಷ್ಟಗಿ ಕ್ಷೇತ್ರದ ಮಾಜಿ ಶಾಸಕ ಹಸನಸಾಬ್‌ ದೋಟಿಹಾಳ್‌ ಅವರನ್ನು ತುಂಗಭದ್ರಾ ಯೋಜನೆಯ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ (ಕಾಡಾ) ಅಧ್ಯಕ್ಷರನ್ನಾಗಿ ನೇಮಿಸಿತ್ತು.

ಈ ಖುಷಿಯನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡ ಬಯ್ಯಾಪುರ ‘ಪಕ್ಷ ವಹಿಸಿದ ಜವಾಬ್ದಾರಿಯನ್ನು ಎಲ್ಲ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ವಹಣೆ ಮಾಡುತ್ತೇನೆ. ಎಲ್ಲರ ಸಲಹೆ ಮತ್ತು ವಿಚಾರಗಳನ್ನು ಚರ್ಚಿಸಿ ಪಕ್ಷವನ್ನು ಮತ್ತಷ್ಟು ಸಂಘಟಿತಗೊಳಿಸಲು ಕೆಲಸ ಮಾಡುವೆ. ಪಕ್ಷ ಈ ಅವಕಾಶ ಕೊಟ್ಟಿದ್ದಕ್ಕೆ ಖುಷಿಯಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.