ಶಿವರಾಜ ತಂಗಡಗಿ
ಕೊಪ್ಪಳ: ‘ಕಾಂತರಾಜ್ ಆಯೋಗದ ವರದಿಯನ್ನೇ ನಕಲಿ ಎಂದು ಹೇಳುತ್ತಿರುವ ಬಿಜೆಪಿಯವರು ಹಿಂದುಳಿದ ವರ್ಗಗಳ ಪರವಾಗಿದ್ದಿರಾ ಅಥವಾ ವಿರುದ್ಧವಾಗಿದ್ದಾರಾ ಎನ್ನುವುದನ್ನು ಸ್ಪಷ್ಟಪಡಿಸಬೇಕು’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದರು.
‘ಹಿಂದೆ ಜಯಪ್ರಕಾಶ ಹೆಗ್ಡೆ ನೀಡಿದ ವರದಿ ನಕಲಿ ಎಂದು ಬಿಜೆಪಿಗೆ ಯಾಕೆ ಅನ್ನಿಸಲಿಲ್ಲ. ಈಗ ನಾಚಿಕೆ ಇಲ್ಲದೆ ವರದಿ ನಕಲಿ, ಅವೈಜ್ಞಾನಿಕ ಎಂದು ಬಿಜೆಪಿಯವರು ವಿನಾಕಾರಣ ಟೀಕಿಸುತ್ತಿದ್ದಾರೆ. ಸಚಿವರು ತಮ್ಮ ಅಭಿಪ್ರಾಯಗಳನ್ನು ಸಂಪುಟ ಸಭೆಯಲ್ಲಿ ತಿಳಿಸಿದ್ದಾರೆ. ಈ ಕುರಿತು ಇನ್ನಷ್ಟು ಅಧ್ಯಯನ ಅಗತ್ಯವಿದೆ ಎಂದಿದ್ದಾರೆ’ ಎಂದು ಇಲ್ಲಿ ಮಂಗಳವಾರ ಮಾಧ್ಯಮದವರಿಗೆ ತಿಳಿಸಿದರು.
‘ಎಲ್ಲರೂ ಸಂಪೂರ್ಣವಾಗಿ ವರದಿ ಓದಲಿ. ಬಳಿಕ ಶಾಸಕರಿಗೂ ಕೊಡುತ್ತೇವೆ. ಜನಾಭಿಪ್ರಾಯ ವ್ಯಕ್ತವಾದ ಬಳಿಕ ಮುಂದಿನ ನಡೆ ಬಗ್ಗೆ ನಿರ್ಧರಿಸೋಣ. ಈಗಲೇ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ’ ಎಂದು ಹೇಳಿದರು.
ಬಿಜೆಪಿ ನಡೆಸುತ್ತಿರುವ ಜನಾಕ್ರೋಶ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ ‘ವಿಜಯೇಂದ್ರ ಅವರು ದೆಹಲಿಗೆ ಹೋಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರ ಮನೆ ಮುಂದೆ ಹೋರಾಟ ಮಾಡಲಿ. ಬೆಲೆ ಏರಿಕೆಗೆ ಕೇಂದ್ರವೇ ಕಾರಣ. ರಾಜ್ಯದಲ್ಲಿ ಇವರಿಗೆ ಮಾಡಲು ಕೆಲಸ ಇಲ್ಲ. ಅದಕ್ಕೆ ಯಾತ್ರೆ ಮಾಡುತ್ತಿದ್ದಾರೆ’ ಎಂದು ಟೀಕಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.