
ಕೊಪ್ಪಳ: ‘ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮುಷ್ಕರ ಮಾಡುತ್ತಿರುವಾಗ ಸರ್ಕಾರ ಬೇಡಿಕೆ ಈಡೇರಿಸುವ ಭರವಸೆ ನೀಡಿದೆ. ಆದರೆ ನಾಲ್ಕು ತಿಂಗಳಾದರೂ ಬೇಡಿಕೆ ಈಡೇರಿಸಿಲ್ಲ. ಹಾಗಾಗಿ ಮಾಡು ಇಲ್ಲವೇ ಮಡಿ ಎಂಬ ನಿರ್ಧಾರ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ’ ಎಂದು ಪೌರ ನೌಕರರ ಸಂಘದ ರಾಜ್ಯಾಧ್ಯಕ್ಷ ಕೆ.ಪ್ರಭಾಕರ ಹೇಳಿದರು
ನಗರದ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಭಾನುವಾರ ರಾಜ್ಯ ಪೌರ ನೌಕರರ ಸಂಘದ ವತಿಯಿಂದ ನಡೆದ ರಾಜ್ಯ ಪರಿಷತ್ ಸಭೆಯಲ್ಲಿ ಅವರು ಮಾತನಾಡಿದರು.
‘ಎಲ್ಲ ಸರ್ಕಾರಿ ನೌಕರರಿಗೆ ಜ್ಯೋತಿ ಸಂಜೀವಿನಿ ಯೋಜನೆ ಇದೆ. ಆದರೆ ನಮಗಿಲ್ಲ. ಎಲ್ಲರ ಮನೆ ಸೇವೆ ಮಾಡಿದರೂ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ವಾಟರ್‌ಮನ್, ಚಾಲಕರು, ನೋಡಲ್ ಎಂಜಿನಿಯರ್, ವಿವಿಧ ನೌಕರರಿಂದ ಹೊರಗುತ್ತಿಗೆಯಿಂದ ಹೊರತಂದು, ನೇರ ಪಾವತಿ ಮಾಡಬೇಕು. ಅಹಿಂದ ಪರ ಎನ್ನುವ ಸರ್ಕಾರವು ನಗರಸಭೆ ಅನುದಾನದಿಂದ ಕೊಡದೆ ಎಸ್‌ಎಫ್‌ಸಿ ಅನುದಾನದಿಂದ ಪೌರಕಾರ್ಮಿಕರ ವೇತನ ಪಾವತಿಸಬೇಕು’ ಎಂದು ಆಗ್ರಹಿಸಿದರು.
‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಭಾಗ್ಯ ಜಾರಿ ಗೊಳಿಸಿರುವುದು ಸ್ವಾಗತಾರ್ಹ. ಆದರೆ ಇದಕ್ಕೆ ನೀಡುವ ಮೊತ್ತವನ್ನು ₹15 ಲಕ್ಷ ಹೆಚ್ಚಿಸಬೇಕು. ಡಿ.ದರ್ಜೆಯ ನೌಕರರಿಗೂ ವಿಸ್ತರಣೆ ಮಾಡಬೇಕು. ಪೌರಕಾರ್ಮಿಕರನ್ನು ಸರ್ಕಾರಿ ನೌಕರರನ್ನಾಗಿ ಮಾಡಬೇಕು’ ಎಂದು ಒತ್ತಾಯಿಸಿದರು.
ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ‘ಮುಂಬರುವ ಬೆಳಗಾವಿ ಅಧಿವೇಶನದಲ್ಲಿ ಪೌರ ನೌಕರರ ಸಮಸ್ಯೆಗಳ ಕುರಿತು ಪ್ರಶ್ನೆ ಮಾಡುತ್ತೇವೆ. ಪೌರಾಡಳಿತ ಸಚಿವರು ಪೌರಕಾರ್ಮಿಕರ ನೋವು ಅರ್ಥ ಮಾಡಿಕೊಳ್ಳುತ್ತಿಲ್ಲ’ ಎಂದರು.
ಪೌರ ಕಾರ್ಮಿಕರಿಂದಲೇ ಗ್ರಾಮ, ಜಿಲ್ಲೆ ಸ್ವಚ್ಛವಾಗಿದೆ. ಇದು ಸರ್ಕಾರಕ್ಕೂ ಗೊತ್ತು. ಪೌರಕಾರ್ಮಿಕರ ಸಮಸ್ಯೆ ಕೇಳುವವರಿಲ್ಲ. ಯಾವುದೇ ಮನೆಯವರು ಕರೆದು, ಸತ್ಕಾರ ಮಾಡುವುದಿಲ್ಲ. ಎನೇ ಕೇಳಿದರೂ ಪ್ರತಿಭಟನೆಯ ಮೂಲಕವೇ ಕೇಳಬೇಕಿದೆ’ ಎಂದರು.
ಸಂಘದ ಜಿಲ್ಲಾಧ್ಯಕ್ಷ ಶಿವು ಕಟ್ಟಿಮನಿ, ರಾಜ್ಯ ಪ್ರಧಾನ ಕಾರ್ಯದರ್ಶಿ ಗುರುನಾಥ, ಉಪಾಧ್ಯಕ್ಷರಾದ ನಾಗರಾಜ, ಮುತ್ತಣ್ಣ ಭಂಡಾರಿ, ಕಾರ್ಯದರ್ಶಿ ಹಂಪಯ್ಯ ಪಾಟೀಲ್, ನಾಗೇಶ, ಚಂದ್ರು, ಬಸವರಾಜ ಕಾಂಬಳೆ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪೌರ ನೌಕರರು ಹಾಗೂ ಕಾರ್ಮಿಕರು ನಗರದ ಆರೋಗ್ಯದ ಬೆನ್ನೆಲುಬು. ಅವರದ್ದು ಪವಿತ್ರ ಸಮಾಜಸೇವೆ. ಅವರ ಬೇಡಿಕೆ ಈಡೇರಿಸುವುದು ನಮ್ಮ ಆದ್ಯ ಕರ್ತವ್ಯಅಮ್ಜದ್ ಪಟೇಲ್ ನಗರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.