
ಗಂಗಾವತಿ: ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿನ ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ನೌಕರರ ವಿಳಂಬ ಮಾಡಿದ 8 ತಿಂಗಳ ವೇತನ ಪಾವತಿಸದಿದ್ದರೆ ಮತದಾನ ಬಹಿಷ್ಕರಿಸುವುದಾಗಿ ಹಾಸ್ಟೆಲ್ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಜಿಲ್ಲಾ ಸಮಿತಿ ಸದಸ್ಯರು ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಗ್ರೇಡ್-1ಸಹಾಯಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ನೌಕರರ ಜಿಲ್ಲಾ ಸಮಿತಿ ಜಿಲ್ಲಾಧ್ಯಕ್ಷ ಗ್ಯಾನೇಶ ಕಡಗದ ಮಾತನಾಡಿ, ಈ ಹಾಸ್ಟೆಲ್‌ಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗೆ ಕಳೆದ 8 ತಿಂಗಳಿಂದ ಸಮಾಜ ಕಲ್ಯಾಣ ಇಲಾಖೆ ವೇತನ ಪಾವತಿ ಮಾಡಿಲ್ಲ. ಹಾಗೇ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಕಾರ್ಯಾಲಯ ಮತ್ತು ವಸತಿ ನಿಲಯದಲ್ಲಿ ಕೆಲಸ ಮಾಡುತ್ತಿರುವ ಹೊರಗುತ್ತಿಗೆ ಸಿಬ್ಬಂದಿಗೂ ಸಹ 3 ತಿಂಗಳ ವೇತನ ಬಾಕಿಯಿದೆ. ವೇತನ ಪಾವತಿಸುವಂತೆ ಅಧಿಕಾರಿಗಳನ್ನು ಕೇಳಿದರೆ, ಬಜೆಟ್ ಇಲ್ಲ ಎಂದು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಬರಗಾಲದ ಪರಿಸ್ಥಿತಿಯಲ್ಲಿ ಹೊರಗುತ್ತಿಗೆ ನೌಕರರ ಕುಟುಂಬ ನಿರ್ವಹಣೆ ಕಷ್ಟವಾಗಿದ್ದು, ಅಧಿಕಾರಿಗಳು 2 ದಿನಗಳ ಒಳಗೆ ವೇತನ ಪಾವತಿಸಬೇಕು. ಇಲ್ಲವಾದಲ್ಲಿ ಮತದಾನ ಬಹಿಷ್ಕರಿಸಿ, ಇಲಾಖೆಗಳ ಎದುರು ಪ್ರತಿಭಟನೆ ಮಾಡಲಾಗುತ್ತದೆ’ ಎಂದರು.
ಫಕೀರಪ್ಪ, ದಾವಲಸಾಬ, ಪಾರ್ವತಮ್ಮ, ರಮೇಶ, ಸೋಮನಾಥ, ಭೀಮೇಶ, ರೇಖಮ್ಮ, ವಲಿಸಾಬ, ಭಾಷಾಸಾಬ, ಮಂಜಮ್ಮ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.