ADVERTISEMENT

ಗವಿಮಠದ ಜಾತ್ರೆಗೆ ದವಸ ಧಾನ್ಯ, ಕಟ್ಟಿಗೆಗಳ ರಾಶಿ: ಮನೆಯಿಂದ ಮಹಾದಾಸೋಹದ ಮನೆ ತನಕ

ಪ್ರಮೋದ ಕುಲಕರ್ಣಿ
Published 3 ಜನವರಿ 2026, 6:36 IST
Last Updated 3 ಜನವರಿ 2026, 6:36 IST
ಕೊಪ್ಪಳದ ಗವಿಮಠಕ್ಕೆ ದವಸ ಧಾನ್ಯ ಅರ್ಪಿಸಲು ಮೆರವಣಿಗೆ ಮೂಲಕ ಬಂದ ಭಕ್ತರು
ಕೊಪ್ಪಳದ ಗವಿಮಠಕ್ಕೆ ದವಸ ಧಾನ್ಯ ಅರ್ಪಿಸಲು ಮೆರವಣಿಗೆ ಮೂಲಕ ಬಂದ ಭಕ್ತರು   

ಕೊಪ್ಪಳ: ಗವಿಮಠದ ಜಾತ್ರೆಯ ಕಾರಣಕ್ಕಾಗಿ ನಗರದಲ್ಲೆಡೆ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಠಕ್ಕೆ ಹೋಗುವ ಮುಖ್ಯರಸ್ತೆಯಾದ ಗಂಜ್‌ ವೃತ್ತದಿಂದ ಮಠದ ತನಕ ಮಾರ್ಗದಲ್ಲಿ ಕಣ್ಣು ಹಾಯಿಸಿದಷ್ಟೂ ದೂರ ದವಸ, ಧಾನ್ಯಗಳನ್ನು ಹೊತ್ತ ಚಕ್ಕಡಿ, ಟ್ರ್ಯಾಕ್ಟರ್‌ಗಳ ಚಿತ್ರಣ ಸಾಮಾನ್ಯವಾಗಿದೆ.

ಜಿಲ್ಲೆ ಹಾಗೂ ಹೊರಜಿಲ್ಲೆಗಳಿಂದ ಮಠದ ಮೇಲಿನ ಭಕ್ತಿಯಿಂದಾಗಿ ಮನೆಮನೆಗಳಲ್ಲಿ ತಯಾರಿಸಿದ ಜೋಳದ ರೊಟ್ಟಿ, ತರಹೇವಾರಿ ಸಿಹಿ ತಿಂಡಿಗಳು, ಬೇಳೆ, ಕಾಳು, ಅಕ್ಕಿ, ತರಕಾರಿ, ಕಾಯಿಪಲ್ಲೆ, ಲಕ್ಷಾಂತರ ಭಕ್ತರಿಗೆ ಅಡುಗೆ ತಯಾರಿಸಲು ಕಟ್ಟಿಗೆ ಹೀಗೆ ಅನೇಕ ಸಾಮಗ್ರಿಗಳನ್ನು ಹೊತ್ತು ವಾಹನಗಳು ಹಾಗೂ ಬಂಡಿಗಳು ಸಾಗುತ್ತಿವೆ. ಬೇರೆ ಊರೂರುಗಳಿಂದ ಬರುತ್ತಿರುವ ಭಕ್ತರು ಗಂಜ್‌ ವೃತ್ತಕ್ಕೆ ಬರುತ್ತಿದ್ದಂತೆ ಗವಿಮಠದ ತನಕ ಮೆರವಣಿಗೆ ಮೂಲಕ ಭಜನೆ ಮಾಡಿಕೊಂಡು ಗವಿಸಿದ್ಧೇಶ್ವರನ ಹಾಡುಗಳನ್ನು ಹಾಡುತ್ತ ಬಂದು ಸಮರ್ಪಣೆ ಮಾಡುತ್ತಿದ್ದಾರೆ. ಹೀಗೆ ಪ್ರತಿ ಮನೆಮನೆಯಿಂದ ಸೇರುತ್ತಿರುವ ತಿನಿಸು ಇಲ್ಲಿನ ಮಠದಲ್ಲಿ ಮಹಾದಾಸೋಹದ ಮನೆಗೆ ಸೇರುತ್ತಿದೆ. ಬಳಿಕ ಇದು ಮಠಕ್ಕೆ ಬರುವ ಭಕ್ತರಿಗೆ ನೀಡಲಾಗುತ್ತದೆ.

ಮಹಾದಾಸೋಹಕ್ಕಾಗಿ ಕೊಪ್ಪಳ ತಾಲ್ಲೂಕಿನ ಹಿರೇಸೂಳಿಕೇರಿ ಗ್ರಾಮದ ಭಕ್ತರು 5000 ರೊಟ್ಟಿ, ನಾಲ್ಕು ಪಾಕೆಟ್‌ ಅಕ್ಕಿ, ಏಳು ಟ್ರಾಕ್ಟರ್‌ ಕಟ್ಟಿಗೆ, ಗಂಗಾವತಿ ತಾಲ್ಲೂಕಿನ ಹಿರೇಬೆಣಕಲ್ ಗ್ರಾಮದವರು 21 ಕ್ವಿಂಟಲ್‌ ಅಕ್ಕಿ, 1100 ಜೋಳದ ರೊಟ್ಟಿ, ಹಾವೇರಿಯ ಬ್ಯಾಡಗಿ ಗ್ರಾಮದವರು 24 ಕ್ವಿಂಟಲ್‌ ಖಾರದಪುಡಿ, ಎರಡು ಕ್ವಿಂಟಲ್‌ ಅಕ್ಕಿ, ನಾಲ್ಕು ಕ್ವಿಂಟಲ್‌ ಬೆನ್ನ, 30 ಚೀಲ ಮೆಣಸಿನಕಾಯಿ ಅರ್ಪಿಸಿದ್ದಾರೆ. ಇವು ಕೆಲವು ಉದಾಹಣೆಗಳಷ್ಟೇ. ಹೀಗೆ ಅನೇಕ ಭಕ್ತರು ನೀಡುತ್ತಿರುವ ದವಸ, ಧಾನ್ಯಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ.

ADVERTISEMENT

ಪಲ್ಲಕ್ಕಿ ಮೆರವಣಿಗೆ ಇಂದು: ಜಾತ್ರಾ ಮಹೋತ್ಸವದ ನಿಮಿತ್ಯ ಶನಿವಾರ ಸಂಜೆ 4ಕ್ಕೆ ಗವಿಸಿದ್ಧೇಶ್ವರ ಮೂರ್ತಿಯ (ಪಲ್ಲಕ್ಕಿ) ಮೆರವಣಿಗೆಯು ಕೋಟೆ ಪ್ರದೇಶದ ಜಡೇಗೌಡರ ಮನೆಯಿಂದ ಆರಂಭವಾಗುತ್ತದೆ. ನಂದಿಕೋಲು, ಡೊಳ್ಳು, ಭಜನೆ, ಭಾಜಾ-ಭಜಂತ್ರಿ, ಪಂಜು, ಇಲಾಲು ಹಾಗೂ ನಾಡಿನ ಸಾಂಸ್ಕ್ರತಿಕ ವೈಭವವನ್ನು ಬಿಂಬಿಸುವ ಕಲಾ ತಂಡಗಳು ಪಾಲ್ಗೊಳ್ಳಲಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾ ತಂಡಗಳು ಪ್ರದರ್ಶನ ನೀಡಲಿವೆ.

ಈ ಬಾರಿ ಉತ್ತರ ಕನ್ನಡದ ಪುರಿಷೋತ್ತಮಗೌಡ ಹಾಗೂ ತಂಡದವರ ಸುಗ್ಗಿ ಕುಣಿತ, ಹಿರೇವಕ್ಕಲಕುಂಟಾದ ಮಾರುತೇಶ್ವರ ಡೊಳ್ಳಿನ ಕಲಾತಂಡದವರಿಂದ ಡೊಳ್ಳು ಕುಣಿತ, ವಿಜಯಪುರದ ಸಿದ್ಧಾಪುರ ಕಾರಿಜೋಳ ರೇವಣಸಿದ್ಧೇಶ್ವರ ಕಲಾ ತಂಡದವರಿಂದ ಸತ್ತಿಗೆ ಕುಣಿತ ಆಕರ್ಷಣೆಯಾಗಿವೆ.

ಜಡೇಗೌಡರ ಮನೆಯಿಂದ ಪ್ರಾರಂಭಗೊಂಡು ಕೋಟೆ ಮಠದಿಂದ ಪಲ್ಲಕ್ಕಿ ಹೊರಟು ಗಡಿಯಾರ ಕಂಬ ವೃತ್ತದಲ್ಲಿ, ಮುದ್ದಾಬಳ್ಳಿಯಿಂದ ಬರುವ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯೂ, ಹಲಗೇರಿ ಗ್ರಾಮದ ಭಕ್ತರಾದ ದಿವಂಗತ  ವೀರನಗೌಡರು ಪಾಟೀಲರ ಮನೆಯಿಂದ ಬರುವ ಕಳಸ ಹಾಗೂ ಮಂಗಳಾಪುರದಿಂದ ಬರುವ ಗವಿಸಿದ್ಧೇಶ್ವರ ಉತ್ಸವ ಮೂರ್ತಿಯೂ ಜವಾಹರ ರಸ್ತೆಯಲ್ಲಿ ಕೂಡಿಕೊಂಡು ಮಠಕ್ಕೆ ಬಂದು ತಲುಪುತ್ತದೆ.

ಗವಿಮಠ

5ರಿಂದ ರಕ್ತದಾನ ಶಿಬಿರ

ಕೊಪ್ಪಳ: ಜಾತ್ರಾ ಮಹೋತ್ಸವದ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಜಿಲ್ಲಾ ಘಟಕ ಗವಿಸಿದ್ಧೇಶ್ವರ ಆಯುರ್ವೇದಿಕ್ ಮಹಾವಿದ್ಯಾಲಯ ವತಿಯಿಂದ ಜ. 5ರಿಂದ 8ರ ತನಕ ಬೆಳಿಗ್ಗೆ 9 ಗಂಟೆಯಿಂದ ಸಂಜೆ 5ರ ತನಕ ಮಹಾವಿದ್ಯಾಲಯದಲ್ಲಿ ರಕ್ತದಾನ ಶಿಬಿರ ನಡೆಯಲಿದೆ.

ಮೊಬೈಲ್‌ನಲ್ಲಿಯೇ ಮಾಹಿತಿ

ಗವಿಮಠದ ಜಾತ್ರೆಗೆ ಸಂಬಂಧಿತ ವಿವರಗಳು ಹಾಗೂ ನೇರ ಪ್ರಸಾರವನ್ನು ಸಾಮಾಜಿಕ ತಾಣಗಳಲ್ಲಿ ಹಾಗೂ ಮಠದ ಅಧಿಕೃತ ಯೂ ಟ್ಯೂಬ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ. ವ್ಯಾಟ್ಸ್‌ ಆ್ಯಪ್‌ನಲ್ಲಿ 9980899219 ಬಳಸಿಕೊಂಡು ಮಾಹಿತಿ ಪಡೆದುಕೊಳ್ಳಬಹುದು.

ರಥೋತ್ಸವ ದಿನ ಶಾಲಾ ಸಮಯ ಬದಲಾವಣೆ

ಕೊಪ್ಪಳ: ಜಾತ್ರೆಯ ಮಹಾರಥೋತ್ಸವ ಜರುಗಲಿರುವ ಜ. 5ರಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ. ಅಂದು ಬೆಳಿಗ್ಗೆ 8.30ರಿಂದ ಮಧ್ಯಾಹ್ನ 1.30ರ ತನಕ ಸಮಯದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಡಿಡಿಪಿಐ ಆದೇಶ ಹೊರಡಿಸಿದ್ದರು. ಶಾಲಾ ಸಮಯ ಬದಲಾವಣೆ ಮಾಡುವಂತೆ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಸಂಘದವರು ಮನವಿ ಸಲ್ಲಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.