ಕೊಪ್ಪಳ: ಮಾಸಿಕ ಭಕ್ತರಿಂದಲೇ ಕನಿಷ್ಠ ₹1 ಕೋಟಿ ನಗದು, ಬೆಳ್ಳಿ, ಬಂಗಾರ ಸೇರಿ ಅನೇಕ ಸಾಮಗ್ರಿಗಳು ಸಂಗ್ರಹವಾಗುತ್ತಿದ್ದರೂ ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಮೂಲಸೌಕರ್ಯಗಳು ಮರೀಚಿಕೆಯಾಗಿವೆ. ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಬೆಳಗಾವಿಯ ಸವದತ್ತಿಗೆ ಬರುವಂತೆಯೇ ವಿವಿಧ ಜಿಲ್ಲೆಗಳ ಜೊತೆಗೆ ಆಂಧ್ರ, ತೆಲಂಗಾಣ, ಮಹಾರಾಷ್ಟ್ರದಿಂದ ಹುಲಿಗಿ ಕ್ಷೇತ್ರಕ್ಕೆ ಮಂಗಳವಾರ, ಶುಕ್ರವಾರ, ಹುಣ್ಣಿಮೆ ದಿನಗಳಂದು ಲಕ್ಷಾಂತರ ಭಕ್ತರು ಬರುತ್ತಾರೆ. ಇತ್ತೀಚೆಗೆ ಸೀಗೆ ಹುಣ್ಣಿಮೆ ದಿನದಂದು ಭಕ್ತರ ಸಂಖ್ಯೆ ಮೂರು ಲಕ್ಷ ದಾಟಿತ್ತು.
ಹುಲಿಗಿ ಜಿಲ್ಲಾ ಕೇಂದ್ರದಿಂದ 25 ಕಿ.ಮೀ. ದೂರದಲ್ಲಿದೆ. ಈ ಕ್ಷೇತ್ರದಿಂದ ಸ್ವಲ್ಪ ದೂರದಲ್ಲಿಯೇ ಅಂಜನಾದ್ರಿ, ರಾಮಾಯಣದ ಐತಿಹ್ಯ ಹೊಂದಿರುವ ಪಂಪಾಸರೋವರ, ಆನೆಗೊಂದಿ, ಋಷ್ಯಮುಖ ಪರ್ವತವಿದೆ. ಇನ್ನೊಂದು ಬದಿಯಲ್ಲಿ ವಿಶಾಲವಾಗಿ ಹರಿಯುವ ತುಂಗಭದ್ರಾ ನದಿಯಿದೆ. ಈ ಎಲ್ಲಾ ಪ್ರದೇಶಗಳಲ್ಲಿ ನೋಡಲು ಬರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದ್ದರೂ ಸೌಲಭ್ಯಗಳ ಪ್ರಮಾಣ ಮಾತ್ರ ಮೊದಲಿನಷ್ಟೇ ಇರುವುದು ಭಕ್ತರನ್ನು ಸಂಕಷ್ಟಕ್ಕೆ ಸಿಲುಕಿಸಿದೆ.
ಹುಲಿಗಿ ಕ್ಷೇತ್ರಕ್ಕೆ ಬರುವ ಭಕ್ತರಲ್ಲಿ ಬಹುತೇಕರು ಬಡವರು ಮತ್ತು ಮಧ್ಯಮ ವರ್ಗದವರು. ಮಹಿಳೆಯರು ಈ ಕ್ಷೇತ್ರಕ್ಕೆ ಮೊದಲಿನಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದು, ‘ಶಕ್ತಿ’ ಯೋಜನೆ ಆರಂಭವಾದ ಬಳಿಕ ಅವರ ಸಂಖ್ಯೆ ಮತ್ತಷ್ಟು ಹೆಚ್ಚಾಗಿದೆ.
ಅವರಿಗೆ ಅಲ್ಲಿ ಸಿಗುವ ಸೀಮಿತ ಸೌಲಭ್ಯದಲ್ಲಿ ದೇವಸ್ಥಾನದ ಸುತ್ತಲಿನ ಸ್ಥಳದಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಬೇಕಾದ ಸ್ಥಿತಿಯಿದೆ. ದೇವಸ್ಥಾನದ ಹಿಂಭಾಗದಲ್ಲಿ ಹರಿಯುವ ತುಂಗಭದ್ರಾ ನದಿಯಲ್ಲಿ ಮಿಂದು ಬಟ್ಟೆ ಬದಲಾಯಿಸಲು, ಶೌಚಕ್ಕೆ ಹೋಗಲು ಭಕ್ತರ ಸಂಖ್ಯೆಗೆ ಅನುಗುಣವಾಗಿ ಶೌಚಗೃಹಗಳಿಲ್ಲ. ಬಟ್ಟೆ ಬದಲಾಯಿಸಲು ನದಿಯ ದಡದಲ್ಲಿರುವ ಕಲ್ಲುಗಳ ಮರೆಯ ಮೊರೆ ಹೋಗಬೇಕಾಗಿದೆ ಎಂದು ಮಹಿಳಾ ಭಕ್ತರು ಅಳಲು ತೋಡಿಕೊಂಡರು.
‘ಸೌಲಭ್ಯಗಳು ಇರಲಿ ಬಿಡಲಿ ಪ್ರತಿ ಹುಣ್ಣಿಮೆ ದಿನದಂದು ಹುಲಿಗಿ ಕ್ಷೇತ್ರಕ್ಕೆ ಕುಟುಂಬ ಸಮೇತವಾಗಿ ಬರುತ್ತೇವೆ. ಎಷ್ಟೇ ಕಷ್ಟವಾದರೂ ದರ್ಶನ ಪಡೆದುಕೊಳ್ಳುತ್ತೇವೆ. ನನ್ನಂತೆಯೇ ನಂಬಿಕೆ ಇಟ್ಟುಕೊಂಡು ಬರುವ ಲಕ್ಷಾಂತರ ಮಹಿಳೆಯರಿಗೆ ಬಟ್ಟೆ ಬದಲಿಸಲು ಕೊಠಡಿಗಳಾದರೂ ಬೇಕಲ್ಲವೇ’ ಎಂದು ಬೆಳಗಾವಿಯಿಂದ ಬಂದಿದ್ದ ಭಕ್ತೆ ರೇಣುಕಮ್ಮ ಅಸಹಾಯಕರಾಗಿ ಪ್ರಶ್ನಿಸಿದರು.
ರಾಜ್ಯದ ಹಿಂದೂ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಯ ಹುಲಿಗಿ ದೇವಸ್ಥಾನವನ್ನು ಸರ್ಕಾರ ಪ್ರಾಧಿಕಾರವಾಗಿ ಘೋಷಿಸಿದೆ. ಭಕ್ತರು ನೀಡಿದ ಹಣವೇ ₹75 ಕೋಟಿ ಸಂಗ್ರಹವಿದೆ. ಅಭಿವೃದ್ಧಿಗೆ ಸಮಯ ಬೇಕಾದರೂ ಮೂಲಸೌಕರ್ಯಗಳನ್ನಾದರೂ ಕಲ್ಪಿಸಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
ಭಕ್ತರಿಗೆ ಮೂಲಸೌಕರ್ಯ ಕಲ್ಪಿಸಬೇಕು. ಇಲ್ಲವಾದರೆ ಭಕ್ತರು ಬಡವರಾಗುತ್ತಲೇ ದೇವಸ್ಥಾನದ ಖಜಾನೆ ತುಂಬುತ್ತಲೇ ಹೋಗುತ್ತದೆಶರಣು ಗಡ್ಡಿ ಹೋರಾಟಗಾರ
ದೇವಸ್ಥಾನದ ಅಭಿವೃದ್ಧಿಗೆ ಕ್ರಿಯಾಯೋಜನೆ ರೂಪಿಸಿದ್ದು ಸರ್ಕಾರದ ಅನುಮೋದನೆ ಲಭಿಸಿದೆ. ಹಂತಹಂತವಾಗಿ ಅಭಿವೃದ್ಧಿ ಜಾರಿಗೊಳಿಸಲಾಗುವುದು.ಯು. ಎಚ್. ಪ್ರಕಾಶರಾವ್ ಕಾರ್ಯದರ್ಶಿ ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.