ADVERTISEMENT

ನೀತಿ‌ಸಂಹಿತೆ ಉಲ್ಲಂಘನೆ: ಜನಾರ್ದನ ರೆಡ್ಡಿ ಪೋಸ್ಟರ್‌ ಇದ್ದ ಆಂಬುಲೆನ್ಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2023, 16:32 IST
Last Updated 1 ಏಪ್ರಿಲ್ 2023, 16:32 IST
   

ಕನಕಗಿರಿ (ಕೊಪ್ಪಳ ಜಿಲ್ಲೆ): ಚುನಾವಣಾ ಮಾದರಿ ನೀತಿ‌ಸಂಹಿತೆ ಉಲ್ಲಂಘನೆ ಮಾಡಿದ ಕಾರಣಕ್ಕಾಗಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ವತಿಯಿಂದ ಸಾರ್ವಜನಿಕರ ಬಳಕೆಗೆ ನೀಡಲಾಗಿದ್ದ ಆಂಬುಲೆನ್ಸ್‌ ಅನ್ನು ಅಧಿಕಾರಿಗಳು ಶನಿವಾರ ರಾತ್ರಿ ವಶಪಡಿಸಿಕೊಂಡಿದ್ದಾರೆ.

ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ, ಬಳ್ಳಾರಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಅರುಣಾ ಲಕ್ಷ್ಮೀ ಹಾಗೂ ಕನಕಗಿರಿ ಕ್ಷೇತ್ರದ ನಿಯೋಜಿತ ಅಭ್ಯರ್ಥಿ ಡಾ.‌ವೆಂಕಟರಮಣ ಭಾವಚಿತ್ರಗಳು ವಾಹನದ ಮೇಲೆ ಇವೆ.

‘ಮಾದರಿ ನೀತಿ ಸಂಹಿತೆ ಘೋಷಣೆಯಾದ ಬಳಿಕ ಮತದಾರರ ಮೇಲೆ ಪ್ರಭಾವ ಬೀರುವ ಈ ರೀತಿಯ ವಾಹನಗಳನ್ನು ಬಳಸುವಂತಿಲ್ಲ. ಉಚಿತ ಸೇವೆಯ ಹೆಸರಿನಲ್ಲಿ ಆಂಬುಲೆನ್ಸ್‌ ವಿವಿಧ ಗ್ರಾಮಗಳಲ್ಲಿ ಸಂಚರಿಸಿದ ಮಾಹಿತಿಯಿದೆ. ವಾಹನ ವಶಕ್ಕೆ ಪಡೆದು ಪೊಲೀಸರಿಗೆ ಒಪ್ಪಿಸಲಾಗಿದೆ’ ಎಂದು ಕ್ಷೇತ್ರದ ಚುನಾವಣಾಧಿಕಾರಿ ಸಮೀರ ಮುಲ್ಲಾ ತಿಳಿಸಿದರು.

ADVERTISEMENT

ದಾಖಲೆಗಳಿಲ್ಲದೇ ಸಾಗಾಟ; ಸೀರೆಗಳ ವಶ
ಕಾರಟಗಿ (ಕೊಪ್ಪಳ ಜಿಲ್ಲೆ):
ಅಗತ್ಯ ದಾಖಲೆಗಳಿಲ್ಲದೆ ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ₹4.52 ಲಕ್ಷ ಮೌಲ್ಯದ 226 ಸೀರೆಗಳನ್ನು ಕಾರಟಗಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ನ್ಯಾಯಾಲಯದ ಅನುಮತಿ ಬಳಿಕ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕಾರಟಗಿ ಪಟ್ಟಣದ ಸಮೀಪದ ಸಿದ್ದಲಿಂಗನಗರದ ಬಳಿ ಸ್ಥಾಪಿಸಲಾಗಿರುವ ಚೆಕ್‌ ಪೋಸ್ಟ್‌ ಬಳಿ ಸಿಂಧನೂರ ಕಡೆಯಿಂದ ಬರುತ್ತಿದ್ದ ಕಾರು ತಪಾಸಣೆ ನಡೆಸಿದಾಗ ಸೀರೆಗಳು ಪತ್ತೆಯಾಗಿವೆ. ಕಾರಿನಲ್ಲಿದ್ದ ಹೈದರಾಬಾದ್‌ನ ಅಮೀನಪುರದ ದಿನೇಶಕುಮಾರಗೆ ನೋಟಿಸ್ ನೀಡಲಾಗಿದೆ. ಕಾರಟಗಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.