
ಎಐ ಚಿತ್ರ
ಹನುಮಸಾಗರ (ಕೊಪ್ಪಳ ಜಿಲ್ಲೆ): ’ವರ್ಷಪೂರ್ತಿ ಡ್ಯೂಟಿ ಮಾಡಬೇಕು, ಒಂದು ದಿನವೂ ರಜೆಯಿಲ್ಲ. ಈ ಕೆಲಸಕ್ಕಿಂತ ಎಗ್ ರೈಸ್ ಮಾಡಿ ಬದುಕೋದೆ ಬೆಟರ್’ ಎಂದು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲ್ಲೂಕಿನ ಹನುಮಸಾಗರ ಪೊಲೀಸ್ ಠಾಣೆಯ ಕಾನ್‌ಸ್ಟೆಬಲ್ (PC) ವ್ಯಾಟ್ಸ್ ಆ್ಯಪ್‌ನಲ್ಲಿ ಸ್ಟೇಟಸ್ ಹಾಕಿಕೊಂಡಿರುವುವುದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.
ಪೊಲೀಸ್ ಸಿಬ್ಬಂದಿ ಬ್ರಹ್ಮಾನಂದ ಈ ಸಂದೇಶ ಬರೆದುಕೊಂಡಿದ್ದು ‘ವರ್ಷದ 365 ದಿನಗಳೂ ಕರ್ತವ್ಯ ನಿರ್ವಹಿಸಬೇಕಾಗುತ್ತದೆ. ರಜೆ ಹಾಗೂ ಹಬ್ಬ-ಹರಿದಿನಗಳಲ್ಲಿ ರಜೆಯ ಅವಕಾಶ ಕಡಿಮೆಯಾಗಿದೆ’ ಎಂದಿದ್ದಾರೆ. ’ಈ ವರ್ಷದಲ್ಲಿ 8,300 ಪೊಲೀಸರ ನೇಮಕಾತಿ ಎಂದು ಡಿಜಿ ಐಜಿಪಿ ಎಂಎಂ. ಸಲೀಂ ಅವರು ನೀಡಿದ್ದ ಹೇಳಿಕೆಯ ಪತ್ರಿಕಾ ವರದಿ ಜೊತೆ ಈ ಸಂದೇಶ ಹಂಚಿಕೊಂಡಿದ್ದಾರೆ. ಪೊಲೀಸ್ ಇಲಾಖೆಗೆ ಬರುವ ಮುಂಚೆ ನೂರು ಸಲ ವಿಚಾರ ಮಾಡಿ ಬನ್ನಿ. ಬೇರೆ ಇಲಾಖೆಗೆ ಹೋಗುವುದು ಉತ್ತಮ ಎಂದಿದ್ದಾರೆ.
ಇದರ ಬಗ್ಗೆ ಪ್ರತಿಕ್ರಿಯಿಸಿದ ಬ್ರಹ್ಮಾನಂದ ’ನನಗೆ ಎದುರಾಗುತ್ತಿರುವ ಒತ್ತಡದ ಬಗ್ಗೆ ಮಾತ್ರ ಹೇಳಿಕೊಂಡಿದ್ದೇನೆ ವಿನಃ ಇಲಾಖೆಗೆ ಕೆಟ್ಟ ಹೆಸರು ತರುವ ಉದ್ದೇಶವಿಲ್ಲ’ ಎಂದರು.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ಧಿ ‘ಸ್ಟೇಟಸ್ ಹಾಕಿಕೊಂಡಿದ್ದ ಸಿಬ್ಬಂದಿ ಜೊತೆ ಮಾತನಾಡಿದ್ದೇನೆ. ಶಿಸ್ತಿನ ಇಲಾಖೆಯಲ್ಲಿ ಈ ರೀತಿಯ ಸಂದೇಶ ಹಾಕಿಕೊಳ್ಳಲು ಅವಕಾಶವಿಲ್ಲ. ವರದಿ ನೀಡಲು ಪಿಎಸ್‌ಐಗೆ ಸೂಚಿಸಿದ್ದೇನೆ. ಸಿಬ್ಬಂದಿಗೆ ವೈಯಕ್ತಿಕ ಹಾಗೂ ವೃತ್ತಿ ಸಮಸ್ಯೆಗಳು ಇದ್ದರೆ ನಮ್ಮೊಂದಿಗೆ ಹಂಚಿಕೊಳ್ಳಲು ಮುಕ್ತ ಅವಕಾಶವಿದೆ. ಇಲಾಖೆಯಲ್ಲಿ ಸಮಾಲೋಚಕರು ಕೂಡ ಇದ್ದಾರೆ. ಅವರೊಂದಿಗೂ ಸಮಸ್ಯೆ ಹಂಚಿಕೊಳ್ಳಬಹುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.