
ಕಿನ್ನಾಳದ ಕಲೆಯ ಮಾದರಿ
ಕೊಪ್ಪಳ: ಸರಕು ಮತ್ತು ಸೇವಾ ತೆರಿಗೆ(ಜಿಎಸ್‌ಟಿ) ಇಳಿಕೆ ಮಾಡಿದ ನಂತರ ಜಿಲ್ಲೆಯ ಕಿನ್ನಾಳ ಕಲಾಕೃತಿಗಳಿಗೆ ಬಂಪರ್ ಬೇಡಿಕೆ ಬರುತ್ತಿದೆ.
ತನ್ನೂರಿನ ಕಲಾವಿದರು ನೂರಾರು ವರ್ಷಗಳಿಂದ ತಯಾರಿಸಿಕೊಂಡು ಬರುತ್ತಿರುವ ಕಲಾಕೃತಿಗಳಿಂದಲೇ ಕೊಪ್ಪಳ ತಾಲ್ಲೂಕಿನ ಕಿನ್ನಾಳ ಗ್ರಾಮ ದೇಶ ಹಾಗೂ ವಿದೇಶಗಳಲ್ಲಿ ಹೆಸರಾಗಿದೆ. ಮೊದಲಿನಿಂದಲೂ ಕಿನ್ನಾಳ ಕಲಾಕೃತಿಗಳಿಗೆ ಭಾರಿ ಬೇಡಿಕೆಯಿತ್ತು. ಆದರೆ, ಕೇಂದ್ರ ಸರ್ಕಾರ ಈ ಕಲಾಕೃತಿಗಳ ಮೇಲೆ ಶೇ 12ರಷ್ಟು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಧಿಸಿದ ಬಳಿಕ ವ್ಯಾಪಾರಕ್ಕೆ ಮಂಕು ಕವಿದಂತೆ ಆಗಿತ್ತು. ಇತ್ತೀಚೆಗೆ ಜಿಎಸ್‌ಟಿಯನ್ನು ಶೇ 5ಕ್ಕೆ ಇಳಿಕೆ ಮಾಡಿರುವುದು ವ್ಯಾಪಾರಿಗಳಿಗೂ ಸಂತಸ ಉಂಟು ಮಾಡಿದ್ದು, ಖರೀದಿ ಪ್ರಮಾಣವೂ ದಿಢೀರ್ ಏರಿಕೆಯಾಗಿದೆ.
ಪ್ರಸ್ತುತ ಗ್ರಾಮದಲ್ಲಿ 60 ಕಲಾವಿದರು ಕೀಲುಗೌರಿ, ಕೀಲುಗೊಂಬೆ, ಆಲಂಕಾರಿಕ ಸಾಮಗ್ರಿಗಳು, ಚೌಕಿ, ಟೀಪಾಯಿ, ಗರುಡ, ಕೊಂತಿ ಹೀಗೆ ಅನೇಕ ಕಲಾಕೃತಿಗಳನ್ನು ತಯಾರಿಸುತ್ತಿದ್ದಾರೆ. ‘ಜಿಎಸ್‌ಟಿ ಪರಿಷ್ಕರಣೆಗೂ ಮೊದಲು ಪ್ರತಿ ತಿಂಗಳು ₹2 ಲಕ್ಷದಿಂದ ₹3 ಲಕ್ಷ ಮೊತ್ತದ ಕಲಾಕೃತಿಗಳನ್ನು ತಯಾರಿಸಲು ಮುಂಗಡ ನೋಂದಣಿ ಮಾಡಲಾಗುತ್ತಿತ್ತು. ಈಗ ಒಂದೇ ಬಾರಿಗೆ ₹20 ಲಕ್ಷ ಮೊತ್ತದ ಕಿನ್ನಾಳ ಕಲಾಕೃತಿಗಳನ್ನು ತಯಾರಿಸಲು ಬುಕ್ಕಿಂಗ್ ಮಾಡಿಕೊಂಡಿದ್ದೇನೆ. ಆನ್‌ಲೈನ್ ಮೂಲಕವೇ ದೊಡ್ಡ ಮಾರುಕಟ್ಟೆ ಸಿಕ್ಕಿದೆ’ ಎಂದು ಕಲಾಕೃತಿಗಳ ತಯಾರಕ ಕಿನ್ನಾಳದ ಸಂತೋಷ ಚಿತ್ರಗಾರ ಹೇಳಿದರು.
‘ಈಗ ಗೌರಿ ಮುಖ, ಕಾಮಧೇನು, ಚೈತ್ರಮಾಸ ಗೌರಿ, ಗೊಂಬೆಗಳು, ಹಣ್ಣಿನ ಪುಟ್ಟಿ, ಫಲಕಗಳನ್ನು ಹೊಸ ವಿನ್ಯಾಸದಲ್ಲಿ ತಯಾರಿಸಿಕೊಡುವಂತೆ ಸಾಕಷ್ಟು ಬೇಡಿಕೆ ಬರುತ್ತಿವೆ. ಗ್ರಾಹಕರ ನಿರೀಕ್ಷೆಗೆ ವೇಗವಾಗಿ ತಯಾರಿಸಿಕೊಡಲು ಸಾಧ್ಯವಾಗುತ್ತಿಲ್ಲ. ಜಿಎಸ್‌ಟಿ ಇಳಿಕೆ ಎಲ್ಲರಿಗೂ ಅನುಕೂಲವಾಗಿದೆ’ ಎಂದರು.
ಕೊಪ್ಪಳ ತಾಲ್ಲೂಕಿನ ಕಿನ್ನಾಳ ಕಲೆಯಲ್ಲಿ ಅರಳಿದ ಹಣ್ಣುಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.