
ನರೇಗಾ
ಕೊಪ್ಪಳ: ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಕಾಯ್ದೆಯ ಹೆಸರು, ಸ್ವರೂಪ ಬದಲಾವಣೆ ಬಳಿಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ತಿಕ್ಕಾಟ ನಡೆಯುತ್ತಿದ್ದರೆ, ಇನ್ನೊಂದೆಡೆ ಈ ಯೋಜನೆಯಡಿ ಕೆಲಸ ಮಾಡುತ್ತಿರುವ ರಾಜ್ಯದ 5,400ಕ್ಕೂ ಹೆಚ್ಚು ಅಧಿಕಾರಿಗಳು, ಸಿಬ್ಬಂದಿ ನಾಲ್ಕು ತಿಂಗಳಿಂದ ವೇತನವಿಲ್ಲದೆ ಪರದಾಡುತ್ತಿದ್ದಾರೆ.
ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧಿಕಾರಿಗಳ ನಡುವೆ ಹೊಂದಾಣಿಕೆ ಕೊರತೆ, ನಿಗದಿತ ಸಮಯದಲ್ಲಿ ಸರಿಯಾಗಿ ಪತ್ರ ವ್ಯವಹಾರ ನಡೆಯದ್ದರಿಂದ ಈ ಸಮಸ್ಯೆಯು ನಿರಂತರವಾಗಿದೆ ಎಂದು ಸಿಬ್ಬಂದಿ ಅಳಲು ತೋಡಿಕೊಂಡಿದ್ದಾರೆ. ಕಳೆದ ಒಂದು ವರ್ಷದಿಂದ ಪ್ರಯಾಣ ಭತ್ಯೆ ಕೂಡಾ ಪಾವತಿಯಾಗದ ಕಾರಣ ಸಿಬ್ಬಂದಿಯು ನಿತ್ಯ ಕಚೇರಿ ಮತ್ತು ಕ್ಷೇತ್ರ ಭೇಟಿ ಮಾಡಲೂ ಸಮಸ್ಯೆ ಎದುರಿಸುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿಯಲ್ಲಿ ಉದ್ಯೋಗ ಖಾತರಿ ಯೋಜನೆಯು ಮಹತ್ತರ ಪಾತ್ರ ವಹಿಸಿದೆ. ಕೂಲಿಕಾರರಿಗೆ ನರೇಗಾ ಕೆಲಸ ಕೊಡಿಸುವುದು, ಯೋಜನೆಯಡಿ ಶಾಲಾ ಅಭಿವೃದ್ಧಿ ಕಾಮಗಾರಿಗಳು ಹಾಗೂ ಹಳ್ಳಿಗಳಲ್ಲಿ ಆಸ್ತಿ ಸೃಜನೆಗಳಲ್ಲಿ ನರೇಗಾ ನೌಕರರು ಪ್ರಮುಖ ಪಾತ್ರ ನಿರ್ವಹಿಸಿದರೂ ಅವರ ಬೇಡಿಕೆಗಳು ಈಡೇರುತ್ತಿಲ್ಲ.
ಯೋಜನೆಯಡಿ ರಾಜ್ಯದಲ್ಲಿ 28 ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕರು, ಐಇಸಿ ಸಂಯೋಜಕರು, 27 ಡಿಎಂಐಎಸ್, 27 ಜಿಲ್ಲಾ ಲೆಕ್ಕದ ವ್ಯವಸ್ಥಾಪಕರು, ಡಿಇಒ, ತಾಲ್ಲೂಕು ಹಂತದಲ್ಲಿ 209 ತಾಂತ್ರಿಕ ಸಂಯೋಜಕರು, 152 ಆಡಳಿತ ಸಹಾಯಕರು, ಸಿವಿಲ್, ತೋಟಗಾರಿಕೆ, ರೇಷ್ಮೆ, ಅರಣ್ಯ ಹಾಗೂ ಕೃಷಿ ಹೀಗೆ ವಿವಿಧೆಡೆ 1,799 ತಾಂತ್ರಿಕ ಸಹಾಯಕರು ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಯೋಜನೆಯಡಿ ಗೌರವಧನದ ಆಧಾರದ 2,400 ಗ್ರಾಮ ಕಾಯಕ ಮಿತ್ರರಿಗೂ ಗೌರವಧನ ಪಾವತಿಯಾಗಿಲ್ಲ.
ಇದೇ ಕಾಯಕ ನಂಬಿಕೊಂಡಿರುವ ಸಿಬ್ಬಂದಿಗೆ ಕುಟುಂಬ ನಿರ್ವಹಣೆ, ಮಕ್ಕಳ ವಿದ್ಯಾಭ್ಯಾಸ, ಆಸ್ಪತ್ರೆ ಖರ್ಚು ವೆಚ್ಚಗಳು, ಇಎಂಐ ಪಾವತಿಗೆ ತೊಡಕು ಅಲ್ಲದೆ, ನಿತ್ಯ ಕಚೇರಿಗೆ ಹೋಗಿ ಬರಲು ಪರದಾಡುವಂತಾಗಿದೆ.
‘ನಾಲ್ಕು ತಿಂಗಳಿಂದ ವೇತನ, ಒಂದು ವರ್ಷದಿಂದ ಪ್ರವಾಸ ಭತ್ಯೆ ಕೊಟ್ಟಿಲ್ಲ. ಕೆಲಸದ ಒತ್ತಡವೂ ಹೆಚ್ಚಿದೆ. ಸಾಲ ಮಾಡಿ ಜೀವನ ನಡೆಸುತ್ತಿದ್ದೇವೆ’ ಎಂಬುದು ಹೆಸರು ಹೇಳಬಯಸದ ಸಿಬ್ಬಂದಿಯೊಬ್ಬರ ಅಳಲು.
‘ನರೇಗಾ ಬದಲಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿ–ಜಿ ರಾಮ್ ಜಿ ಕಾಯ್ದೆಯ ಬಗ್ಗೆ ಚರ್ಚಿಸಲು ಬುಧವಾರ ಸಂಪುಟದ ವಿಶೇಷ ತುರ್ತುಸಭೆ ನಡೆಯಲಿದ್ದು, ಸಿಬ್ಬಂದಿಗೆ ವೇತನ ಪಾವತಿ ಆಗದಿರುವ ಕುರಿತು ಅಲ್ಲಿ ಚರ್ಚಿಸಿ, ಸಿಬ್ಬಂದಿಯ ಭವಿಷ್ಯ ಕುರಿತೂ ಸರ್ಕಾರ ಸ್ಪಷ್ಟಪಡಿಸಲಿ’ ಎಂದೂ ಕೋರಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.