ADVERTISEMENT

LS polls | ಸಿದ್ದರಾಮಯ್ಯ ಹೇಳಿದರೂ ಗಂಗಾವತಿಯಲ್ಲಿ ಮುಗಿಯದ ಬಣ ರಾಜಕಾರಣ

​ಪ್ರಜಾವಾಣಿ ವಾರ್ತೆ
Published 3 ಮೇ 2024, 16:10 IST
Last Updated 3 ಮೇ 2024, 16:10 IST
<div class="paragraphs"><p>ಇಕ್ಬಾಲ್ ಅನ್ಸಾರಿ </p></div>

ಇಕ್ಬಾಲ್ ಅನ್ಸಾರಿ

   

ಗಂಗಾವತಿ (ಕೊಪ್ಪಳ ಜಿಲ್ಲೆ): ‘ಬಿಜೆಪಿ ಬೆಂಬಲಿತ ಕಾಂಗ್ರೆಸ್ ಪಕ್ಷದ ಮುಖವಾಡ ಧರಿಸಿದ ಗಂಗಾವತಿಯ ಕೆಲ ಕಾಂಗ್ರೆಸ್ಸಿಗರು, ವಿಧಾನಸಭಾ ಕ್ಷೇತ್ರದ ಇರಕಲ್ಲಗಡ, ಲೇಬಗಿರಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯಲ್ಲಿ ಚುನಾವಣೆ ಪ್ರಚಾರ ಕಾರ್ಯಕ್ರಮ ನಡೆಸಿದರೆ ಪಕ್ಷದ ಯಾವ ಕಾರ್ಯಕರ್ತರೂ ಅಲ್ಲಿಗೆ ಹೋಗಬಾರದು’ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.

ಶುಕ್ರವಾರ ಸಾಮಾಜಿಕ ಜಾಲತಾಣದ ಮೂಲಕ ಪಕ್ಷದ ಕಾರ್ಯಕರ್ತರಿಗೆ ಧ್ವನಿ ಸುರುಳಿ ಸಂದೇಶ ನೀಡಿರುವ ಅವರು ಯಾರ ಹೆಸರನ್ನೂ ಉಲ್ಲೇಖಿಸದೆ ವಿಧಾನಪರಿಷತ್‌ ಮಾಜಿ ಸದಸ್ಯ ಎಚ್.ಆರ್. ಶ್ರೀನಾಥ, ಮಾಜಿ ಸಚಿವ ಮಲ್ಲಿಕಾರ್ಜುನ ನಾಗಪ್ಪ, ಮುಖಂಡರಾದ ಶಾಮೀದ್ ಮನಿಯಾರ್, ಹನುಮಂತಪ್ಪ ಅರಿಸಿನಕೇರಿ ವಿರುದ್ಧ ಹರಿಹಾಯ್ದಿದ್ದಾರೆ.

ADVERTISEMENT

ಈಚೆಗೆ ಗಂಗಾವತಿಯಲ್ಲಿ ನಡೆದಿದ್ದ ಪ್ರಚಾರ ಸಭೆಯಲ್ಲಿಯೂ ಅನ್ಸಾರಿ ಮತ್ತು ಶ್ರೀನಾಥ್‌ ಬಣಗಳ ರಾಜಕಾರಣ ಮುಖ್ಯಮಂತ್ರಿ ಸಮ್ಮುಖದಲ್ಲಿಯೇ ಸ್ಫೋಟಗೊಂಡಿತ್ತು. ಆಗ ಸಿದ್ದರಾಮಯ್ಯ ಅವರು ಭಿನ್ನಾಭಿಪ್ರಾಯ ಮರೆತು ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದ್ದರು. ಅನ್ಸಾರಿ ಮತ್ತು ಶ್ರೀನಾಥ್‌ ಇಬ್ಬರ ಮನೆಗೂ ಸಿ.ಎಂ. ಹೋಗಿ ಇದೇ ಮಾತು ಹೇಳಿ ಬಂದಿದ್ದರು. ಆದರೂ ಬಣ ರಾಜಕಾರಣದ ರಂಪಾಟ ನಿಂತಿಲ್ಲ.

ಧ್ವನಿ ಸುರುಳಿಯಲ್ಲಿ ಏನಿದೆ?: ‘ಗಂಗಾವತಿಯಲ್ಲಿ ಕೆಲವರು ಕಾಂಗ್ರೆಸ್ಸಿಗರೆಂದು ಬಿಂಬಿಸಿಕೊಳ್ಳುತ್ತಿದ್ದು ಅವರು ನಿಜವಾದ ಕಾಂಗ್ರೆಸ್ ಪಕ್ಷದವರು ಅಲ್ಲ, ಶಾಶ್ವತ ಬಿಜೆಪಿಗರು. ಇರಕಲ್ಲಗಡ ಹಾಗೂ ಲೇಬಗೇರಿ ಜಿ.ಪಂ ವ್ಯಾಪ್ತಿಯ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಡಿ. ನೇರವಾಗಿ ನನ್ನ ಕಚೇರಿಗೆ ಕರೆ ಮಾಡಿ. ಪಕ್ಷದ ಮುಖವಾಡ ಧರಿಸುವವರ ಮಾತಿಗೆ ಮಣೆ ಹಾಕಬೇಡಿ’ ಎಂದಿದ್ದಾರೆ.

ಈ ಬೆಳವಣಿಗೆ ಕುರಿತು ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಪ್ರತಿಕ್ರಿಯಿಸಿ ‘ಪಕ್ಷದ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ನಾಯಕರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ. ಅಭ್ಯರ್ಥಿ ಗೆಲುವಿಗೆ ಶ್ರಮಿಸುವಂ‌ತೆ ಟಾಸ್ಕ್ ನೀಡಲಾಗಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.