ಕೊಪ್ಪಳದ ಆಸ್ಪತ್ರೆಗೆ ಭೇಟಿ ನೀಡಿದ ಬಿಜೆಪಿ ನಿಯೋಗ ವೈದ್ಯರೊಂದಿಗೆ ಚರ್ಚಿಸಿತು
ಕೊಪ್ಪಳ: ಇಲ್ಲಿನ ತಾಯಿ ಹಾಗೂ ಮಗುವಿನ ಆಸ್ಪತ್ರೆಯಲ್ಲಿ ಒಂದೇ ವಾರದಲ್ಲಿ ಇಬ್ಬರು ಬಾಣಂತಿಯರು ಮೃತಪಟ್ಟ ಹಿನ್ನೆಲೆಯಲ್ಲಿ ಬಿಜೆಪಿಯ ಸತ್ಯ ಶೋಧನಾ ತಂಡ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿತು.
ಬೀದರ್ ದಕ್ಷಿಣ ಶಾಸಕ ಶೈಲೇಂದ್ರ ಬೆಲ್ದಾಳೆ ಮುಂದಾಳತ್ವದ ತಂಡ, ಕುಕನೂರು ತಾಲ್ಲೂಕಿನ ಆಡೂರು ಗ್ರಾಮದಲ್ಲಿ ಮೃತ ರೇಣುಕಾ ಮನೆಗೆ ಭೇಟಿ ನೀಡಿ ಮಾಹಿತಿ ಪಡೆಯಿತು. ಇದಾದ ಬಳಿಕ ಇಲ್ಲಿನ ಆಸ್ಪತ್ರೆಗೆ ಭೇಟಿ ನೀಡಿದಾಗ ಪ್ರಸೂತಿ ಮತ್ತು ಸ್ತ್ರೀರೋಗ ವಿಭಾಗದ ಮುಖ್ಯಸ್ಥ ಡಾ.ಬಿ.ಎಚ್. ನಾರಾಯಣಿ ಅವರು ತಂಡಕ್ಕೆ ಘಟನೆಗಳ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ಶೈಲೇಂದ್ರ ಬೆಲ್ದಾಳೆ ’ಬಾಣಂತಿಯರ ಸಾವಿನ ಪ್ರಕರಣದಲ್ಲಿ ವೈದ್ಯಕೀಯವಾಗಿ ಮಾಡಬೇಕಾದ ನಿಯಮಾವಳಿಗಳನ್ನು ವೈದ್ಯರು ಮಾಡಿಲ್ಲ. ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಲು ಕಾಲಹರಣ ಮಾಡಿದ್ದಾರೆ. ಉತ್ತಮ ಚಿಕಿತ್ಸೆ ನೀಡಿದ್ದರೆ ಬಾಣಂತಿಯರ ಜೀವ ಉಳಿಸಿಕೊಳ್ಳಬಹುದಿತ್ತು. ಇಷ್ಟೆಲ್ಲ ನಡೆದರೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೃತ ಮಹಿಳೆಯ ಕುಟುಂಬದವರಿಗೆ ಸಾಂತ್ವನ ಹೇಳಿಲ್ಲ’ ಎಂದರು.
‘ಬಾಣಂತಿಯರ ಸಾವಿಗೆ ಆರೋಗ್ಯ ಸಚಿವರೇ ನೇರ ಹೊಣೆ. ಔಷಧಿ ಖರೀದಿಯಲ್ಲಿ ಶೇ. 30ರಿಂದ ಶೇ. 40ರಷ್ಟು ಲಂಚಾವತಾರ ನಡೆಯುತ್ತಿದೆ. ಅದಕ್ಕೆ ಈ ರೀತಿ ಸಾವು ಆಗುತ್ತಿವೆ. ಆರೋಗ್ಯ ಸಚಿವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸತ್ಯಶೋಧನಾ ಸಮಿತಿಯ ವರದಿಯನ್ನು ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ರಾಜ್ಯಪಾಲರಿಗೆ ಕೊಡುತ್ತೇವೆ’ ಎಂದು ತಿಳಿಸಿದರು.
ವಿಧಾನಸಭೆ ವಿರೋಧ ಪಕ್ಷದ ಮುಖ್ಯ ಸಚೇತಕ ದೊಡ್ಡನಗೌಡ ಪಾಟೀಲ, ಮಾಜಿ ಸಚಿವ ಹಾಲಪ್ಪ ಆಚಾರ್, ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮುಖಂಡ ಡಾ. ಬಸವರಾಜ್ ಕ್ಯಾವಟರ್, ಮಾಜಿ ಶಾಸಕ ಪರಣ್ಣ ಮುನವಳ್ಳಿ, ಮಹಿಳಾ ಮೋರ್ಚಾದ ರಾಜ್ಯಾಧ್ಯಕ್ಷೆ ಮಂಜುಳಾ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ್, ಜಿಲ್ಲಾ ಉಪಾಧ್ಯಕ್ಷೆ ಡಾ. ಅರುಣಾ, ಮಹಿಳಾ ಮೋರ್ಚಾ ರಾಜ್ಯ ಖಜಾಂಚಿ ವಿಜಯಲಕ್ಷ್ಮೀ ಕರೂರು, ವೈದ್ಯಕೀಯ ಪ್ರಕೋಷ್ಠದ ಡಾ. ಲಕ್ಷ್ಮಣ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.