ADVERTISEMENT

ನವಜಾತು ಶಿಶುವಿಗೆ ತುರ್ತು ಚಿಕಿತ್ಸೆ: ಒಂದೇ ತಾಸಿನಲ್ಲಿ ಹುಬ್ಬಳ್ಳಿಗೆ ರವಾನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2025, 12:43 IST
Last Updated 28 ಡಿಸೆಂಬರ್ 2025, 12:43 IST
   

ಕೊಪ್ಪಳ: ಹುಟ್ಟಿದ ಕ್ಷಣದಿಂದ ಸಾವು–ಬದುಕಿನ ನಡುವೆ ಹೋರಾಟ ಮಾಡುತ್ತಿರುವ ನವಜಾತು ಗಂಡು ಶಿಶುವನ್ನು ತುರ್ತು ಆರೋಗ್ಯ ಚಿಕಿತ್ಸೆಗಾಗಿ ಭಾನುವಾರ ಬೆಳಿಗ್ಗೆ ಕೊಪ್ಪಳದ ತಾಯಿ ಮತ್ತು ಮಗುವಿನ ಆಸ್ಪತ್ರೆಯಿಂದ ಹುಬ್ಬಳ್ಳಿಯ ಕರ್ನಾಟಕ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ಆಸ್ಪತ್ರೆಗೆ ’ಝೀರೊ ಟ್ರಾಫಿಕ್‌’ನಲ್ಲಿ ಆಂಬುಲೆನ್ಸ್‌ನಲ್ಲಿ ಕರೆದೊಯ್ಯಲಾಯಿತು.

ಜಿಲ್ಲೆಯ ಕುಕನೂರು ತಾಲ್ಲೂಕಿನ ಬೂದಗುಂಪಾ ಗ್ರಾಮದ ವಿಜಯಲಕ್ಷ್ಮೀ ಎಂಬ ಗರ್ಭಿಣಿಗೆ ಶನಿವಾರ ಮಧ್ಯರಾತ್ರಿ ಸಹಜ ಹೆರಿಗೆಯಾಗಿದ್ದು, ನವಜಾತ ಶಿಶುವಿಗೆ ಹೊಟ್ಟೆ ಮೇಲಿನ ಚರ್ಮ ಸರಿಯಾಗಿ ಬೆಳೆಯದ ಕಾರಣ ಶಿಶುವಿನ ಕರಳು, ಕಿಡ್ನಿ  ಹೊರಗಡೆ ಬಂದಿದ್ದವು. ಹೆರಿಗೆಯಾದ ಕೆಲ ಹೊತ್ತಿನಲ್ಲಿಯೇ ಕುಕನೂರಿನಿಂದ ತಾಯಿ ಹಾಗೂ ಮಗುವಿನ ಆಸ್ಪತ್ರೆಗೆ ಕರೆದುಕೊಂಡು ಬರಲಾಗಿದ್ದು, ಇಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ.

ಭಾನುವಾರ ಬೆಳಿಗ್ಗೆ 10.10ಕ್ಕೆ ಕೊಪ್ಪಳದ ಆಸ್ಪತ್ರೆಯಿಂದ ಹೊರಟ ಆಂಬುಲೆನ್ಸ್‌ 120 ಕಿ.ಮೀ. ದೂರದ ಹುಬ್ಬಳ್ಳಿಯ ಆಸ್ಪತ್ರೆಯನ್ನು ಸರಿಯಾಗಿ 60 ನಿಮಿಷಗಳಲ್ಲಿ ತಲುಪಿದೆ. ಮಗುವನ್ನು ಸಾಗಿಸಿದ ಸರ್ಕಾರಿ ಆಸ್ಪತ್ರೆಯ ಆಂಬುಲೆನ್ಸ್‌ ಜೊತೆ ಖಾಸಗಿಯ ಮೂರು ಅಂಬುಲೆನ್ಸ್‌ಗಳ ಕೂಡ ’ಝೀರೊ ಟ್ರಾಫಿಕ್’ನಲ್ಲಿ ತೆರಳಲು ನೆರವಾದವು. ಕೊಪ್ಪಳ, ಗದಗ ಹಾಗೂ ಹುಬ್ಬಳ್ಳಿಯ ಸಂಚಾರ ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ದರಿಂದ ಪೊಲೀಸರು ಅಂಬುಲೆನ್ಸ್‌ ಸರಾಗ ಸಂಚಾರಕ್ಕೆ ನೆರವಾದರು. ಕೊಪ್ಪಳ ಹಾಗೂ ಹುಬ್ಬಳ್ಳಿಯಲ್ಲಿ ಅಖಿಲ ಕರ್ನಾಟಕ ಆಂಬುಲೆನ್ಸ್ ರಸ್ತೆ ಸುರಕ್ಷತಾ ಸಂಘಟನೆ ಸದಸ್ಯರು ಕೂಡ ಈ ಮಾನವೀಯ ಕಾರ್ಯಕ್ಕೆ ಕೈ ಜೋಡಿಸಿದರು.

ADVERTISEMENT

‘ವೈದ್ಯಕೀಯ ಸಲಕರಣೆಗಳೊಂದಿಗೆ ಶಿಶುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬರೋಬ್ಬರು ಒಂದು ತಾಸಿನಲ್ಲಿ ಹುಬ್ಬಳ್ಳಿ ತಲುಪಿದೆವು. ಚಾಲಕ ಕೂಡ ಸಮಯ ಪ್ರಜ್ಞೆಯಿಂದ ತೆರಳಿದ್ದರಿಂದ ಸರಿಯಾದ ಸಮಯಕ್ಕೆ ಹೋಗಲು ಸಾಧ್ಯವಾಯಿತು. ಹುಬ್ಬಳ್ಳಿಯಲ್ಲಿ ವೈದ್ಯರು ಚಿಕಿತ್ಸೆ ಆರಂಭಿಸಿದ್ದಾರೆ’ ಎಂದು ಕೊಪ್ಪಳದ ಅಂಬುಲೆನ್ಸ್‌ನ ಸಿಬ್ಬಂದಿ ಮಂಜುನಾಥ ಗಾಡಿ ತಿಳಿಸಿದರು. ಪ್ರಕಾಶ ವಾಹನ ಚಲಾಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.