ADVERTISEMENT

ಪಂಪಾಸರೋವರ: ಮೂಲಸೌಕರ್ಯ ಮರೀಚಿಕೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2025, 6:39 IST
Last Updated 4 ಸೆಪ್ಟೆಂಬರ್ 2025, 6:39 IST
ಪಂಪಾಸರೋವರ ಧರ್ಮಶಾಲಾ ಬಳಿ ಮಳೆ ನೀರು ನಿಂತು ಕೆಸರುಮಯವಾಗಿದೆ
ಪಂಪಾಸರೋವರ ಧರ್ಮಶಾಲಾ ಬಳಿ ಮಳೆ ನೀರು ನಿಂತು ಕೆಸರುಮಯವಾಗಿದೆ   

ಗಂಗಾವತಿ: ಸೀತೆಯ ಹುಡುಕಾಟದ ಭಾಗವಾಗಿ ರಾಮ-ಲಕ್ಷ್ಮಣ ಕಿಷ್ಕಿಂಧೆಯ ಸುಗ್ರೀವನ ಭೇಟಿಗಾಗಿ ಖುಷಿಮುಖ ಪರ್ವತಕ್ಕೆ ತೆರಳುವ ಮಾರ್ಗ ಮಧ್ಯೆ ವಿಶ್ರಾಂತಿಗಾಗಿ ತಂಗಿದ ಪಂಪಾಸರೋವರ ಸ್ಥಳ ಇದೀಗ ಮೂಲಸೌಕರ್ಯ ಕೊರತೆ ಎದುರಿಸುತ್ತಿದ್ದು, ಇಲ್ಲಿಗೆ ಬರುವ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ಪಂಪಾಸರೋವರಕ್ಕೆ ರಾಮಾಯಣ ಮತ್ತು ವಿಜಯನಗ‌ರ ಸಾಮ್ರಾಜ್ಯದ ಇತಿಹಾಸವಿದೆ. ರಾಮ-ಲಕ್ಷ್ಮಣಗಾಗಿ ಶಬರಿ ಕಾದ ಸ್ಥಳ ಎಂಬ ಪ್ರತೀತಿಯೂ ಇದೆ. ಬ್ರಹ್ಮನ ಮಾನಸ ಪುತ್ರಿ ಪಂಪಾದೇವಿ ಇದೇ ಸ್ಥಳದಲ್ಲಿ ನಿತ್ಯ ಸ್ನಾನಮಾಡಿ, ತಪಸ್ಸಿನ ಮೂಲಕ ವಿರೂಪಾಕ್ಷನನ್ನು ಮೆಚ್ಚಿಸಿ, ಆತನನ್ನು ವರಿಸಿದ ಇತಿಹಾಸವು ಉಲ್ಲೇಖವಿದೆ.

ಪಂಪಾಸರೋವರ ಅಭಿವೃದ್ಧಿಗೆ ಮುಂದಾಗಬೇಕಾದ ತಾಲ್ಲೂಕು ಆಡಳಿತ, ಪ್ರವಾಸೋದ್ಯಮ ಇಲಾಖೆ, ಜಿಲ್ಲಾಡಳಿತ, ಧಾರ್ಮಿಕ ದತ್ತಿ ಇಲಾಖೆ ಜಾಣ ಕುರುಡು ತೋರುತ್ತಿದೆ. ಈ ತಾಣ ಮೂಲ ಸ್ವರೂಪ ಕಳೆದುಕೊಂಡು, ಈಗ ಬಿಕೋ ಎನ್ನುತ್ತಿದೆ.

ADVERTISEMENT

ಪಂಪಾಸರೋವರಕ್ಕೆ ರಾಜಸ್ಥಾನ, ಮಹಾರಾಷ್ಟ್ರ, ಮಧ್ಯಪ್ರದೇಶ, ಗುಜರಾತ, ಬಿಹಾರ, ಆಂಧ್ರಪ್ರದೇಶ, ತೆಲಂಗಾಣ ಸೇರಿ ಕರ್ನಾಟಕ ರಾಜ್ಯದ ವಿವಿಧ ಪ್ರದೇಶಗಳಿಂದ ಭಕ್ತರು, ಪ್ರವಾಸಿಗರು ನಿತ್ಯ ಭೇಟಿ ನೀಡಿ ಸ್ಥಳೀಯರಿಂದ ಇತಿಹಾಸ ತಿಳಿಯುತ್ತಾರೆ. ಅವರಿಗೆ ಇಲ್ಲಿ ವಸತಿಗೆ ಯಾವುದೇ ಸೌಲಭ್ಯ ಇಲ್ಲ.

ಬಳಕೆಗೆ ಬಾರದ ಶೌಚಾಲಯಗಳು: ಪಂಪಾಸರೋವರಕ್ಕೆ ಬರುವವರಿಗೆ ಅನುಕೂಲವಾಗಲೆಂದು ಪ್ರವಾಸೋದ್ಯಮ ಇಲಾಖೆ 2018-19ರಲ್ಲಿ ₹ 29.50 ಲಕ್ಷ ವೆಚ್ಚದಲ್ಲಿ ಶೌಚಾಲಯ ನಿರ್ಮಿಸಿದ್ದು, ಇದು ಬಳಕೆಗೆ ಬಾರದೆ ಗಬ್ಬುನಾರುತ್ತಿದೆ. ಹೀಗಾಗಿ  ಅನಿವಾರ್ಯವಾಗಿ ಬಯಲು ಪ್ರದೇಶವನ್ನೇ ಆಶ್ರಯಿಸಬೇಕಾಗಿದೆ. ಇದರಿಂದ ಪುಣ್ಯಸ್ಥಳ ಮಲಿನವಾಗುತ್ತಿದೆ.

ಜಯಲಕ್ಷ್ಮಿದೇವಿ ದೇವಸ್ಥಾನ ಸೋರಿಕೆ:2022ನೇ ಸಾಲಿನಲ್ಲಿ ಅಂದಿನ ಸಚಿವ ಶ್ರೀರಾಮುಲು ರಾಜ್ಯ ಪ್ರಾಚ್ಯ ವಸ್ತು ಇಲಾಖೆಯಿಂದ ಪರವಾನಗಿ ಪಡೆದು ₹2.8 ಕೋಟಿ ಸ್ವಂತ ಹಣ ಬಳಸಿ ಜಯಲಕ್ಷ್ಮಿದೇವಿ ದೇವಸ್ಥಾನ ಜೀರ್ಣೊದ್ಧಾರ ಮಾಡಿಸಿದ್ದರು.ಇದೀಗ‌ ಮಳೆಗೆ ಗರ್ಭಗುಡಿ ಸೇರಿ ದೇವಸ್ಥಾನದ ಎಲ್ಲಡೆ ನೀರು ಸೋರುತ್ತಿದೆ.

ಕುಡಿಯುವ ನೀರಿನ ಅವ್ಯವಸ್ಥೆ: ಪಂಪಾಸರೋವರಕ್ಕೆ ನಿತ್ಯ 500ಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದು, ಇಲ್ಲಿ ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯೇ ಇಲ್ಲ. ಜಯಲಕ್ಷ್ಮಿ ದೇವಸ್ಥಾನದ ಬಳಿ ಅಳವಡಿಸಿದ ನೀರಿನ ಘಟಕ ದುರಸ್ತಿಗೆ ಕಾದಿದೆ. ಕುಡಿಯಲು ಭಕ್ತರು ಅನಿವಾರ್ಯವಾಗಿ ಬಾಟಲ್ ನೀರು ಖರೀದಿಸಬೇಕಾಗುತ್ತಿದೆ. 

ಸ್ವಚ್ಛತೆಗಿಲ್ಲ ಆದ್ಯತೆ: ದೂರದ ರಾಜ್ಯಗಳಿಂದ ಪಂಪಾಸರೋವರಕ್ಕೆ ಬರುವ ಭಕ್ತರಿಗೆ ಇಲ್ಲಿ ಸರಿಯಾದ ವಸತಿ ವ್ಯವಸ್ಥೆಯಿಲ್ಲ. ಈಗಿರುವ ಧರ್ಮಶಾಲೆ ಸಂಪೂರ್ಣ ಆಸ್ವಚ್ಛತೆಯಿಂದ ಕೂಡಿದ್ದು, ನಿದ್ರಿಸಲು, ಕೂಡಲು ಬಳಕೆ ಬಾರದಂತಿದೆ. ಸ್ನಾನಗೃಹಗಳು ಇಲ್ಲದ್ದರಿಂದ ನೀರಿನ ಟ್ಯಾಂಕಿನ ಕೆಳಗೆ ಕುಳಿತು ಸ್ನಾನ ಮಾಡಬೇಕಾಗುತ್ತಿದೆ.

ಸರೋವರ ಸ್ನಾನಕ್ಕೆ ಹಿಂದೇಟು: ಪಂಪಾಸರೋವರಕ್ಕೆ ಬರುವ ಭಕ್ತರು ಪುಷ್ಕರಣಿಯಲ್ಲಿ (ಸರೋವರ) ಪವಿತ್ರ ಸ್ನಾನ ಮಾಡುವ ವಾಡಿಕೆಯಿದೆ. ಆದರೆ ಸರೋವರದಲ್ಲಿ ದೊಡ್ಡ ಮೊಸಳೆಯೊಂದು ವಾಸವಿದ್ದು, ಜೀವ ಭಯದಿಂದ ಭಕ್ತರು ಸ್ನಾನ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮೊಸಳೆ ಹಿಡಿಯು ಅರಣ್ಯ ಇಲಾಖೆಗೆ ಹಲವು ಬಾರಿ ಪತ್ರ ಬರೆದರೂ, ಕ್ರಮವಾಗಿಲ್ಲ.

ಕಳ್ಳವು ಪ್ರಕರಣಗಳಿಲ್ಲ ಕಡಿವಾಣ: ಜಯಲಕ್ಷ್ಮಿ ದೇವಸ್ಥಾನದಲ್ಲಿ ಮೇ 20ರಂದು ದೇವಿಯ ಬೆಳ್ಳಿಯ ಪ್ರಭಾವಳಿ, ಪಾದುಕಗೆಳ ಕಳ್ಳತನ ಮಾಡಲಾಗಿದೆ.ಆಗೊಮ್ಮೆ,ಈಗೊಮ್ಮೆ ಕಳ್ಳತನ ಪ್ರಕರಣಗಳು ನಡೆದರೂ ಕ್ರಮವಾಗುತ್ತಿಲ್ಲ. ದೇವಸ್ಥಾನದ ಬಳಿ ಈ ಹಿಂದೆ ಹೋಮ್‌ ಗಾರ್ಡ್ ಕೆಲಸ ಮಾಡುತ್ತಿದ್ದರೂ, ಈಗ ಬರುತ್ತಿಲ್ಲ ಎನ್ನುತ್ತಾರೆ ಹನುಮನಹಳ್ಳಿ ನಿವಾಸಿ ಪುನೀತ್ ಕುಮಾರ.

ಪಂಪಾಸರೋವರದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಹಾಳಾಗಿದೆ
ಪಂಪಾಸರೋವರದಲ್ಲಿ ಸ್ನಾನ ಮಾಡಲು ಸ್ನಾನಗೃಹಗ ಸಿಕ್ಕದೆ ವೃದ್ಧರೊಬ್ಬರು ನೀರಿನ ಟ್ಯಾಂಕ್ ಬಳಿ ಸ್ನಾನ ಮಾಡುತ್ತಿರುವುದು
ಪಂಪಾಸರೋವರದ ಪುಷ್ಕರಣಿಯಲ್ಲಿ ಮೊಸಳೆ ಇರುವುದು
ಪಂಪಾಸರೋವರದಲ್ಲಿ ಕುಡಿಯುವ ನೀರು ಶೌಚಾಲಯ ಸೇರಿ ಸೌಕರ್ಯಗಳು ಇಲ್ಲದಿರುವುದು ನಾಚಿಕೆಯ ಸಂಗತಿ
ಗೌಸ್ ಪಾಷ ಆಟೊ ಚಾಲಕ ಆನೆಗೊಂದಿ
ರಾಮ-ಲಕ್ಷ್ಮಣರಿಗೆ ಶಬರಿ ಇಲ್ಲಿ ಬಾರಿ ಹಣ್ಣು ನೀಡಿದ್ದಾಳೆ ಎಂಬ ಇತಿಹಾಸವಿದೆ. ಇಲ್ಲಿನ ಆಸ್ವಚ್ಛತೆಯಿಂದ ಪವಿತ್ರತೆಯೇ ಕಳೆದು ಹೋಗುತ್ತಿದೆ
ರಾಮನಾಯ್ಡು ಮಹಾರಾಷ್ಟ್ರ ಪ್ರವಾಸಿ

ಫೋನ್ ಕರೆ ಸ್ವೀಕರಿಸಿದ ಇಒ

ಪಂಪಾಸರೋವರದಲ್ಲಿನ ಅವ್ಯವಸ್ಥೆ ಮೂಲ ಸೌಕರ್ಯ ಸಮಸ್ಯೆಗಳ ಬಗ್ಗೆ ಜಯಲಕ್ಷ್ಮಿ ದೇವಸ್ಥಾನದ ಕಾರ್ಯ ನಿರ್ವಾಹಕ ಅಧಿಕಾರಿ ಪ್ರಕಾಶರಾವ್ ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಪ್ರತಿನಿಧಿ ಹಲವು ಬಾರಿ ಫೋನ್ ಕರೆ ಮಾಡಿದರೂ ಸ್ವೀಕರಿಸಲಿಲ್ಲ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.