ಕುಷ್ಟಗಿ: ಪ್ರವಾದಿ ಮುಹಮ್ಮದ್ ಪೈಗಂಬರ್, ಸೂಫಿ ಸಂತರು, ದಾರ್ಶನಿಕರು, ದಾಸ ಶ್ರೇಷ್ಠರು ಈ ನಾಡಿಗೆ ನೀಡಿದ ಸಂದೇಶಗಳನ್ನು ಅಳವಡಿಸಿಕೊಂಡಿರುವ ಇಲ್ಲಿಯ ಜನರ ಭಾವೈಕ್ಯದ ಮತ್ತು ಭ್ರಾತೃತ್ವದ ಬದುಕು ಇತರೆ ಪ್ರದೇಶಗಳಿಗೆ ಮಾದರಿಯಾಗಿದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ ಹೇಳಿದರು.
ಶುಕ್ರವಾರ ಇಲ್ಲಿ ಪಟ್ಟಣದ ತೆಗ್ಗಿನ ಓಣಿಯ ಹೈದರ ಅಲಿ ಸಮಿತಿ ಹಾಗೂ ಕೊಪ್ಪಳದ ಸಂಜೀವಿನಿ ರಕ್ತ ನಿಧಿ ಕೇಂದ್ರದ ವತಿಯಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನ ನಿಮಿತ್ತ ಏರ್ಪಡಿಸಿದ್ದ 5ನೇ ವರ್ಷದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
‘ಇತರೆ ಪ್ರದೇಶಗಳಿಗೆ ಹೋಲಿಸಿದರೆ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಹಿಂದೂ, ಮುಸ್ಲಿಂ, ಇತರೆ ಎಲ್ಲ ಸಮುದಾಯಗಳು ಸೌಹಾರ್ದತೆಯ ಬೆಳಕಿನ ದಾರಿಯಲ್ಲಿ ನಡೆಯುತ್ತಿರುವುದು ಇಲ್ಲಿಯ ಜನರ ಸೌಭಾಗ್ಯ. ಅದು ಮುಂದುವರಿಯಬೇಕು. ಈ ಕಾರಣದಿಂದಲೇ ಬೇರೆ ಕಡೆ ಏನೇ ಅಶಾಂತಿ ವಾತಾವರಣ ಉಂಟಾದರೂ ಇಲ್ಲಿ ಮಾತ್ರ ಶಾಂತಿ ಕದಡಿಲ್ಲ ಎಂಬುದನ್ನು ಹಿಂದಿನ ಇತಿಹಾಸದ ಪುಟಗಳನ್ನು ತಿರುವಿದಾಗ ತಿಳಿಯುತ್ತದೆ. ಮುಂದೆಯೂ ಸಹ ಯುವಕರು ಸೇರಿದಂತೆ ಭವಿಷ್ಯದ ಪೀಳಿಗೆಯವರು ಸರಿ ದಾರಿಯಲ್ಲಿ ನಡೆಯುವಂತಾಗಲು ಎಲ್ಲ ಸಮುದಾಯಗಳ ಹಿರಿಯರು ಸೂಕ್ತ ಮಾರ್ಗದರ್ಶನ ನೀಡಬೇಕು’ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ‘ಕಲ್ಯಾಣದ ಬಸವಣ್ಣನವರ ಮತ್ತು ಮುಹಮ್ಮದ್ ಪೈಗಂಬರ್ ಅವರ ತತ್ವ ಮತ್ತು ಸಂದೇಶಗಳು ಒಂದೇ ಆಗಿದ್ದು ಮಾನವೀಯ ನೆಲೆಗಟ್ಟಿನಲ್ಲಿ ಸಾಮಾಜಿಕ ಸಾಮರಸ್ಯದಿಂದ ಬದುಕಲು ನೆರವಾಗುತ್ತವೆ. ಹೈದರಲಿ ಸಮಿತಿಯ ಯುವಕರು ರಕ್ತದಾನ ಶಿಬಿರ ನಡೆಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ಅಲ್ಲದೆ ಡಿಜೆ ಸದ್ದುಗದ್ದಲವಿಲ್ಲದೆ ಈದ್ ಮಿಲಾದ್ ಸಂದರ್ಭದಲ್ಲಿ ಶಾಂತಿಯಿಂದ ನಡೆಸಿದ ಮೆರವಣಿಗೆ ಇತರೆ ಸಮುದಾಯಗಳಿಗೆ ಮಾದರಿಯಾಗಬೇಕು’ ಎಂದರು.
ಸಾನ್ನಿಧ್ಯ ವಹಿಸಿದ್ದ ಮದ್ದಾನಿ ಹಿರೇಮಠದ ಕರಿಬಸವ ಸ್ವಾಮೀಜಿ, ‘ಪಟ್ಟಣದಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳ ಯುವಕರು, ಜನರು ಎಲ್ಲ ಹಬ್ಬ ಹರಿದಿನಗಳಲ್ಲಿ ಪರಸ್ಪರ ಭಾಗವಹಿಸಿ ಆಚರಿಸುವ ಮೂಲಕ ಒಗ್ಗಟ್ಟು ಹಾಗೂ ಸೌಹಾರ್ದತೆಯ ಸಂದೇಶ ಬಿತ್ತರಿಸುತ್ತಿದ್ದಾರೆ. ಧಾರ್ಮಿಕ ಆಚರಣೆಗಳು ಏನೇ ಇದ್ದರೂ ಅವು ಸಮಾಜದ ಒಳಿತನ್ನು ಬಯಸುವಂತಿರಬೇಕು. ಮಾನವೀಯ ಮೌಲ್ಯ ಹೆಚ್ಚಿದರೆ ನಾಗರಿಕ ಸಮಾಜ ನೆಮ್ಮದಿಯಿಂದ ಬದುಕಲು ಸಾಧ್ಯವಾಗುತ್ತದೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ತುಂಗಭದ್ರಾ ಕಾಡಾ ಅಧ್ಯಕ್ಷ ಹಸನಸಾಬ್ ದೋಟಿಹಾಳ, ರೈತ ಮುಖಂಡ ನಜೀರಸಾಬ್ ಮೂಲಿಮನಿ, ಆರ್.ಟಿ.ಸುಬಾನಿ ಮಾತನಾಡಿದರು. ಶಿಕ್ಷಕ ಜೀವನಸಾಬ್ ವಾಲೀಕಾರ ಪ್ರವಾದಿ ಮುಹಮ್ಮದ್ ಅವರ ಬದುಕು ಹಾಗೂ ಜೀವನ ಸಂದೇಶ ಕುರಿತು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಕಳೆದ ಐದು ದಶಕಗಳಿಂದಲೂ ಸಮಾಜದ ಯಾರೇ ಮೃತಪಟ್ಟರೂ ಗುಂಡಿ ತೆಗೆದು ದಫನ್ ಕೆಲಸದ ಸೇವೆಯಲ್ಲಿ ನಿರತರಾಗಿರುವ ಮುಸ್ಲಿಂ ಸಮಾಜದ ಹತ್ತು ಜನರನ್ನು ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ಪುರಸಭೆ ಅಧ್ಯಕ್ಷ ಮಹಾಂತೇಶ ಕಲಭಾವಿ, ಖಾಜಾ ಮೈನುದ್ದೀನ್ ಮುಲ್ಲಾ, ಮೆಹಬೂಬಸಾಬ್ ಕಮ್ಮಾರ, ಜಿ.ಕೆ.ಹಿರೇಮಠ, ಬಸವರಾಜ ನಾಯಕ, ಉಮೇಶ ಮಂಗಳೂರು, ಅಹ್ಮದ್ ಹುಸೇನ್ ಆದೋನಿ, ಎಚ್.ಆರ್.ಶೇಖ್ ಇದ್ದರು. ಬಸವರಾಜ ಗಾಣಿಗೇರ ಸ್ವಾಗತಿಸಿದರು.
ಯಾವುದೇ ಸಮುದಾಯಗಳ ಧಾರ್ಮಿಕ ಆಚರಣೆಗಳು ಏನೇ ಇದ್ದರೂ ಅವು ಸಮಾಜದ ಒಳಿತನ್ನು ಬಯಸುವಂತಿರಬೇಕು.ಕರಿಬಸವ ಸ್ವಾಮೀಜಿ ಮದ್ದಾನಿ ಹಿರೇಮಠ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.