
ಗಂಗಾವತಿ: ‘ನದಿಗಳು ದೇಶದ ಜೀವನಾಡಿಗಳು. ಜೀವಸಂಕುಲಗಳ ಬದುಕಿಗೆ ನದಿಗಳೇ ಜೀವಸೆಲೆ. ನದಿಗಳು ಪ್ಲಾಸ್ಟಿಕ್ ತ್ಯಾಜ್ಯ, ಚರಂಡಿ, ಕೈಗಾರಿಕೆಗಳು ಬಿಡುವ ಕೊಳಚೆ ನೀರಿನಿಂದ ಕಲುಷಿತವಾಗುತ್ತಿರುವುದು ನೋವಿನ ಸಂಗತಿ. ನದಿಗಳ ರಕ್ಷಣೆಯಿಂದ ಮಾತ್ರ ಪ್ರಕೃತಿ ರಕ್ಷಣೆ ಸಾಧ್ಯ’ ಎಂದು ನೇತಾಜಿ ಸುಭಾಷ್ ಚಂದ್ರಬೋಸ್ ಅವರ ಮೊಮ್ಮಗಳು ರಾಜಶ್ರೀ ಚೌದರಿ ಹೇಳಿದರು.
ನಗರದ ಹಿರೇಜಂತಕಲ್ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ನವದೆಹಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ರಾಜ್ಯ ನಿರ್ಮಲ ತುಂಗಾಭದ್ರ ಅಭಿಯಾನ ಸಮಿತಿ, ಶಿವಮೊಗ್ಗ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ನಡೆದ 3ನೇ ಹಂತದ ನಿರ್ಮಲ ತುಂಗಾಭದ್ರ ಜಲ ಜಾಗೃತಿ-ಜನ ಜಾಗೃತಿ ಪಾದಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
‘ಜಗತ್ತಿನ ನಾಗರಿಕತೆ, ಸಾಮ್ರಾಜ್ಯಗಳ ನಿರ್ಮಾಣ ಆಗಿದ್ದು ನದಿಯ ತಟಗಳಲ್ಲಿ. ಕೃಷ್ಣದೇವರಾಯ ತನ್ನ ಸಾಮ್ರಾಜ್ಯ ನಿರ್ಮಿಸಿದ್ದು ತುಂಗಾಭದ್ರ ನದಿ ತಟದಲ್ಲಿಯೇ. ನದಿಯಿಲ್ಲದೆ ಯಾವ ದೇಶ, ಸಮಾಜ, ಜಗತ್ತು ಇಲ್ಲ. ಎಲ್ಲರೂ ಗೌರವಿಸುವ ಧರ್ಮ ಗ್ರಂಥಗಳಲ್ಲಿ ಸಹ ನದಿಗಳ ಉಲ್ಲೇಖವಿದೆ. ನದಿಗಳನ್ನು ಕಲುಷಿತ, ಮಲಿನ ಮಾಡುವುದು ಪಾಪದ ಕೆಲಸ. ಸಾಧ್ಯವಾದರೆ ನದಿಗಳ ರಕ್ಷಣೆಗೆ ಕೈಜೋಡಿಸಿರಿ, ಕಲುಷಿತ ಮಾಡದಿರಿ’ ಎಂದರು.
‘ಹನುಮನ ಪುಣ್ಯಕ್ಷೇತ್ರದಂತ ಸ್ಥಳ, ದೇಶದಲ್ಲಿ ಮತ್ತೊಂದು ಸಿಗಲ್ಲ. ಈ ಭಾಗದಲ್ಲಿನ ದೇವಸ್ಥಾನಗಳಲ್ಲಿ ದೊರೆಯುವ ಶಾಂತಿ, ನೆಮ್ಮದಿ ಎಲ್ಲಿಯೂ ಸಿಗಲ್ಲ. ನೈಸರ್ಗಿಕವಾಗಿರುವ ಇಂತಹ ದೇವಾಲಯಗಳನ್ನು ನಿರ್ಮಿಸಲು ಸಾಧ್ಯವೇ ಇಲ್ಲ. ಪರಿಸರ, ನದಿಗಳನ್ನು ಹಾಳು ಮಾಡಿದರೇ, ಅವುಗಳನ್ನು ಸರಿ ಪಡಿಸಲು ವರ್ಷಗಳೇ ಉರುಳಲಿವೆ. ನದಿಗಳ ಮತ್ತು ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ’ ಎಂದರು.
ನವದೆಹಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ಮಾತನಾಡಿ, ‘ನದಿಗಳು ತುಂಬಿ ಹರಿದರೇ, ಈ ನಿರ್ಮಲತೆ ಕೈಗೊಳ್ಳುವ ಅವಶ್ಯಕತೆ ಬರಲ್ಲ. ನದಿಗಳು ತಕ್ಕಮಟ್ಟಿಗೆ ಅವ್ಯಹಾತವಾಗಿ ಹರಿಯಬೇಕು. ಇಲ್ಲವಾದರೆ ಕಲುಷಿತವಾಗುವ ಸಂಭವ ಹೆಚ್ಚಿರುತ್ತದೆ. ಪರಿಸರ ನಾಶದಿಂದಲೇ ನದಿಗಳು ತನ್ನ ಮೂಲ ಸ್ವರೂಪ ಕಳೆದುಕೊಂಡು, ಅವನತಿ ಅಂಚಿನತ್ತ ಸಾಗುತ್ತಿವೆ’ ಎಂದರು.
‘ದೇಶದಲ್ಲಿರುವ ಎಲ್ಲ ನದಿಗಳ ಪೈಕಿ ಈಗಾಗಲೇ 200 ನದಿಗಳು ಭೂಪಟದಲ್ಲಿ ಕಾಣದಂತೆ ಹೋಗಿವೆ. 80 ನದಿಗಳು ಅಪಾಯದ ಅಂಚಿನಲ್ಲಿವೆ. ಸದ್ಯ ನದಿಗಳ ಮಲಿನತೆ ಸಮಸ್ಯೆ ಒಂದಾದರೇ,ನದಿಗಳು ಹರಿಯುವಿಕೆ ಸಮಸ್ಯೆ ಇನ್ನೊಂದು’ ಎಂದರು.
‘ಸಮೀಕ್ಷೆಗಳ ವರದಿಗಳ ಪ್ರಕಾರ ತುಂಗಾಭದ್ರ ನೀರು ಕುಡಿಯಲು ಯೋಗ್ಯವಿಲ್ಲ ಸ್ಥಿತಿಗೆ ತಲುಪಿದೆ. ಹೀಗೆ ಮುಂದುವರೆದರೇ, ಮನುಷ್ಯ ಸಂಪಾದನೆ ಮಾಡಿದ್ದು, ಆಸ್ಪತ್ರೆಗಳ ಖರ್ಚಿಗೆ ಮಾತ್ರ ಸಾಕಾಗುತ್ತವೆ. ಕೈಗಾರಿಕೆಗಳು ನೀರು ಸಂಸ್ಕರಿಸಿ ಬಿಟ್ಟರೇ, ಯಾವ ಸಮಸ್ಯೆಗಳು ಬರಲ್ಲ. ಇದನ್ನು ಇಲ್ಲಿನ ಕೈಗಾರಿಕೆಯವರು ಮಾಡಬೇಕು. ತುಂಗೆ ಉಳಿದರೇ ಮಾತ್ರ ನಾವು, ಇಲ್ಲವಾದವರೆ ನಾವಿಲ್ಲ’ ಎಂದು ಎಚ್ಚರಿಕೆ ಸಂದೇಶ ನೀಡಿದರು.
ಗಾಯತ್ರಿ ಪೀಠದ ದಯಾನಂದ ಸ್ವಾಮೀಜಿ, ಚರ್ಚ್ ಫಾದರ್ ಯೋಹಾನ್ ಬಾಬು, ಶಿವಮೊಗ್ಗದ ಗಿರೀಶ್ ಪಟೇಲ,
ಜೆ.ನಾಗರಾಜ, ಮಾಜಿ ಸಂಸದ ವಿರೂಪಾಕ್ಷಪ್ಪ ಸಿಂಧನೂರು, ಶಿವರಾಮೆಗೌಡ, ಸಂತೋಷ ಕೆಲೋಜಿ, ಜಗನ್ನಾಥ ಆಲಂ ಪಲ್ಲಿ, ಗಿರಿರಾಜ ಗುಪ್ತಾ, ಕಾಡ ಮಾಜಿ ಅಧ್ಯಕ್ಷ ತಿಪ್ಪೇರುದ್ರ ಸ್ವಾಮಿ, ಸೋಮನಾಥ ಪಟ್ಟಣಶೆಟ್ಟಿ, ಮಂಜುನಾಥ ಕಟ್ಟಿಮನಿ, ವಿಷ್ಣುತೀರ್ಥ ಜೋಶಿ, ಮಹೇಶ ಕುಮಾರ ಸೇರಿದಂತೆ ಪರಿಸರ ಪ್ರೇಮಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.
ತುಂಗಭದ್ರ ನದಿ ರಕ್ಷಣೆ ಪ್ರತಿಯೊಬ್ಬರ ಆದ್ಯ ಕರ್ತವ್ಯ. 2ನೇ ಹಂತದಲ್ಲಿ ಈಗಾಗಲೇ ತುಂಗಾಭದ್ರ ನದಿ ರಕ್ಷಣೆ ಅಭಿಯಾನ ಯಶಸ್ವಿಯಾಗಿ ನಡೆದಿದ್ದು ಖುಷಿಯಾಗಿದೆ. ಮುಂದಿನ ಪೀಳಿಗೆಗೆ ಉತ್ತಮ ಪರಿಸರ ಮತ್ತು ನದಿಗಳು ನೀಡುವುದು ನಮ್ಮೆಲ್ಲರ ಹೊಣೆಯಾಗಿದೆಪರಣ್ಣ ಮುನವಳ್ಳಿ ಮಾಜಿ ಶಾಸಕರು ಗಂಗಾವತಿ
ಗಂಗೆಯನ್ನು ದೇವತೆಗೆ ಹೋಲಿಸುತ್ತೇವೆ. ಅದರ ರಕ್ಷಣೆ ಮಾತ್ರ ಯಾರು ಮುಂದಾಗುತ್ತಿಲ್ಲ. ಸರ್ಕಾರ ಎಚ್ಚೆತ್ತು ತುಂಗಭದ್ರ ನದಿ ರಕ್ಷಣೆಗೆ ಚಿಂತನೆ ನಡೆಸಬೇಕುಶಿವಕುಮಾರ ಮಾಲಿಪಾಟೀಲ ಸಂಚಾಲಕ 3ನೇ ಹಂತದ ನಿರ್ಮಲ ತುಂಗಾಭದ್ರ ಅಭಿಯಾನ
ಜಾಗೃತಿಯ ಪಾದಯಾತ್ರೆ: ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಆರಂಭವಾದ ಕಿಷ್ಕಿಂಧಾ-ಮಂತ್ರಾಲಯದವರೆಗಿನ 3ನೇ ಹಂತದ ನಿರ್ಮಲ ತುಂಗಾಭದ್ರ ಅಭಿಯಾನದ ಜಾಗೃತಿ ಪಾದಯಾತ್ರೆ ಕೃಷ್ಣದೇವರಾಯ ವೃತ್ತದ ಮೂಲಕ ಚೆನ್ನಬಸವ ತಾತನ ಮಠದ ಮೂಲಕ ಜುಲೈ ನಗರಕ್ಕೆ ತೆರಳಿ ಸಮಾರೋಪವಾಯಿತು. ಎಂಎನ್ಎಂ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಲಿವ್ ವಿತ್ ಹ್ಯುಮುನಿಟ್ ಸದಸ್ಯರು ವಿಕಲಚೇತನರು ತುಂಗಾಭದ್ರ ನದಿ ರಕ್ಷಣೆ ಕುರಿತ ನಾಮಫಲಕಗಳನ್ನು ಹಿಡಿದು ಜಾಗೃತಿ ಮೂಡಿಸಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.