
ಕೊಪ್ಪಳ: ಮೂರ್ನಾಲ್ಕು ದಶಕಗಳ ಹಿಂದೆ ನೂರಾರು ಪೈಲ್ವಾನರ ತೋಳ್ಬಲವನ್ನು ಹೆಚ್ಚಿಸಿದ್ದ ಜಿಲ್ಲಾ ಕೇಂದ್ರದ ಹಲವು ಗರಡಿ ಮನೆಗಳು ಈಗ ಕಸದ ತೊಟ್ಟಿಗಳಾಗಿವೆ. ಅವುಗಳಲ್ಲಿ ಪ್ರಮುಖವಾಗಿದ್ದ ಹಲವು ವರ್ಷಗಳಿಂದ ಉಪಯೋಗಕ್ಕೆ ಬಾರದಂತಿದ್ದ ಮಿಟ್ಟಿಕೇರಿ ಓಣಿಯ ಗರಡಿ ಮನೆಯಲ್ಲಿ ಮಾತ್ರ ಈಗ ಮತ್ತೆ ಮಣ್ಣಿನ ಸುವಾಸನೆ ಘಮಘಮಿಸುತ್ತಿದೆ.
ಹಲವು ವರ್ಷಗಳ ಕಾಲ ಖಾಸಗಿಯವರ ಪಾಲಾಗಿದ್ದ, ನೋಡಲಷ್ಟೇ ಕುಸ್ತಿ ಕಲಿಕೆಯ ತರಬೇತಿ ಕೇಂದ್ರವಾಗಿದ್ದ ಗಡಿಯಾರ ಕಂಬದಿಂದ ಕೋಟೆ ರಸ್ತೆಯ ಮಾರ್ಗದ ಮಿಟ್ಟಿಕೇರಿಯ ಬಜಾರ ಗರಡಿ ಮನೆಯಲ್ಲಿ ಈಗ ಬಾಲ ಪೈಲ್ವಾನರ ತಾಲೀಮು ನಡೆಯುತ್ತಿದೆ. ಓದು, ಆಟ, ಮೊಬೈಲ್ ಹಾಗೂ ಬಿಡುವಿಲ್ಲದ ವೇಳಾಪಟ್ಟಿಯ ಭರಾಟೆಯಲ್ಲಿ ಮುಳುಗಿ ಹೋಗಿದ್ದ ಈಗಿನ ಮಕ್ಕಳು ಸಾಂಪ್ರದಾಯಿಕ ಮಣ್ಣಿನ ಕುಸ್ತಿ ಕಲಿತು ಪೈಲ್ವಾನರಾಗುವುದು ಸವಾಲಿನ ಕೆಲಸವೇ ಆಗಿದೆ. ಇಂಥ ಸವಾಲಿನ ಕೆಲಸಕ್ಕೆ ಮಕ್ಕಳನ್ನು ಅಣಿಗೊಳಿಸುವ ಕಸರತ್ತು ಮಿಟ್ಟಿಕೇರಿಯಲ್ಲಿ ನಡೆಯುತ್ತಿದೆ.
ಜಿಲ್ಲಾ ಕೇಂದ್ರದಲ್ಲಿ ಆರು ಗರಡಿ ಮನೆಗಳಿದ್ದು, ಬಹುತೇಕ ಹಾಳಾಗಿವೆ. ಶಾಸಕ ರಾಘವೇಂದ್ರ ಹಿಟ್ನಾಳ ತಮ್ಮ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಿಟ್ಟಿಕೇರಿ ರಸ್ತೆಯಲ್ಲಿರುವ ಹಳೆ ಗರಡಿ ಮನೆಯನ್ನು ಅಭಿವೃದ್ಧಿ ಪಡಿಸಲು ₹ 5 ಲಕ್ಷ ಅನುದಾನ ನೀಡಿದ್ದಾರೆ. ಇದರಿಂದಾಗಿ ಮಿಟ್ಟಿಕೇರಿ ‘ಪೈಲ್ವಾನರ ಮನೆ’ಯನ್ನು ಅಭಿವೃದ್ಧಿ ಮಾಡಿ ಹೊಸಮಣ್ಣು ಹಾಕಲಾಗಿದೆ. ಪ್ರವೇಶ ಗೋಡೆ, ಕಬ್ಬಿಣದ ಸರಳುಗಳ ಅಳವಡಿಕೆ, ವಿದ್ಯುತ್ ಸಂಪರ್ಕ, ಪೇಂಟ್, ತಾಲೀಮು ಮಾಡಲು ವಿವಿಧ ತೂಕಗಳ ಹಾಗೂ ಅಳತೆಗಳ ಕಟ್ಟಿಗೆಗಳನ್ನು ತಯಾರಿಸಿ ಇರಿಸಲಾಗಿದೆ.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಅಧೀನದಲ್ಲಿರುವ ಗರಡಿ ಮನೆ ನವೀಕರಣವಾದ ಬಳಿಕ ನಿತ್ಯ ಸಂಜೆ ಅಲ್ಲಿ ಮಕ್ಕಳು ಅಭ್ಯಾಸ ಮಾಡುತ್ತಿದ್ದಾರೆ. ಅನುಭವಿ ಪೈಲ್ವಾನರಾದ ಲಿಂಗಪ್ಪ ಮೂಲಿಮನಿ, ಲಕ್ಷ್ಮಪ್ಪ ಬಂಕಲ್, ಸಾದಿಕ್ ಅಲಿ ದಫೇದಾರ್ ಹೀಗೆ ಅನೇಕರು ಮಕ್ಕಳಿಗೆ ಕುಸ್ತಿ ಕಲಿಕಾ ಕೌಶಲ ಹೇಳಿಕೊಡುತ್ತಿದ್ದಾರೆ. ಈ ಪೈಲ್ವಾನರಲ್ಲಿ ಹಿರಿಯರಾದ ಲಿಂಗಪ್ಪ ಹಾಗೂ ಲಕ್ಷ್ಮಪ್ಪ ಅವರು ರಾಜ್ಯ ಮತ್ತು ಹೊರರಾಜ್ಯಗಳಿಗೆ ಹೋಗಿ ಕುಸ್ತಿ ಪಂದ್ಯಗಳಲ್ಲಿ ಆಡಿ ಪೌರುಷ ಮೆರೆದಿದ್ದಾರೆ. ತಾವೇ ಒಂದಷ್ಟು ಕುಸ್ತಿ ಸ್ಪರ್ಧೆಗಳನ್ನು ಆಯೋಜಿಸಿದ್ದಾರೆ. ಅನುಭವಿಗಳ ಪಾಠದಿಂದ ಬಾಲ ಪೈಲ್ವಾನರು ಸಾಮು ಹೊಡೆಯುವುದು, ವಿವಿಧ ತೂಕಗಳ ಕಟ್ಟಿಗೆ ಸಾಮಗ್ರಿ ಎತ್ತುವ ಕಸರತ್ತು ಕಲಿಯುತ್ತಿದ್ದಾರೆ.
ಮಿಟ್ಟಿಕೇರಿ ಓಣಿಯ ಗರಡಿ ಮನೆ ಮೇಲೊಂದು ಕೊಠಡಿಯಿದ್ದು, ಅಲ್ಲೇ ಉಳಿದುಕೊಂಡು ಮಕ್ಕಳಿಗೆ ತರಬೇತಿ ಕೊಡಿಸಲು ಕಾಯಂ ತರಬೇತುದಾರರನ್ನು ನೇಮಿಸುವುದು, ನಿಯಮಿತವಾಗಿ ಬೇಸಿಗೆ ಶಿಬಿರ ಆಯೋಜಿಸಲು ಇಲ್ಲಿನ ಕ್ರೀಡಾ ಇಲಾಖೆ ಮುಂದಾಗಿದೆ. ಸಾಕಷ್ಟು ಹಳೆಯದಾದ ಗರಡಿ ಮನೆಗಳು ಜಿಲ್ಲಾ ಕೇಂದ್ರದಲ್ಲಿದ್ದು, ಅವುಗಳನ್ನೂ ಅಭಿವೃದ್ಧಿ ಮಾಡಿದರೆ ನಾಲ್ಕೈದು ದಶಕಗಳ ಹಿಂದೆ ‘ಕೊಪಣ ನಗರಿ’ಯಲ್ಲಿದ್ದ ಕುಸ್ತಿ ವೈಭವ ಮರಳಿ ಬರಲು ಸಾಧ್ಯವಾಗುತ್ತದೆ. ಮಕ್ಕಳು ಹಾಗೂ ಯುವಜನತೆ ದುಶ್ಚಟದ ದಾಸ್ಯದಿಂದ ಹೊರಬಂದು ಆರೋಗ್ಯಕರ ದೇಹ ಹಾಗೂ ಮನಸ್ಸು ಬೆಳಸಿಕೊಳ್ಳಲು ಅನುಕೂಲವೂ ಆಗುತ್ತದೆ.
ಕುಸ್ತಿ ಕಲಿಕೆಯಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳ ಬಗ್ಗೆ ಈಗಿನ ಮಕ್ಕಳಿಗೆ ಹೇಳಿಕೊಟ್ಟರೆ ಅವರಿಗೂ ಆಸಕ್ತಿ ಬರುತ್ತದೆ. ಕಲಿಯುವವರ ಸಂಖ್ಯೆ ಹೆಚ್ಚಾಗುತ್ತದೆ-ಲಿಂಗಪ್ಪ ಮೂಲಿಮನಿ, ಹಿರಿಯ ಕುಸ್ತಿಪಟು
ಹಿಂದೆ ಮಿಟ್ಟಿಕೇರಿ ಓಣಿಯ ಜನರ ಸಹಾಯ ಪಡೆದು ಗರಡಿ ಮನೆ ಅಭಿವೃದ್ಧಿ ಮಾಡಲಾಗಿತ್ತು. ಈಗ ಸರ್ಕಾರದ ವತಿಯಿಂದ ಮಾಡಲಾಗಿದೆ. ಉಳಿದ ಗರಡಿ ಮನೆಗಳು ಕೂಡ ಅಭಿವೃದ್ಧಿಯಾಗಬೇಕು-ಲಕ್ಷ್ಮಪ್ಪ ಬಂಕಲ್, ಹಿರಿಯ ಪೈಲ್ವಾನ್
ಗರಡಿ ಮನೆ ಅಭಿವೃದ್ಧಿಯಾದ ಬಳಿಕ ಆಸಕ್ತಿಯಿಂದ ಕಲಿಯಲು ಮಕ್ಕಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಒಬ್ಬರನ್ನು ನೋಡಿ ಮತ್ತೊಬ್ಬರು ಬರುತ್ತಾರೆಸಾದಿಕ್ ಅಲಿ ದಫೇದಾರ್, ಕುಸ್ತಿ ತರಬೇತುದಾರ
ಕೊಪ್ಪಳದಲ್ಲಿ ಒಂದು ಗರಡಿ ಮನೆ ಅಭಿವೃದ್ಧಿಗೊಂಡಿದ್ದು ಅಲ್ಲಿ ಇಲಾಖೆ ವತಿಯಿಂದ ನಿರಂತರವಾಗಿ ಸ್ಪರ್ಧೆಗಳನ್ನು ಆಯೋಜಿಸಿ ಕಲಿಕಾ ಆಸಕ್ತಿ ಇರುವವರಿಗೆ ಪ್ರೋತ್ಸಾಹ ನೀಡಲಾಗುವುದು-ವಿಠ್ಠಲ ಜಾಬಗೌಡರ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ
ಕ್ಷೇತ್ರದ ಅನುದಾನದಲ್ಲಿ ಮಿಟ್ಟಿಕೇರಿ ಓಣಿಯ ಗರಡಿ ಮನಿ ಅಭಿವೃದ್ಧಿ ಮಾಡಲಾಗಿದೆ. ಅಲ್ಲಿ ಮಕ್ಕಳು ಉತ್ತಮವಾಗಿ ತರಬೇತಿ ಪಡೆದು ಮತ್ತಷ್ಟು ಜನ ಪೈಲ್ವಾನರು ಬರುವಂತೆ ಆಗಬೇಕು-ರಾಘವೇಂದ್ರ ಹಿಟ್ನಾಳ, ಶಾಸಕ