ADVERTISEMENT

ಸೀಗೆ ಹುಣ್ಣಿಮೆ | ಹುಲಿಗಿಯಲ್ಲಿ ಜನಸಂದಣಿ: ಭಕ್ತರ ಪರದಾಟ, ನೂಕಾಟ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2025, 0:39 IST
Last Updated 8 ಅಕ್ಟೋಬರ್ 2025, 0:39 IST
<div class="paragraphs"><p>ಸೀಗೆ ಹುಣ್ಣಿಮೆ ಅಂಗವಾಗಿ ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ಸಹಸ್ರಾರು ಭಕ್ತರು ಸ್ನಾನ ಮಾಡಿದರು </p></div>

ಸೀಗೆ ಹುಣ್ಣಿಮೆ ಅಂಗವಾಗಿ ಕೊಪ್ಪಳ ಜಿಲ್ಲೆಯ ಹುಲಿಗಿಯ ಹುಲಿಗೆಮ್ಮ ದೇವಿ ದೇವಸ್ಥಾನ ಬಳಿ ಹರಿಯುವ ತುಂಗಭದ್ರಾ ನದಿಯಲ್ಲಿ ಸಹಸ್ರಾರು ಭಕ್ತರು ಸ್ನಾನ ಮಾಡಿದರು

   

–ಪ್ರಜಾವಾಣಿ ಚಿತ್ರ/ಭರತ್ ಕಂದಕೂರ 

ಮುನಿರಾಬಾದ್‌ (ಕೊಪ್ಪಳ ಜಿಲ್ಲೆ): ಸೀಗೆ ಹುಣ್ಣಿಮೆ ಅಂಗವಾಗಿ ತಾಲ್ಲೂಕಿನ ಹುಲಿಗಿಯಲ್ಲಿರುವ ಹುಲಿಗೆಮ್ಮ ದೇವಿ ದರ್ಶನಕ್ಕೆ ಮಂಗಳವಾರ ಬಂದಿದ್ದ ಲಕ್ಷಾಂತರ ಭಕ್ತರು ದೇವಸ್ಥಾನದ ಸುತ್ತಲಿನ ಅವ್ಯವಸ್ಥೆಯಿಂದಾಗಿ ಪರದಾಡುವಂತಾಯಿತು.

ADVERTISEMENT

ಪ್ರತಿ ಮಂಗಳವಾರ, ಶುಕ್ರವಾರ ಮತ್ತು ಹುಣ್ಣಿಮೆ ದಿನಗಳಂದು ಹುಲಿಗೆಮ್ಮ ದೇವಿ ದರ್ಶನಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಬರುವುದು ಸಾಮಾನ್ಯ. ಆದರೆ ಈ ಬಾರಿ ಹುಣ್ಣಿಮೆ ಮತ್ತು ಮಂಗಳವಾರ ಎರಡೂ ಒಂದೇ ದಿನ ಬಂದಿದ್ದರಿಂದ ಪ್ರತಿಸಲಕ್ಕಿಂತಲೂ ಹೆಚ್ಚಿನ ಜನದಟ್ಟಣೆಯಿತ್ತು.

ಪ್ರವೇಶ ದ್ವಾರದಿಂದ ದೇವಸ್ಥಾನದ ತನಕ ಸಾಗುವ ಮಾರ್ಗದಲ್ಲಿ ಕೆಲವರು ರಸ್ತೆಯ ಮೇಲೆಯೇ ಪೂಜಾ ಸಾಮಗ್ರಿಗಳನ್ನು ಮಾರಾಟ ಮಾಡಿದ್ದರಿಂದ ದಟ್ಟಣೆ ಹೆಚ್ಚಾಗಿ ನಡೆದ ತಳ್ಳಾಟದಲ್ಲಿ ಕೆಲವು ಭಕ್ತರು ತೆಂಗಿನಕಾಯಿ ಮಾರುವ ವ್ಯಾಪಾರಿಗಳ ಮೇಲೆ ಬಿದ್ದರು. ಉಸಿರಾಡಲು ಕಷ್ಟವಾಗಿ ಪ್ರಜ್ಞಾಹೀನಳಾಗಿ ಬಿದ್ದ ಸಂಡೂರಿನ ಬಾಲಕಿಯನ್ನು ಸುತ್ತಲೂ ಇದ್ದವರೇ ಆಸ್ಪತ್ರೆಗೆ ಸೇರಿಸಿದರು. ಬಹುತೇಕರು ದೇವಿಯ ದರ್ಶನ ಪಡೆದ ಬಳಿಕವೇ ಊಟ ಮಾಡುವ ಸಂಪ್ರದಾಯ ಪಾಲಿಸಿಕೊಂಡು ಬಂದಿದ್ದು ಜನಸಂದಣಿಯಲ್ಲಿ ಉಸಿರಾಡಲೂ ಸಂಕಷ್ಟ ಎದುರಿಸಬೇಕಾದ ಸ್ಥಿತಿ ನಿರ್ಮಾಣವಾಗಿತ್ತು ಎಂದು ಭಕ್ತರು ಆಕ್ರೋಶ ಹೊರಹಾಕಿದರು. 

ಸೋಮವಾರ ರಾತ್ರಿಯಿಂದಲೇ ಭಕ್ತರು ಹುಲಿಗಿಗೆ ಬಂದಿದ್ದು, ದೇವಸ್ಥಾನದ ಹಿಂಭಾಗದಲ್ಲಿರುವ ತುಂಗಾಭದ್ರಾ ನದಿಯಲ್ಲಿ ಸ್ನಾನ ಮಾಡಿ ಬಂದವರು ಹಾಗೂ ಮುಂಭಾಗದ ಗೇಟ್‌ನಿಂದ ಬಂದ ಜನರನ್ನು ನಿಯಂತ್ರಿಸಲು ಪೊಲೀಸರು ಸಾಕಷ್ಟು ಪರದಾಟ ನಡೆಸಬೇಕಾಯಿತು. ಪೊಲೀಸರ ಸಂಖ್ಯೆಯೂ ಕಡಿಮೆಯಲ್ಲಿತ್ತು. ಪರಿಸ್ಥಿತಿ ಕೈ ಮೀರುತ್ತಿರುವ ಲಕ್ಷಣ ಕಂಡು ಬಂದ ಕಾರಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್‌ ಎಲ್‌. ಅರಸಿದ್ಧಿ ಸ್ಥಳಕ್ಕೆ ಬಂದು ಶಿಸ್ತುಬದ್ಧ ಸಂಚಾರಕ್ಕೆ ಕ್ರಮ ಕೈಗೊಂಡರು. ಈ ದೇವಸ್ಥಾನಕ್ಕೆ ರಾಜ್ಯದ ಜೊತೆಗೆ ಆಂಧ್ರ ಮತ್ತು ತೆಲಂಗಾಣದಿಂದಲೂ ಭಕ್ತರು ಬರುತ್ತಾರೆ.

ಮಂಗಳವಾರ ಹಾಗೂ ಹುಣ್ಣಿಮೆ ಎರಡೂ ಒಂದೇ ದಿನ ಬಂದಿರುವ ಕಾರಣ ಕನಿಷ್ಠ ಮೂರರಿಂದ ನಾಲ್ಕು ಲಕ್ಷ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿದ್ದರಿಂದ ಜನದಟ್ಟಣೆಯಾಗಿದೆ.
ಯು. ಎಚ್‌. ಪ್ರಕಾಶರಾವ್‌ ಕಾರ್ಯದರ್ಶಿ ಹುಲಿಗೆಮ್ಮದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.