ಕನಕಗಿರಿ: ‘2008ರಲ್ಲಿ ಸ್ಪರ್ಧಿಸಿದಾಗ ಮಾತು ಕೊಟ್ಟಂತೆ ಕನಕಗಿರಿಯನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಣೆ ಮಾಡಿ ಈಗ ತಾಲ್ಲೂಕು ಕಚೇರಿಯ ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ಅಡಿಗಲ್ಲು ಹಾಕುತ್ತಿರುವುದು ಸಂತಸ ತಂದಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ಇಲ್ಲಿನ ಗಂಗಾವತಿ-ಲಿಂಗಸೂರು ರಸ್ತೆಯ ತಬ್ರೇಜ್ ಬಳ್ಳಾರಿ ಅವರು ದಾನವಾಗಿ ನೀಡಿದ 3 ಎಕರೆ ಜಾಗದಲ್ಲಿ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
‘ಮುಂದಿನ ದಿನಗಳಲ್ಲಿ ಬಿಇಒ ಕಚೇರಿ ಸೇರಿದಂತೆ ತಾಲ್ಲೂಕು ಕೇಂದ್ರದಲ್ಲಿರಬೇಕಾದ ವಿವಿಧ ಇಲಾಖೆಯ ಕಚೇರಿಗಳನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.
ಈಗಾಗಲೇ ಪಟ್ಟಣಕ್ಕೆ ಬಸ್ ಡಿಪೊ ಹಾಗೂ ಅಗ್ನಿ ಶಾಮಕದಳ ಕಚೇರಿ ಮಂಜೂರು ಆಗಿದ್ದು ಕಟ್ಟಡ ನಿರ್ಮಾಣಕ್ಕೆ ಸ್ಥಳ ಗುರುತಿಸಲಾಗಿದ್ದು ಶೀಘ್ರದಲ್ಲಿಯೆ ಭೂಮಿ ಪೂಜೆ ನೆರವೇರಿಸಲಾಗುವುದು. ಪ್ರಜಾಸೌಧ ಕಟ್ಟಡ ನಿರ್ಮಾಣಕ್ಕೆ ₹ 8.60 ಕೋಟಿ ಬಿಡುಗಡೆಯಾಗಿದ್ದು 18 ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಲಾಗುವುದು’ ಎಂದರು.
‘ತಾಲ್ಲೂಕಿನ ಶಿರವಾರ ಗ್ರಾಮದ ಪರಿಸರದಲ್ಲಿ ಸ್ಥಾಪಿಸಲು ಯೋಜಿಸಿರುವ ತೋಟಗಾರಿಕೆ ಟೆಕ್ನಾಲಜಿ ಪಾರ್ಕ್ ಅಭಿವೃದ್ಧಿಗೊಳಿಸಲು ಕೆಕೆಆರ್‌ಡಿಬಿಯಲ್ಲಿ ₹ 10 ಕೋಟಿ ಮೀಸಲಿಡಲಾಗಿದೆ. ಪಾರ್ಕ್‌ಗೆ ಹೊಂದಿಕೊಂಡಿರುವ ಹೊಲಗಳ ಖರೀದಿ ಹಾಗೂ ಮೂಲ ಸೌಲಭ್ಯಗಳನ್ನು ಕಲ್ಪಿಸಲು ಈ ಅನುದಾನ ಬಳಕೆ ಮಾಡಲಾಗುತ್ತಿದೆ’ ಎಂದರು.
ಭೂದಾನಿ ತಬ್ರೇಜ್ ಬಳ್ಳಾರಿ, ಪ.ಪಂ. ಅಧ್ಯಕ್ಷೆ ಹುಸೇನಬೀ ಚಳ್ಳಮರದ, ತಹಶೀಲ್ದಾರ್ ವಿಶ್ವನಾಥ ಮುರುಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲ್ಲಬಾಗಿಲಮಠ ಗಂಗಾಧರಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ವಕ್ತಾರ ಶರಣಬಸಪ್ಪ ಭತ್ತದ, ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ,ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಕಂಠಿರಂಗ ನಾಯಕ, ಕೆಡಿಪಿ ಸದಸ್ಯ ನಾಗಪ್ಪ ಹುಗ್ಗಿ, ತಾ.ಪಂ.ಪ್ರಭಾರ ಇಒ ರಾಜಶೇಖರ ಇತರರು ಇದ್ದರು.
‘ಕುಡಿಯುವ ನೀರಿಗೆ ₹ 164 ಕೋಟಿ’
‘ತುಂಗಭದ್ರಾ ಎಡದಂಡೆ ಕಾಲುವೆ ಮೂಲಕ ಕನಕಗಿರಿ ಮತ್ತು ಕಾರಟಗಿಯಲ್ಲಿ 24X7 ಶುದ್ದ ಕುಡಿಯುವ ನೀರಿನ ಸೌಲಭ್ಯ ಒದಗಿಸಲು ₹ 164 ಕೋಟಿ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಪಟ್ಟಣದಲ್ಲಿ 100 ಬೆಡ್ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ₹ 42 ಕೋಟಿ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡಕ್ಕೆ ₹10 ಕೋಟಿ ಬಿಡುಗಡೆಯಾಗಿದೆ. ಸೂಳೇಕಲ್ ಹಾಗೂ ಹುಲಿಹೈದರ್ ಗ್ರಾಮಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಕ್ಕಡಂಕನಕಲ್ ಮುಸಲಾಪುರ ಹಾಗೂ ಹುಲಿಹೈದರ ಬೂದಗುಂಪಾಯರಡೋಣ ಗ್ರಾಮದಲ್ಲಿ ಪಿಯು ಕಾಲೇಜು ಮಂಜೂರು ಮಾಡುವಂತೆ ಪ್ರಸ್ತಾವ ಕಳಿಸಲಾಗಿದೆ’ ಎಂದು ಸಚಿವ ತಂಗಡಗಿ ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.