
ತುಂಗಭದ್ರಾ ಜಲಾಶಯದ ನೀರು ನೆಚ್ಚಿಕೊಂಡು ಕೃಷಿ ಚಟುವಟಿಕೆ ಮಾಡುವ ಕೊಪ್ಪಳ, ರಾಯಚೂರು, ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗಳ ಅನ್ನದಾತರಿಗೆ ಈಗ ಸಂಕಷ್ಟ ಎದುರಾಗಿದೆ. ಎರಡನೇ ಬೆಳೆಗೆ ನೀರು ಇಲ್ಲದ ಕಾರಣ ರೈತರು ಭತ್ತ ಕೃಷಿಯಿಂದ ಗಳಿಸುತ್ತಿದ್ದ ಆರ್ಥಿಕತೆಗೆ ಪೆಟ್ಟು ಬೀಳುತ್ತದೆ. ಇದು ಕೃಷಿ ಆರ್ಥಿಕತೆ ಮಾತ್ರವಲ್ಲ ಅಕ್ಕಿ ಗಿರಣಿಗಳು, ಕಾರ್ಮಿಕರು, ಗದ್ದೆಗಳನ್ನು ಗುತ್ತಿಗೆ ಪಡೆದು ವ್ಯವಸಾಯ ಮಾಡುತ್ತಿರುವ ಶ್ರಮಿಕರು, ಹೀಗೆ ಎಲ್ಲ ವರ್ಗದ ಮೇಲೂ ದುಷ್ಟರಿಣಾಮ ಬೀರುತ್ತದೆ. ಕಾರ್ಮಿಕರ ವಲಸೆ ಆತಂಕವೂ ಕಾಡುತ್ತಿದೆ. ಇವೆಲ್ಲ ಸಂಕಷ್ಟಗಳ ನಡುವೆಯೂ ಭತ್ತದ ಭೂಮಿಯಲ್ಲಿ ಹೊಸ ಬೆಳೆಗಳ ಪ್ರಯೋಗ ಮಾಡಲೂ ಇದು ಸಕಾಲವೆನಿಸಿದೆ. ಈ ಕುರಿತು ಕೊಪ್ಪಳ ಜಿಲ್ಲಾ ‘ಪ್ರಜಾವಾಣಿ’ ವರದಿಗಾರ ಪ್ರಮೋದ ಕುಲಕರ್ಣಿ ವಿಶ್ಲೇಷಿಸಿದ್ದಾರೆ.
* ಉದ್ಯೋಗವಿಲ್ಲದಾಗಿ ಕಾರ್ಮಿಕರಿಗೆ ಸಮಸ್ಯೆಯಾಗುತ್ತದೆ. ಗುಳೆ ಹೋಗುವ ಭೀತಿ ಎದುರಾಗಿದೆ.
* ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ವ್ಯಾಪ್ತಿಯಲ್ಲಿರುವ 250ಕ್ಕೂ ಹೆಚ್ಚು ಅಕ್ಕಿಗಿರಣಿಗಳಿಗೆ ಕೆಲಸವಿಲ್ಲದಂತಾಗುತ್ತದೆ. ಸಾವಿರಾರು ಕಾರ್ಮಿಕರು ಅತಂತ್ರರಾಗುತ್ತಾರೆ.
* 105.788 ಟಿಎಂಸಿ ಅಡಿ ನೀರು ಸಂಗ್ರಹಣಾ ಸಾಮರ್ಥ್ಯದ ತುಂಗಭದ್ರಾ ಜಲಾಶಯ ಅಭದ್ರತೆಯಿಂದ ಈಗ 80 ಟಿಎಂಸಿ ಅಡಿ ಮಾತ್ರ ನೀರು ಸಂಗ್ರಹಿಸಲಾಗುತ್ತಿದೆ. ಈ ಸಮಸ್ಯೆಯೇ ರೈತರಿಗೆ ಮುಳುವಾಗಿದೆ.
* ಎಲ್ಲ ಕ್ರಸ್ಟ್‌ಗೇಟ್‌ಗಳು ದುರಸ್ತಿಗೆ ಕಾದಿರುವ ಕಾರಣ ತುಂಗಭದ್ರಾ ಜಲಾಶಯ ಮಂಡಳಿ ಡಿಸೆಂಬರ್ 2ನೇ ವಾರದಿಂದ ಹೊಸ ಗೇಟ್ ಅಳವಡಿಸುವ ಯೋಜನೆ ರೂಪಿಸಿಕೊಂಡಿವೆ.
* ಎರಡನೇ ಬೆಳೆಗೆ ನೀರಿನ ಕೊರತೆ ಮಾತ್ರವಲ್ಲ; ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಹಲವು ಕಡೆ ಬಾಕಿ ಉಳಿದಿರುವ ಕಟಾವು ಪೂರ್ಣಗೊಳ್ಳುವುದರ ಒಳಗೆ ಮತ್ತೆ ಮಳೆ ಬಂದರೆ ಇರುವ ಫಸಲು ಹಾಳಾಗುವ ಆತಂಕ ರೈತರನ್ನು ಕಾಡುತ್ತಿದೆ.
* ಒಂದೇ ಬೆಳೆ ಸಾಕು ಜಲಾಶಯದ ಗೇಟ್‌ಗಳು ಗಟ್ಟಿಯಾಗಲಿ ಎನ್ನುವ ರೈತ ವರ್ಗವೂ ಇದೆ. ಕ್ರಮೇಣವಾಗಿ ದುಂಡಾಣು ರೋಗವೂ ಬಾಧಿಸುತ್ತಿದೆ. ರೋಗದ ಭೀತಿ ಮತ್ತು ಭೂಮಿಯ ಸವಕಳಿಯಿಂದಾಗಿ ಪ್ರಸ್ತುತ ಸರಾಸರಿ ಭತ್ತ ಪ್ರತಿ ಎಕರೆಗೆ 75 ಕೆ.ಜಿ.ಯ 25ರಿಂದ 30 ಚೀಲಗಳು ಮಾತ್ರ ಬರುತ್ತಿವೆ. ಆರ್‌ಎನ್‌ಆರ್1638 ತಳಿ ಮಾತ್ರ ಪ್ರತಿ ಎಕರೆಗೆ 40ರಿಂದ 45 ಚೀಲಗಳ ಫಸಲು ಲಭಿಸುತ್ತಿದೆ.
* ಎರಡನೆ ಬೆಳೆ ಕೊನೆಯ ವೇಳೆ ಮಳೆ ಗಾಳಿ ಕಾಡಿ ಬೆಳೆ ಹಾನಿಯಾಗುವ ಆತಂಕವೂ ರೈತನಲ್ಲಿದೆ. ಜಮೀನಿನ ಮಾಲೀಕನಿಗೆ ಸರ್ಕಾರದಿಂದ ಪರಿಹಾರ ಬರುತ್ತದೆ. ಗುತ್ತಿಗೆ ಆಧಾರದ ಮೇಲೆ ಕೃಷಿ ಮಾಡಿದವರಿಗೆ ಮತ್ತೆ ನಷ್ಟದ ಬರ ಕಾಡುತ್ತದೆ.
* 2024ರ ಆಗಸ್ಟ್‌ನಲ್ಲಿ ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್‌ಗೇಟ್ ಮುರಿದ ನಂತರ ಉಳಿದ ಗೇಟ್‌ಗಳ ಸಾಮರ್ಥ್ಯವೂ ಕುಸಿದು ಹೋಗಿದೆ ಎನ್ನುವ ವರದಿ ಬಂದ ತಕ್ಷಣವೇ ಎರಡೂ ಬೆಳೆಗೆ ನೀರು ಹರಿಸಲು ಅವಕಾಶವಿತ್ತು ಎನ್ನುವುದು ರೈತರ ವಾದ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ರೈತರಿಗೆ ನೀರು ಹರಿಸದ ಕಾರಣ ಅಕ್ಕಿ ಬೆಲೆ ಏರಿಕೆಯಾಗುವ ಸಾಧ್ಯತೆ ಹೆಚ್ಚಿದೆ. ಕೊಪ್ಪಳ ಜಿಲ್ಲೆಯಲ್ಲಿ ಕಾಡಾ ವ್ಯಾಪ್ತಿಯಲ್ಲಿ 35 ಸಾವಿರ ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶವಿದ್ದು ಇದರಲ್ಲಿ ಆರು ಸಾವಿರ ಹೆಕ್ಟೇರ್ ವಿಜಯನಗರ ಕಾಲುವೆ ವ್ಯಾಪ್ತಿಯಲ್ಲಿ ಬರುತ್ತದೆ. ಅಲ್ಲಿ ನೀರು ಸಿಗುತ್ತದೆ. ಉಳಿದ 29 ಸಾವಿರ ಹೆಕ್ಟೇರ್‌ಗೆ ನೀರಿಲ್ಲದೆ ತೊಂದರೆಯಾಗುತ್ತದೆ. ರಾಯಚೂರು ಜಿಲ್ಲೆಗೂ ನೀರಿನ ಬಿಸಿ ತಟ್ಟುತ್ತದೆ. ಎರಡನೇ ಬೆಳೆ ಇಲ್ಲದ ಕಾರಣ ರೈತರು ಮೊದಲ ಬೆಳೆಯ ಫಸಲು ಮಾರಾಟ ಮಾಡದೆ ತಮ್ಮಲ್ಲಿಯೇ ಉಳಿಸಿಕೊಂಡರೆ ಅಭಾವ ಸೃಷ್ಟಿಯಾಗುತ್ತದೆ. ಮೊದಲ ಬೆಳೆಯ ಫಸಲು ಮಾರಾಟ ಮಾಡಿ ಬಂದ ಹಣದಲ್ಲಿ ಎರಡನೇ ಬೆಳೆಗೆ ಹಣ ಖರ್ಚು ಮಾಡಲಾಗುತ್ತಿತ್ತು. ಈಗ ಅದಕ್ಕೆ ಅವಕಾಶವಿಲ್ಲದ ಕಾರಣ ಬಹಳಷ್ಟು ರೈತರು ಮೊದಲ ಬೆಳೆಯ ಫಸಲು ಮಾರಾಟ ಮಾಡುವುದಿಲ್ಲ. ಮಾರುಕಟ್ಟೆಯಲ್ಲಿ ಉತ್ಪನ್ನ ಕಡಿಮೆಯಾಗಿ ಬೆಲೆಯೂ ಹೆಚ್ಚಾಗುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ.
ಕೊಪ್ಪಳ ಹಾಗೂ ರಾಯಚೂರು ಜಿಲ್ಲೆಗಳ ಗದ್ದೆಗಳಲ್ಲಿ ಭತ್ತ ಬೆಳೆಯಲು ವಿಪರೀತ ರಸಗೊಬ್ಬರ ಬಳಕೆ ಮಾಡುತ್ತಿರುವುದರಿಂದ ಭೂಮಿಯ ಫಲವತ್ತತೆ ಕ್ರಮೇಣ ನಾಶವಾಗುತ್ತಲೇ ಸಾಗಿದೆ. ಈ ಎರಡೂ ಜಿಲ್ಲೆಗಳು ಸೇರಿ 8.75 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಪ್ರದೇಶ ಬಿತ್ತನೆ ಭೂಮಿಯಿದೆ. ಇದರಲ್ಲಿ ಕೊಪ್ಪಳ ಜಿಲ್ಲೆಯೊಂದರಲ್ಲೇ ಒಂದು ಲಕ್ಷಕ್ಕೂ ಹೆಚ್ಚು ಹೆಕ್ಟೇರ್ ಭೂಮಿ ಸವಳಾಗಿದೆ ಎಂದು ರೈತ ವಿಜ್ಞಾನಿಗಳು ಹೇಳುತ್ತಾರೆ. ಇದರಿಂದ ಇಳುವರಿ ಕಡಿಮೆಯಾಗುತ್ತಿದೆ. ಆದ್ದರಿಂದ ನೀರಿಲ್ಲದ ಈಗಿನ ಸಂಕಷ್ಟವನ್ನು ರೈತರು ಅವಕಾಶವನ್ನಾಗಿ ಬಳಸಿಕೊಂಡು ಉದ್ದು ಹೆಸರು ಮೆಕ್ಕಜೋಳ ಸಿರಿಧಾನ್ಯ ಸಾಸಿವೆ ಕಡಲೆ ಸೂರ್ಯಕಾಂತಿ ಸೆಣಬು ಕೆಂಪು ಮಣ್ಣಿನ ಭೂಮಿಯಲ್ಲಿ ತೋಟಗಾರಿಕಾ ಬೆಳೆಗಳಾದ ಕಬ್ಬು ಬಾಳೆ ಹಣ್ಣಿನ ಬೆಳೆಗಳನ್ನು ಬೆಳೆಯುಬಹುದು ಎನ್ನುತ್ತಾರೆ ಕೃಷಿ ತಜ್ಞರು. ‘ಈಗಾಗಲೇ ಸಾಕಷ್ಟು ಭೂಮಿ ಸವಕಲಾಗುತ್ತಿದೆ. ಆದ್ದರಿಂದ ಭತ್ತದಷ್ಟು ಲಾಭ ಸಿಗದಿದ್ದರೂ ಭೂಮಿ ಉಳಿವಿಗಾಗಿ ಪರ್ಯಾಯ ಬೆಳೆಗಳ ಪ್ರಯೋಗ ಮಾಡಬೇಕು. ಹಸಿರೆಲೆ ಗೊಬ್ಬರ ಬೆಳೆಸಿದರೆ ಅನುಕೂಲವಿದೆ. ಪರ್ಯಾಯವಾಗಿ ಬೆಳೆ ಬೆಳೆದರೆ ಭೂಮಿಯೂ ಉಳಿಯುತ್ತದೆ’ ಎಂದು ಗಂಗಾವತಿ ಕೃಷಿ ವಿಜ್ಞಾನ ಕೇಂದ್ರದ ರಾಘವೇಂದ್ರ ಎಲಿಗಾರ ಹೇಳುತ್ತಾರೆ.
ವ್ಯವಸಾಯದ ಬಗ್ಗೆ ಜ್ಞಾನವಿಲ್ಲದವರು ಕೈಗೊಂಡ ನಿರ್ಣಯ ಇದಾಗಿದೆ. ಜನಪ್ರತಿನಿಧಿಗಳು ಕೈಗೊಂಡ ಏಕಪಕ್ಷೀಯ ನಿರ್ಧಾರವಿದು. ನೀರಿನ ಅಭಾವವಾದರೂ ಪರ್ಯಾಯ ಬೆಳೆಗಳ ಬಗ್ಗೆಯಾದರೂ ರೈತರಿಗೆ ಹೇಳಬೇಕಿತ್ತು. ಕೃಷಿ ವಿಜ್ಞಾನಿಗಳು ವಿಶ್ವವಿದ್ಯಾಲಯದವರು ಈ ಸಮಯದಲ್ಲಿ ಸುಮ್ಮನಿರುವುದು ಸರಿಯಲ್ಲ-ಚಾಮರಸ ಮಾಲಿಪಾಟೀಲ, ರಾಜ್ಯ ರೈತ ಸಂಘದ ಗೌರವಾಧ್ಯಕ್ಷ ರಾಯಚೂರು ಜಿಲ್ಲೆ
ರೈತ ಹಾಗೂ ಸರ್ಕಾರದ ನಡುವೆ ಹೊಂದಾಣಿಕೆಯಿಲ್ಲದಂತಾಗಿದೆ. ರೈತನ ಮಾತು ಸರ್ಕಾರ ಕೇಳುವುದಿಲ್ಲ. ಸರ್ಕಾರದ ಇಂಗಿತ ನಮಗೆ ಒಪ್ಪಿಗೆಯಾಗುವುದಿಲ್ಲ. ಹೀಗಾಗಿ ಕೃಷಿಕರು ಪ್ರಕೃತಿ ವಿಕೋಪ ಹಾಗೂ ನೀರಿನ ಸಮಸ್ಯೆಯಿಂದಾಗಿ ಪ್ರತಿಸಲವೂ ಸಂಕಷ್ಟ ಎದುರಿಸುವಂತಾಗಿದೆ-ನಾರಾಯಣ ಈಡಿಗೇರ, ಕೃಷಿಕ ಕಾರಟಗಿ
ನೀರು ಬಿಡುವ ವಿಚಾರದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರ ರೈತರ ಪಾಲಿಗೆ ಮರಣ ಶಾಸನದಂತಿದೆ. ಮಳೆ ಬಂದು ಕಳೆದ ಬಾರಿ ಬೆಳೆ ಹಾನಿಯಾಗಿದೆ. ಮೂರು ತಿಂಗಳಲ್ಲಿ ಬೆಳೆ ಬರುತ್ತಿತ್ತು. ನೀರು ಕೊಟ್ಟಿದ್ದರೆ ಅನುಕೂಲವಾಗುತ್ತಿತ್ತು. ಸರ್ಕಾರ ರೈತರ ಪರವಾದ ನಿರ್ಣಯ ಕೈಗೊಳ್ಳಬೇಕಿತ್ತು-ಶರಣಪ್ಪ ನಾಗೋಜಿ ಸೋಮನಾಳ, ಕಾರಟಗಿ ತಾಲ್ಲೂಕು
ನೀರಾವರಿಗೆ ಸಂಬಂಧಿಸಿದಂತೆ ಮಂಡ್ಯ ಮೈಸೂರು ಭಾಗದಲ್ಲಿ ಸಣ್ಣ ಸಮಸ್ಯೆಯಾದರೂ ಜನಪ್ರತಿನಿಧಿಗಳು ತ್ವರಿತವಾಗಿ ದೊಡ್ಡಮಟ್ಟದಲ್ಲಿ ಸ್ಪಂದಿಸುತ್ತಾರೆ. ಆದರೆ ನಮ್ಮ ಭಾಗದ ಹೋರಾಟಕ್ಕೆ ಸ್ಪಂದನೆಯೇ ಸಿಗುವುದಿಲ್ಲ. ಈ ಪ್ರಾದೇಶಿಕ ತಾರತಮ್ಯ ಹೋಗಬೇಕು. ನೀರಿನ ಕೊರತೆಯಿಂದ ಭತ್ತ ಹಾಗೂ ಅಕ್ಕಿಯ ಬೆಲೆ ಹೆಚ್ಚಾಗುವುದರಲ್ಲಿ ಅನುಮಾನವಿಲ್ಲ-ಸಾವಿತ್ರಿ ಪುರುಷೋತ್ತಮ, ಅಕ್ಕಿ ಗಿರಣಿ ಮಾಲೀಕರ ಸಂಘದ ರಾಜ್ಯಾಧ್ಯಕ್ಷ ರಾಯಚೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.