ರಮೇಶ್ ಕತ್ತಿ ವಿರುದ್ಧ ವಾಲ್ಮೀಕಿ ಸಮುದಾಯದಿಂದ ಪ್ರತಿಭಟನೆ: ಪಂಜಿನ ಮೆರವಣಿಗೆ
ಕೊಪ್ಪಳ: ವಾಲ್ಮೀಕಿ ಸಮುದಾಯದ ಬಗ್ಗೆ ಮಾಜಿ ಸಂಸದ ರಮೇಶ ಕತ್ತಿ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದು, ಅವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ಗುರುವಾರ ರಾತ್ರಿ ಜಿಲ್ಲಾ ವಾಲ್ಮೀಕಿ ಮಹಾಸಭಾದ ಪ್ರಮುಖರು ನಗರದಲ್ಲಿ ಪಂಜಿನ ಮೆರವಣಿಗೆ ನಡೆಸಿದರು.
ವಾಲ್ಮೀಕಿ ಭವನದಿಂದ ಅಶೋಕ ವೃತ್ತದ ತನಕ ಮೆರವಣಿಗೆ ನಡೆಸಿದ ಬಳಿಕ ಮಾತನಾಡಿದ ಸಮುದಾಯದ ಮುಖಂಡ ಟಿ. ರತ್ನಾಕರ ‘ರಾಜ್ಯದ ಬಹುದೊಡ್ಡ ಸಂಖ್ಯೆಯ ವಾಲ್ಮೀಕಿ ಸಮುದಾಯವನ್ನು ನಿಂದಿಸುವ ಮೂಲಕ ರಮೇಶ್ ಕತ್ತಿ ದೊಡ್ಡ ತಪ್ಪು ಮಾಡಿದ್ದಾರೆ. ಸದಾ ಹೋರಾಟದ ಬದುಕನ್ನು ಸಾಗಿಸಿ ಶಾಂತಿ ಸೌಹಾರ್ದಕ್ಕೆ ಹೆಸರಾದ ನಮ್ಮ ಸಮುದಾಯವನ್ನು ಕೆದಕುವ ಮೂಲಕ ರಾಜ್ಯದಲ್ಲಿ ಶಾಂತಿ ಕದಡಿದ್ದಾರೆ’ ಎಂದರು.
ಮಹಾಸಭಾ ಅಧ್ಯಕ್ಷ ಕೆ ಎನ್ ಪಾಟೀಲ್, ಜಿಲ್ಲಾ ವಾಲ್ಮೀಕಿ ಗುರುಪೀಠದ ಧರ್ಮದರ್ಶಿ ರಾಮಣ್ಣ ಕಲ್ಲನವರ, ಮುಖಂಡರಾದ ಮಂಜುನಾಥ ಜಿ. ಗೊಂಡಬಾಳ, ಬಸವರಾಜ ಶಹಪೂರ, ಹನುಮೇಶ ನಾಯಕ, ರಾಮಣ್ಣ ಚೌಡಕಿ, ಶಿವಮೂರ್ತಿ ಗುತ್ತೂರ, ಕೊಟೇಶ ದದೇಗಲ್, ಜ್ಯೋತಿ ಎಂ. ಗೊಂಡಬಾಳ, ರಾಮಣ್ಣ ಬೆಳವಿನಾಳ, ಶಾಂತಪ್ಪ ಬೆಳವಿನಾಳ, ಸೋನು ವದಗನಾಳ, ಶರಣಪ್ಪ ಕನಕಗಿರಿ, ಭೀಮಣ್ಣ ಹವಳೆ, ನಾಗರಾಜ ಇದ್ಲಾಪೂರ, ವಿಶಾಲಾಕ್ಷಮ್ಮ ವಾಲ್ಮೀಕಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.