ADVERTISEMENT

ಪರಿಸರ ಉಳಿವಿನಿಂದ ಭೂ ರಕ್ಷಣೆ ಸಾಧ್ಯ: ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 15:34 IST
Last Updated 26 ಏಪ್ರಿಲ್ 2022, 15:34 IST
ಬೀದರ್‌ನಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಮಾತನಾಡಿದರು. ದೇವೇಂದ್ರ ಕಮಲ್, ಎಸ್‌.ವಿ.ಕಲ್ಮಠ, ವೀರಭದ್ರಪ್ಪ ಉಪ್ಪಿನ್ ಇದ್ದಾರೆ
ಬೀದರ್‌ನಲ್ಲಿ ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಮಾತನಾಡಿದರು. ದೇವೇಂದ್ರ ಕಮಲ್, ಎಸ್‌.ವಿ.ಕಲ್ಮಠ, ವೀರಭದ್ರಪ್ಪ ಉಪ್ಪಿನ್ ಇದ್ದಾರೆ   

ಬೀದರ್: ಪರಿಸರದ ಉಳಿವಿನಿಂದ ಮಾತ್ರ ಭೂ ರಕ್ಷಣೆ ಸಾಧ್ಯ ಎಂದು ಸಾಮಾಜಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ.ಪಾಟೀಲ ಹೇಳಿದರು.

ಗಾನಯೋಗಿ ಪಂಚಾಕ್ಷರ ಗವಾಯಿ ಸೇವಾ ಸಂಘ ಹಾಗೂ ಸಾಮಾಜಿಕ ಅರಣ್ಯ ವಿಭಾಗದ ಆಶ್ರಯದಲ್ಲಿ ನಗರದಲ್ಲಿ ಏರ್ಪಡಿಸಿದ್ದ ವಿಶ್ವ ಭೂ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನೈಸರ್ಗಿಕ ಸಂಪನ್ಮೂಲಗಳ ಅತಿಯಾದ ಬಳಕೆಯಿಂದ ಭೂಮಿ ಬರಡಾಗುತ್ತಿದೆ. ಹವಾಮಾನ ವೈಪರೀತ್ಯಗಳು ಉಂಟಾಗುತ್ತಿವೆ. ಅತಿವೃಷ್ಟಿ ಹಾಗೂ ಅನಾವೃಷ್ಟಿಗೆ ಕಾರಣವಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಭೂಮಿ ಉಳಿದರೆ ಮಾತ್ರ ಜೀವ ಸಂಕುಲ ಉಳಿಯುತ್ತವೆ ಎನ್ನುವುದನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳಬೇಕಿದೆ. ಗಿಡ ಮರಗಳನ್ನು ಬೆಳೆಸಿ ಪರಿಸರ ಸಂರಕ್ಷಣೆ ಮಾಡಬೇಕಾಗಿದೆ ಎಂದು ಹೇಳಿದರು.

ಅರಣ್ಯ ಇಲಾಖೆ ಕೇವಲ ಅರಣ್ಯ ಸಂರಕ್ಷಣೆ ಮಾಡುವ ಕೆಲಸವನ್ನು ಅಷ್ಟೇ ಮಾಡುತ್ತಿಲ್ಲ. ಕಾಡುವ ಬೆಳೆಸುವ ಕಾರ್ಯವನ್ನೂ ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಬೀದರ್ ಜಿಲ್ಲೆಯಲ್ಲಿ ಕಾಡು ಹೆಚ್ಚಾಗಿದೆ. ಭೂಮಿ ಮೇಲ್ಮೈ ಉಷ್ಣಾಂಶ ಕಡಿಮೆ ಮಾಡಲು ಮನೆಗೊಂದಾದರೂ ಸಸಿ ನೆಟ್ಟು ಬೆಳೆಸಬೇಕು ಎಂದು ಮನವಿ ಮಾಡಿದರು.

ಪ್ರೊ.ಎಸ್.ವಿ.ಕಲ್ಮಠ ಮಾತನಾಡಿ, ಸೌರ ಮಂಡಲದ ನವ ಗ್ರಹಗಳಲ್ಲಿ ಪೃಥ್ವಿಯಲ್ಲಿ ಎಲ್ಲ ಜೀವಿಗಳ ವಾಸವಿದೆ. ಜೀವ ಸಂಕುಲಕ್ಕೆ ಬೇಕಿರುವ ಮಣ್ಣು, ನೀರು, ಖನಿಜ ಇದೆ. ಸಕಲ ಪ್ರಾಣಿ, ಪಕ್ಷಿ ಹಾಗೂ ಸಸ್ಯ ಸಂಕುಲಕ್ಕೆ ಅಗತ್ಯವಿರುವ ಆಹಾರ ಇಲ್ಲಿದೆ ಎಂದರು.

ಭೂಮಿ ಶೇಕಡ 80ರಷ್ಟು ನೀರನ್ನು ತನ್ನ ಒಡಲಲ್ಲಿ ಇಟ್ಟುಕೊಂಡಿದೆ. ನಗರೀಕರಣ ಹಾಗೂ ಕೈಗಾರೀಕರಣದಿಂದ

ನೈಸರ್ಗಿಕ ಸಂಪನ್ಮೂಲಗಳು ಕಡಿಮೆಯಾಗುತ್ತ ಸಾಗಿವೆ. ಈಗಾಗಲೇ ಕಲ್ಲಿದ್ದಲು ಹಾಗೂ ಪೆಟ್ರೋಲ್‌ ಕೊರತೆ ಕಾಣಿಸತೊಡಗಿದೆ ಎಂದು ತಿಳಿಸಿದರು.

ನಿವೃತ್ತ ಅಧಿಕಾರಿ ವೀರಭದ್ರಪ್ಪ ಉಪ್ಪಿನ್‌ ಮಾತನಾಡಿ, ವಿಶ್ವ ಭೂ ದಿನಾಚರಣೆಯ ಪ್ರಯುಕ್ತ ಪರಿಸರ ಸಂರಕ್ಷಣೆ ಬಗ್ಗೆ ಪ್ರತಿಯೊಬ್ಬರಿಗೂ ತಿಳಿವಳಿಕೆ ನೀಡುವ ಅಗತ್ಯವಿದೆ ಎಂದು ಹೇಳಿದರು.

ಪ್ರೊ.ದೇವೇಂದ್ರ ಕಮಲ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ನಿರ್ದೇಶಕ ಮಹಾರುದ್ರಪ್ಪ ಆಣದೂರ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶಿವಕುಮಾರ ಗಜರೆ ಭಾಗವಹಿಸಿದ್ದರು. ಸುರೇಶ ಚಿಟಗುಪ್ಪಕರ್, ಸಂಜು ಸ್ವಾಮಿ ಇದ್ದರು. ಡಾ.ಬಿ.ಎಸ್.ಬಿರಾದಾರ ಸ್ವಾಗತಿಸಿದರು. ಶಿವಕುಮಾರ ರಾಠೋಡ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.