ADVERTISEMENT

ಆದಿಚುಂಚನಗಿರಿ ಜಾತ್ರೆ: ಚುಂಚಶ್ರೀಗಳ ಜ್ವಾಲಾಪೀಠಾರೋಹಣದ ಸಂಭ್ರಮ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 6:20 IST
Last Updated 2 ಮಾರ್ಚ್ 2026, 6:20 IST
   

ನಾಗಮಂಗಲ: ತಾಲ್ಲೂಕಿನ ಆದಿಚುಂಚನಗಿರಿಯಲ್ಲಿ ಜಾತ್ರಾ ಮಹೋತ್ಸವದ ಪ್ರಯುಕ್ತ ಭಾನುವಾರ ರಾತ್ರಿ ನಡೆದ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥಸ್ವಾಮೀಜಿ ಅವರ ಜ್ವಾಲಾಪೀಠಾರೋಹಣ ಮತ್ತು ಸಿದ್ಧಸಿಂಹಾಸನ ಪೂಜೆ ಅಪಾರ ಭಕ್ತರ ಸಮೂಹದೊಂದಿಗೆ ಶ್ರದ್ಧಾ ಭಕ್ತಿಯಿಂದ ಜರುಗಿತು.

ಜಾತ್ರಾ ದಿನದ ವಿಶೇಷವಾಗಿ ಭಾನುವಾರ ಕಾಲಭೈರವೇಶ್ವರ ಸ್ವಾಮಿಗೆ ಸುವರ್ಣ ಕವಚಾಲಂಕಾರ ಪೂಜೆ, ಗಂಗಾಧರೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ ನೆರವೇರಿತು.

ಜ್ವಾಲಾಪೀಠಾರೋಹಣ: ಜಾತ್ರಾ ಸಮಯದಲ್ಲಿ ಮಠದ ಪೀಠಾಧ್ಯಕ್ಷರು ಜ್ವಾಲಾಪೀಠಾರೋಹಣ ಮಾಡುವುದು ವಾಡಿಕೆ.

ADVERTISEMENT

ಆದಿಚುಂಚನಗಿರಿ ಕ್ಷೇತ್ರದಲ್ಲಿ ಪರಶಿವನು ಬಂದು ತಪಸ್ಸು ಮಾಡಿದ ಸ್ಥಳವೇ ಜ್ವಾಲಾಪೀಠ ಎಂಬ ಐತಿಹ್ಯವಿದೆ. ಅದರಂತೆ ಶ್ರೀಮಠದ ನಿರ್ಮಲಾನಂದನಾಥ ಸ್ವಾಮೀಜಿಯವರು ಭಾನುವಾರ ರಾತ್ರಿ ಸರ್ವಾಲಂಕಾರ ಭೂಷಿತರಾಗಿ ಜ್ವಾಲಾಪೀಠಕ್ಕೆ ಪೂಜೆ ಸಲ್ಲಿಸಿ ಜ್ವಾಲಾಪೀಠಾರೋಹಣ ಮಾಡಿ ಭಕ್ತರಿಗೆ ದರ್ಶನಾಶೀರ್ವಾದ ನೀಡಿದರು.

ನೆರೆದಿದ್ದ ಅಪಾರ ಭಕ್ತ ಸಮೂಹ ಪುಣ್ಯ ಘಳಿಗೆಗೆ ಸಾಕ್ಷಿಯಾದರು.

ಸಿದ್ಧಸಿಂಹಾಸನರೂಢರಾದ ಆದಿಶ್ರೀ: ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಚಿನ್ನದ ಕಿರೀಟದೊಂದಿಗೆ ಸರ್ವಾಲಂಕಾರ ಭೂಷಿತರಾಗಿದ್ದ ನಿರ್ಮಲಾನಂದನಾಥಶ್ರೀಗಳು ಶ್ರೀಮಠದ ಸಿದ್ಧ ಸಿಂಹಾಸನವನ್ನೇರಿ ಭಕ್ತರಿಗೆ ದರ್ಶನ ನೀಡುವುದಕ್ಕೂ ಮುನ್ನ, ಸಹಸ್ರಾರು ಭಕ್ತರ ನಡುವೆ ಶ್ರೀಮಠದ ವಟುಗಳ ವೇದ ಘೋಷಗಳ ಝೇಂಕಾರದೊಂದಿಗೆ ಮೆರವಣಿಗೆಯಲ್ಲಿ ಆಗಮಿಸಿದರು.

ಕಾಲಭೈರವೇಶ್ವರ ಸ್ವಾಮಿ ಮತ್ತು ಪರಿವಾರ ದೇವತೆಗಳಿಗೆ ಪೂಜೆ ಸಲ್ಲಿಸಿದ ಬಳಿಕ ಸಿದ್ಧ ಸಿಂಹಾಸನರೂಢರಾಗಿ ದರ್ಶನ ನೀಡಿದರು.

ಈ ವೇಳೆ ಶ್ರೀಮಠದ ವೇದಪಂಡಿತರು, ವಟುಗಳು, ಷೋಡೋಶೋಪಚಾರ ಪೂಜೆ ಪುರಸ್ಕಾರ ನೆರವೇರಿಸಿದರು.

ನಂತರ ಶ್ರೀಗಳು ಭಕ್ತರಿಗೆ ವಿಭೂತಿ ತಿಲಕವನ್ನಿಟ್ಟು ಹರಸಿ ಆಶೀರ್ವದಿಸಿದರು. ನಂತರ ಚಂದ್ರಮಂಡಲೋತ್ಸವ ಪೂಜೆ ನೆರವೇರಿತು.

ಶ್ರೀಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮೈಸೂರು ಶಾಖಾ ಮಠದ ಸೋಮೇಶ್ವರನಾಥ ಸ್ವಾಮೀಜಿ, ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ಶ್ರೀಮಠದ ಚೈತನ್ಯನಾಥಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಸಾಧು ಸಂತರು ಹಾಗೂ ಸಹಸ್ರಾರು ಮಂದಿ ಭಕ್ತರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.